ಸಹರಾ ಮುಖ್ಯಸ್ಥರಿಗೆ ಮತ್ತೆ ಜೈಲೇ ಗತಿ
ಷೇರುದಾರರಿಗೆ ವಂಚಿಸಿದ ಆರೋಪದಡಿ ಬಂಧನಕ್ಕೀಡಾಗಿರುವ ಸಹಾರಾ ಸಂಸ್ತೆಯ ಮುಖ್ಯಸ್ಥ ಸುಬ್ರತೋ ರಾಯ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಮತ್ತೆ ತಿರಸ್ಕರಿಸಿದೆ.
ನವದೆಹಲಿ: ಷೇರುದಾರರಿಗೆ ವಂಚಿಸಿದ ಆರೋಪದಡಿ ಬಂಧನಕ್ಕೀಡಾಗಿರುವ ಸಹಾರಾ ಸಂಸ್ತೆಯ ಮುಖ್ಯಸ್ಥ ಸುಬ್ರತೋ ರಾಯ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಮತ್ತೆ ತಿರಸ್ಕರಿಸಿದೆ.
ಷೇರುದಾರರ ಹಣವನ್ನು ಹಿಂದಿರುಗಿಸಿದ ಅಥವಾ ಸಂಪೂರ್ಣವಾಗಿ ಹಿಂದುರುಗಿಸುವ ಭರವಸೆ ನೀಡಿದ ನಂತರವೇ ನಿಮಗೆ ಜಾಮೀನು ದೊರೆಯುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ ಜೈಲುವಾಸ ತಪ್ಪಿಸಿಕೊಳ್ಳಲು ನಿಮ್ಮ ಅತಿ ಬುದ್ಧಿವಂತಿಕೆಯನ್ನು ಉಪಯೋಗಿಸಬೇಡಿ ಎಂದೂ ಸುಪ್ರೀಂ ಕೋರ್ಟ್ ಖಾರವಾಗಿ ಪ್ರತಿಕ್ರಿಯಿಸಿದೆ.
ತಮ್ಮ ಸಮೂಹ ಸಂಸ್ಥೆಯ ವಿವಿಧ ವಿಭಾಗಗಲ್ಲಿ ಷೇರುದಾರರು ತೊಡಗಿಸಿರುವ ಸುಮಾರು 24000 ಸಾವಿರ ಕೋಟಿ ರುಪಾಯಿಗಳನ್ನು ಷೇರುದಾರರಿಗೆ ಹಿಂತಿರುಗಿಸದ ಹಿನ್ನಲೆಯಲ್ಲಿ ಸಹಾರಾ ಮುಖ್ಯಸ್ಥರನ್ನು ಬಂಧಿಸಲಾಗಿತ್ತು. ಈ ಹಿಂದೆ ತಮ್ಮ ವಯಸ್ಸಾದ ತಾಯಿಯ ಅನಾರೋಗ್ಯ ನೆಪವೊಡ್ಡಿ ಸುಬ್ರತೋ ರಾಯ್ ಅವರು ಜಾಮೀನು ಪಡೆಯಲು ಮುಂದಾಗಿದ್ದರು. ಆದರೆ ಸುಬ್ರತೋ ರಾಯ್ ಅವರ ನಡೆಯನ್ನು ಅರಿತಿದ್ದ ನ್ಯಾಯಾಲಯ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.
ಮತ್ತೆ ತಮ್ಮ ಪ್ರಯತ್ನವನ್ನು ಮುಂದುವರೆಸಿರುವ ಸುಬ್ರತೋ ರಾಯ್ ಅವರು, ಕಂತುಗಳ ಲೆಕ್ಕದಲ್ಲಿ ಷೇರುದಾರರಿಗೆ ಹಣ ನೀಡುತ್ತೇನೆ ಎಂಬ ಪ್ರಸ್ತಾಪ ಮುಂದಿಟ್ಟು ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಸುಬ್ರತೋ ರಾಯ್ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ್ದು, ಇದೊಂದು ಸಂಪೂರ್ಣ ಅವಾಸ್ತವಿಕ ಮತ್ತು ಕಾಲ್ಪನಿಕ ಪ್ರಸ್ತಾಪ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಅವರಿಗೆ ಈ ಬಾರಿಯೂ ಜಾಮೀನು ನಿರಾಕರಿಸಿದೆ.