ಎನ್ ಸಿಪಿಗೆ ಆದಾಯ 'ತೆರಿಗೆ ಶಾಕ್'
ಬಾರಿ ಮೊತ್ತದ ಬ್ಯಾಂಕ್ ವಹಿವಾಟು ನಡೆಸಿದ ಆರೋಪದ ಮೇಲೆ ನ್ಯಾಷನಲ್ ಕಾಂಗ್ರೆಸ್ ಪಕ್ಷ..
ಮುಂಬೈ: ಬಾರಿ ಮೊತ್ತದ ಬ್ಯಾಂಕ್ ವಹಿವಾಟು ನಡೆಸಿದ ಆರೋಪದ ಮೇಲೆ ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್ ಸಿಪಿ)ಕ್ಕೆ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ಕೊನೆಯ ಹಂತ ತುಲುಪಿರುವಂತೆಯೇ ಆದಾಯ ತೆರಿಗೆ ಅಧಿಕಾರಿಗಳು ಎನ್ ಸಿಪಿ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ಭಾರಿ ಮೊತ್ತದ ಬ್ಯಾಂಕ್ ವಹಿವಾಟ ನಡೆಸಿದ ಆರೋಪ ಮೇಲೆ ಎನ್ ಸಿಪಿ ಪಕ್ಷಕ್ಕೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಈ ಬಗ್ಗೆ ಶೀಘ್ರ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.
ಕಳೆದ 2013ರ ಏಪ್ರಿಲ್ 2ರಿಂದ 2014 ಏಪ್ರಿಲ್ 9ರವರೆಗೆ ಎನ್ ಸಿಪಿ ಪಕ್ಷ ತನ್ನ ಚಾರ್ಟೆಡ್ ಅಕೌಂಟ್ ಸಂಸ್ಥೆಯ ಮೂಲಕವಾಗಿ ಸುಮಾರು 35 ಕೋಟಿ ರುಪಾಯಿ ವಹಿವಾಟು ನಡೆಸಿದೆ. ಇದೇ ಏಪ್ರಿಲ್ 24ರಂದು ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯ ಮತದಾನ ಕೂಡ ನಡೆದಿತ್ತು. ಹೀಗಾಗಿ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳಿಗೆ ಚುನಾವಣಾ ಅಕ್ರಮದ ವಾಸನೆ ಬಡಿದಿದ್ದು, ಈ ಬಗ್ಗೆ ವಿವರ ನೀಡುವಂತೆ ಎನ್ ಸಿಪಿ ಪಕ್ಷದ ಅಧ್ಯಕ್ಷ ಶರದ್ ಪವಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಈ ಬಗ್ಗೆ ಏಪ್ರಿಲ್ 23ರಂದೇ ಕೇಂದ್ರ ಆದಾಯ ತೆರಿಗೆ ಆಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರೂ, ವಿವರ ನೀಡಲು ತನಗೆ ಒಂದಷ್ಟು ಸಮಯಾವಕಾಶ ಬೇಕು ಎಂದು ಎನ್ ಸಿಪಿ ಪಕ್ಷ ಆದಾಯ ತೆರಿಗೆ ಇಲಾಖೆಯಲ್ಲಿ ಮನವಿ ಮಾಡಿಕೊಂಡಿದೆ.
ದಶಕಗಳಿಂದ ಯುಪಿಎ ಮೈತ್ರಿಕೂಟದ ಅಂಗಪಕ್ಷವಾಗಿರುವ ಎನ್ ಸಿಪಿ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿದೆ. ಇನ್ನು ಕೆಲವೇ ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭೆಗೂ ಚುನಾವಣೆ ನಡೆಯಲಿದೆ. ಹೀಗಾಗಿ ಪಕ್ಷಗಳ ಬ್ಯಾಂಕ್ ವಹಿವಾಟಿನ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತೀವ್ರನಿಗಾ ವಹಿಸಿದ್ದಾರೆ.