ದುನಿಯಾ ವಿಜಿ ಬ್ಯಾನ್‌ಗೆ ನಿರ್ಮಾಪಕರ ಒತ್ತಾಯ
ಪ್ರತ್ಯೇಕ ಒಕ್ಕೂಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ನಟ ದುನಿಯಾ ವಿಜಿ ವಿರುದ್ಧ ನಿರ್ಮಾಪಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಬೆಂಗಳೂರು: ಪ್ರತ್ಯೇಕ ಒಕ್ಕೂಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ನಟ ದುನಿಯಾ ವಿಜಿ ವಿರುದ್ಧ ನಿರ್ಮಾಪಕರ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ನಿರ್ಮಾಪಕರು ದುನಿಯಾ ವಿಜಿ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ದುನಿಯಾ ವಿಜಿಗೆ ಸಾಮಾಜಿಕ ಬಹಿಷ್ಕಾರ ಹೇರಬೇಕು ಎಂದು ಆಗ್ರಹಿಸಿದ್ದಾರೆ.
ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ದುನಿಯಾ ವಿಜಿ ಅವರು, ಕಾರ್ಮಿಕರ ಮತ್ತು ಹೆಣ್ಣು ಮಕ್ಕಳ ತಂಟೆಗೆ ಬರುವವರನ್ನು ಸೀಮೆಎಣ್ಣೆ ಹಾಕಿ ಸುಟ್ಟುಬಿಡುತ್ತೇನೆ ಎಂದು ಹೇಳಿದ್ದರು. 'ಕೆಲ ನಿರ್ಮಾಪಕರ ಕಾರ್ಮಿಕರ ಒಕ್ಕೂಟವನ್ನು ಒಡೆದು ತಮಗೆ ಬೇಕಾದ ಬಣವನ್ನು ಬೆಂಬಲಿಸುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ತೊಂದರೆ ಕೊಟ್ಟರೆ ಅಥವಾ ಅಸಭ್ಯವಾಗಿ ನಡೆದುಕೊಂಡರೆ ಅಂತಹವರನ್ನು ಸುಮ್ಮನೆ ಬಿಡುವುದಿಲ್ಲ. ಅವರಿಗೆ ಒಂದು ಗತಿ ಕಾಣಿಸುತ್ತೇನೆ' ಎಂದು ವಿಜಿ ಹೇಳಿದ್ದರು.
ಆದರೆ ವಿಜಿ ಹೇಳಿಕೆ ಇದೀಗ ವಿವಾದಕ್ಕೆ ಗ್ರಾಸವಾಗಿದ್ದು, ನಿರ್ಮಾಪಕರ ಸಂಘ ದುನಿಯಾ ವಿಜಿ ಹೇಳಿಕೆಯನ್ನು ಖಂಡಿಸಿದೆ. ಅಲ್ಲದೆ ನಟ ದುನಿಯಾ ವಿಜಿ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದೆ.
ಯಾವ ಸಂಘದವರೂ ಬ್ಯಾನ್ ಮಾಡಲು ಸಾಧ್ಯವಿಲ್ಲ: ವಿಜಿ ತಿರುಗೇಟು
ತಮ್ಮ ವಿರುದ್ಧ ನಿರ್ಮಾಪಕರ ಸಂಘ ಬ್ಯಾನ್ ಮಾಡುವ ಕುರಿತು ಚಿಂತನೆ ನಡೆಸುತ್ತಿರುವ ಬಗಗೆ ಮಾತನಾಡಿದ ನಟ ದುನಿಯಾ ವಿಜಿ, ಯಾವ ಸಂಘದವರೂ ನನ್ನನ್ನು ಬ್ಯಾನ್ ಮಾಡಲು ಸಾಧ್ಯವಿಲ್ಲ. ಜನರೇ ನನ್ನನ್ನು ಬ್ಯಾನ್ ಮಾಡಬೇಕು ಅಷ್ಟೇ. ನಾನೇನು ರೌಡಿ ಅಲ್ಲ. ರೌಡಿ ಆಗಿ ನಾನು ಮಾತನಾಡಿಲ್ಲ. ಓರ್ವ ಕಾರ್ಮಿಕನಾಗಿ, ಕಾರ್ಮಿಕರ ಪರವಾಗಿ ಮಾತನಾಡಿದ್ದೇನೆ. 3500 ಚಲನಚಿತ್ರ ಕಾರ್ಮಿಕರ ಪರ ಹೋರಾಟ ಮಾಡುತ್ತಿದ್ದೇನೆ. ಎಲ್ಲರೂ ನಾಲ್ಕು ಗೋಡೆಗಳ ನಡುವೆ ಮಾತನಾಡುತ್ತಿದ್ದಾರೆ. ತಾಕತ್ತಿದ್ದರೆ ನನ್ನ ಎದುರುಗಡೆ ಬಂದು ಮಾತನಾಡಲಿ ಎಂದು ವಿಜಿ ಆಕ್ರೋಶಭರಿತರಾಗಿ ಮಾತನಾಡಿದರು.
ಅಂತೆಯೇ ತಮ್ಮ ವಿರುದ್ಧ ಎಚ್ಚರಿಕೆ ಪತ್ರ ಬರೆಯುತ್ತೇನೆಂಬ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರ ನಿಲುವಿನ ಕುರಿತು ಮಾತನಾಡಿದ ವಿಜಿ, ಎಲ್ಲವೂ ಪತ್ರಗಳಿಂದಲೇ ಪರಿಹಾರವಾಗುವುದಿಲ್ಲ. ಪತ್ರಗಳಿಂದಲೇ ಪರಿಹಾರವಾಗುವಂತಿದ್ದರೆ ಹೋರಾಟ ಬೇಕಿರಲಿಲ್ಲ. ಒಳ್ಳೆಯ ಕೆಲಸ ಮಾಡಿದಾಗ ಯಾರೂ ಪ್ರಶ್ನಿಸುವುದಿಲ್ಲ. ಕಾರ್ಮಿಕರ ಮತ್ತು ಹೆಣ್ಣುಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸುವವರನ್ನು ಸುಮ್ಮನೆ ಬಿಡುವುದಿಲ್ಲ. ನನನ್ನು ಕೆಣಕಬೇಡಿ ಎಂದು ದುನಿಯಾ ವಿಜಿ ಹೇಳಿದರು.
ಪ್ರತ್ಯೇಕ ಒಕ್ಕೂಟ ರಚನೆ ವಿಚಾರ ಚಿತ್ರರಂಗದಲ್ಲಿ ಕೋಲಾಹಲವನ್ನೇ ಎಬ್ಬಿಸಿದ್ದು, ಈ ಹಿಂದೆ ಚಿತ್ರರಂಗದ ಕೆಲ ದುರುಳರು ಹೆಣ್ಣುಮಕ್ಕಳನ್ನು ಅಸಭ್ಯವಾಗಿ ನಡೆಸಿಕೊಳ್ಳುತ್ತಿರುವ ಕುರಿತು ಮಾಧ್ಯಮಗಳಲ್ಲಿ ಬಹಿರಂಗವಾಗುವ ಮೂಲಕ ಕನ್ನಡ ಚಿತ್ರರಂಗ ಘನತೆ ಕ್ಷೀಣಿಸುವಂತೆ ಮಾಡಿತ್ತು. ಇದೀಗ ನಿರ್ಮಾಪಕ ಮತ್ತು ಕಾರ್ಮಿಕ ವರ್ತನೆಯಿಂದಾಗಿ ಅದು ಮತ್ತಷ್ಟು ಕಳೆಗುಂದುವುದು ಸ್ಪಷ್ಟ.
ಒಟ್ಟಾರೆ ಕೇವಲ ಲಾಭಾಕಾಂಕ್ಷೆಯನ್ನು ಪ್ರೀತಿಸುವ ನಿರ್ಮಾಪಕರಿಗಿಂತ ಚಿತ್ರ ಮತ್ತು ಕಾರ್ಮಿಕರನ್ನು ತಮ್ಮವರೆಂದು ಭಾವಿಸುವ ನಿರ್ಮಾಪಕರ ಮತ್ತು ನಿರ್ಮಾಪಕರ ಕುರಿತು ಚಿಂತಿಸುವ ನಟ, ಕಾರ್ಮಿಕರ ಅವಶ್ಯಕತೆ ಅಥವಾ ಅನಿವಾರ್ಯತೆ ಚಿತ್ರರಂಗಕ್ಕಿದೆ.