ಕನ್ನಡ ಚಿತ್ರ ನಟ ರಘುವೀರ್ ನಿಧನ
ಕನ್ನಡ ಚಿತ್ರ ನಟ ರಘುವೀರ್ ಅವರು ತೀವ್ರ ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರ ನಟ ರಘುವೀರ್ ಅವರು ತೀವ್ರ ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.
ಇಂದು ಸಂಜೆ ಹೃದಯಾಘಾತಕ್ಕೊಳಗಾದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಹಿಂದೆ ಚೈತ್ರದ ಪ್ರೇಮಾಂಜಲಿ, ಶೃಂಗಾರ ಕಾವ್ಯ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ್ದ ರಘುವೀರ್ ಅವರು, ನಂತರ ಮುಗಿಲ ಚುಂಬನ. ಉಯ್ಯಾಲೆ, ನವೀಲೂರ ನೈದಿಲೆ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಇತ್ತೀಚೆಗೆ 2011ರಲ್ಲಿ ತೆರೆಕಂಡಿದ್ದ ಉಯ್ಯಾಲೆ ಚಿತ್ರವನ್ನು ಸ್ವತಃ ಅವರೇ ನಿರ್ಮಿಸಿದ್ದರು. 1993ರಲ್ಲಿ ಎಸ್.ನಾರಾಯಣ್ ನಿರ್ದೇಶನದ ಚೈತ್ರದ ಪ್ರೇಮಾಂಜಲಿ ಚಿತ್ರದ ಮೂಲಕ ರಘುವೀರ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 1994ರಲ್ಲಿ ತೆರೆಕಂಡಿದ್ದ ದೇವರಾಜ್ ಅಭಿನಯದ ನ್ಯಾಯಕ್ಕಾಗಿ ಸವಾಲ್ ಚಿತ್ರದಲ್ಲಿ ಎರಡನೇ ನಾಯಕರಾಗಿ ಮಿಂಚಿದ್ದರು. ತಮ್ಮ ವೃತ್ತಿ ಜೀವನದ ಉತ್ತಂಗದಲ್ಲಿದ್ದಾಗಲೇ ಚಿತ್ರರಂಗದಿಂದ ದೂರಾಗಿದ್ದ ರಘುವೀರ್ ಅವರು, 2010ರಲ್ಲಿ ವೇಶ್ಯಾಗೃಹದಲ್ಲಿ ಪೊಲೀಸರಿಗೆ ಸಿಕ್ಕಿ ಬೀಳುವ ಮೂಲಕ ತೀವ್ರ ಮುಜುಗರಕ್ಕೀಡಾಗಿದ್ದರು.
ರಘುವೀರ್ ಅವರು ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದು, ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.