ಬೆಂಗಳೂರಿನಲ್ಲಿ ಗ್ಯಾಂಗ್ ರೇಪ್!
ಮುಂಬೈ ಮೂಲದ ಯವತಿಯನ್ನು 6 ಜನರ ಗುಂಪು ಬೆಂಗಳೂರಿನಲ್ಲಿ ಅತ್ಯಾಚಾರವೆಸಗಿ ಬಿಸಾಡಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಂಗಳೂರು: ಮುಂಬೈ ಮೂಲದ ಯವತಿಯನ್ನು 6 ಜನರ ಗುಂಪು ಬೆಂಗಳೂರಿನಲ್ಲಿ ಅತ್ಯಾಚಾರವೆಸಗಿ ಬಿಸಾಡಿ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಮುಂಬೈ ಮೂಲದ ಯುವತಿಯೋರ್ವಳನ್ನು ನಿನ್ನೆ ರಾತ್ರಿ ಅಪಹರಿಸಿದ್ದ 6 ಮಂದಿ ಯುವಕರ ಗುಂಪು ಸಾಮೂಹಿಕ ಅತ್ಯಾಚಾರವೆಸಗಿ ಹೆಚ್ಎಸ್ಆರ್ ಲೇಔಟ್ ಬಳಿ ಎಸೆದು ಹೋಗಿದ್ದಾರೆ. ಈ ವಿಚಾರವನ್ನು ಸ್ವತಃ ಅತ್ಯಾಚಾರಕ್ಕೊಳಗಾದ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ತಾನು ಬೆಳ್ಳಂದೂರಿನಲ್ಲಿ ಕೆಲಸ ಮಾಡುತ್ತಿದ್ದು, ನಿನ್ನೆ ರಾತ್ರಿ ಕೆಲಸ ಮುಗಿಸಿ ತನ್ನ ರೂಮಿಗೆ ಹೊರಡುತ್ತಿದ್ದ ತನ್ನನ್ನು ಮಾರುತಿ ಓಮ್ನಿ ಕಾರಿನಲ್ಲಿ ಬಂದ 6 ಮಂದಿ ದುಷ್ಕರ್ಮಿಗಳು ಅಪಹರಿಸಿದ್ದರು. ಒಂದಷ್ಟು ದೂರ ಕರೆದುಕೊಂಡ ಹೋದ ಅವರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ. ಅಲ್ಲದೆ ತನ್ನನ್ನು ಹೆಚ್ಎಸ್ಆರ್ ಲೇಔಟ್ ಬಳಿ ಎಸೆದು ಹೋಗಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ.
ಯುವತಿಯಿಂದ ದೂರು ದಾಖಲಿಸಿಕೊಂಡ ಹೆಚ್ಎಸ್ಆರ್ ಬಡಾವಣೆ ಪೊಲೀಸರು ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲು ಮುಂದಾದಾಗ ಆಕೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು. ಆದರೆ ಆಕೆಯನ್ನು ಬಲವಂತವಾಗಿ ವಾಣಿವಿಲಾಸ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರವಾಗಿರುವುದು ಸ್ಪಷ್ಟವಾಗಿದೆ. ಆದರೆ ಪೊಲೀಸ್ ಮೂಲಗಳ ಪ್ರಕಾರ ಈ ಯುವತಿ ಓರ್ವ ವೇಶ್ಯೆಯಾಗಿದ್ದು, ಕಳೆದ ಹಲವು ವರ್ಷಗಳಿಂಗ ಹೈಟೆಕ್ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು ಎಂದು ತಿಳಿದುಬಂದಿದೆ.
ಅಲ್ಲದೆ ಈ ಹಿಂದಿನ ಆಕೆಯ ಕಾಲ್ ರೆಕಾರ್ಡ್ಸ್ಗಳನ್ನು ಪರೀಕ್ಷಿಸಿದಾಗ ಆಕೆ ನಿನ್ನೆ ಓರ್ವ ಮಧ್ಯವರ್ತಿಯನ್ನು ಸಂಪರ್ಕಿಸಿರುವ ಕುರಿತು ದಾಖಲೆಗಳು ಲಭ್ಯವಾಗಿವೆ. ಹೀಗಾಗಿ ಈ ಪ್ರಕರಣವು ಅತ್ಯಾಚಾರವೇ ಅಥವಾ ಅಕ್ರಮ ವೇಶ್ಯಾವಾಟಿಕೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಯುವತಿಯಿಂದ ಮಾಹಿತಿ ಪಡೆದಿರುವ ಪೊಲೀಸರು ಆ ಆರು ಮಂದಿ ಯುವಕರ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.