ನಾಳೆಯೊಳಗೆ ಬಾಕಿ ಹಣ ಪಾವತಿಸಿ: ಮಾಲೀಕರಿಗೆ ಸರ್ಕಾರದ ಎಚ್ಚರಿಕೆ
ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಸಭೆ ವಿಫಲವಾಗಿದ್ದು, ಪ್ರತಿ ಟನ್ ಕಬ್ಬಿಗೆ 2, 500 ರು. ನೀಡಲು ಮಾಲೀಕರು ನಿರಾಕರಿಸಿದ್ದಾರೆ.
ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಸಭೆ ವಿಫಲವಾಗಿದ್ದು, ಪ್ರತಿ ಟನ್ ಕಬ್ಬಿಗೆ 2, 500 ರು. ನೀಡಲು ಮಾಲೀಕರು ನಿರಾಕರಿಸಿದ್ದಾರೆ.
ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ಮತ್ತು ರೈತರ ಬಾಕಿ ಹಣ ಬಿಡುಗಡೆ ಕುರಿತು ಚರ್ಚಿಸಲಾಯಿತು. ರಾಜ್ಯ ಸರ್ಕಾರದ ಬೆಂಬಲ ಬೆಲೆ ಪ್ರಸ್ತಾಪಕ್ಕೆ ಕಾರ್ಖಾನೆ ಮಾಲೀಕರು ನಕಾರ ವ್ಯಕ್ತಪಡಿಸಿದ್ದು, ಪ್ರತಿ ಟನ್ ಕಬ್ಬಿಗೆ 2500 ರು.ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಇಂದಿನ ಸಭೆಯೂ ವಿಫಲವಾಗಿದೆ.
ಈ ನಡುವೆ ಕಾರ್ಖಾನೆ ಮಾಲೀಕರ ವರ್ತನೆಯಿಂದ ಬೇಸತ್ತಿರುವ ರಾಜ್ಯ ಸರ್ಕಾರ, ಕಾರ್ಖಾನೆ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಕಾರ್ಖಾನೆಗಳು ರೈತರಿಗೆ ನೀಬೇಕಾಗಿರುವ ಬಾಕಿ ಹಣವನ್ನು ಪಾವತಿಸುವಂತೆ ಹೇಳಿದ್ದು, ಇದಕ್ಕಾಗಿ ನಾಳೆಯವರೆಗೂ ಗಡುವು ನೀಡಿದೆ. ಅಲ್ಲದೆ ಸರ್ಕಾರ ಪ್ರಸ್ತಾಪಿಸಿರುವ ಪ್ರತಿ ಟನ್ ಕಬ್ಬಿಗೆ 2500 ಸಾವಿರ ರು. ನೀಡದಿದ್ದರೆ ಕೇಂದ್ರ ಮತ್ತು ರಾಜ್ಯ ಸಕ್ಕರೆ ಬೆಲೆ ನಿಯಂತ್ರಣ ಕಾಯ್ದೆಯ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ಮಾಲೀಕರನ್ನು ಜೈಲಿಗೂ ಕಳುಹಿಸಲಾಗುವುದು ಎಂದು ಸಕ್ಕರೆ ಸಚಿವ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ.
ಮೂಲಗಳ ಪ್ರಕಾರ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಸುಮಾರು 3.391.71 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದ್ದು, ಶೇ.15ರಷ್ಟು ಬಡ್ಡಿ ದರದೊಂದಿಗೆ ನಾಳೆಯೊಳಗೆ ಬಾಕಿ ಹಣವನ್ನು ಪಾವತಿ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.
ಸಿದ್ದರಾಮಯ್ಯಗೆ ಎಸ್.ಎಂ.ಕೃಷ್ಣಾ ಪತ್ರ
ಈ ನಡುವೆ ಇತ್ತ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ನಡೆಯುತ್ತಿದ್ದಂತೆಯೇ ಅತ್ತ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರು ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಮಂಡ್ಯ ಜಿಲ್ಲೆಯ ಕಬ್ಬು ಬೆಳಗಾರರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿ ಮಾಡಿಸುವಂತೆ ಕೃಷ್ಣಾ ಅವರು ಪತ್ರದಲ್ಲಿ ಕೋರಿದ್ದಾರೆ.