ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಔಷಧ ವಲಯದಲ್ಲಿ ಎಫ್ ಡಿಐ: ಇದು ಸಿಂಗ್ ಸರ್ಕಾರದ ಕೊನೆಯ ನಿರ್ಧಾರ

ಔಷಧ ವಲಯದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ನೀಡುವ ಮೂಲಕ ಮನಮೋಹನ್ ಸಿಂಗ್ ಅವರು ತಮ್ಮ ಪ್ರಧಾನಿ ಹುದ್ದೆಗೆ ತಾರ್ಕಿಕ ವಿದಾಯ ಹೇಳಿದ್ದಾರೆ.

Srinivasa Murthy VN
Updated On : 13 May 2014, 7:50 am

ನವದೆಹಲಿ: ಪ್ರಧಾನಿಯಾಗಿ ತಮ್ಮ ಕೊನೆಯ ಸಚಿವ ಸಂಪುಟ ಸಭೆ ನಡೆಸಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಔಷಧ ವಲಯದಲ್ಲಿ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ನೀಡುವ ಮೂಲಕ ತಮ್ಮ ಪ್ರಧಾನಿ ಹುದ್ದೆಗೆ ತಾರ್ಕಿಕ ವಿದಾಯ ಹೇಳಿದ್ದಾರೆ.

ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರಿಗೆ ಇಂದು ಕೊನೆಯ ದಿನವಾಗಿದ್ದು, ದಿನವಿಡೀ ಪ್ರಧಾನಿ ಮನಮೋಹನ್ ಸಿಂಗ್ ಅವರು ಬಹಳ ಚಟುವಟಿಕೆಯಿಂದ ಇದ್ದರು. ಇಂದು ಬೆಳಗ್ಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯಕ್ಕೆ ತೆರಳಿದ್ದ ಮನಮೋಹನ್ ಸಿಂಗ್ ಅವರು, ಕಾರ್ಯಾಲಯದ ಸಿಬ್ಬಂಧಿಗಳಿಗೆ ಮತ್ತು ಅಧಿಕಾರಿಗಳಿಗೆ ತಮ್ಮ ಧನ್ಯವಾದ ತಿಳಿಸಿದರು. ಅಂತೆಯೇ ಸಂಜೆ ತಮ್ಮ ಕೊನೆಯ ಸಂಪುಟ  ಸಭೆ ನಡೆಸಿದ ಮನಮೋಹನ್ ಸಿಂಗ್ ಅವರು ಕೆಲ ಮಹತ್ವದ ನಿರ್ಣಯಗಳನ್ನು ಕೈಗೊಂಡಿದ್ದಾರೆ.

ಈ ಪೈಕಿ ಭೂಸೇನಾ ಮುಖ್ಯಸ್ಥರಾಗಿ ದಲಬೀರ್ ಸಿಂಗ್ ಸುಹಾಗ್ ಅವರ ನೇಮಕ, ಔಷಧ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡುವ ಮಹತ್ವದ ನಿರ್ಣಯಗಳಿಗೆ ಮನಮೋಹನ್ ಸಿಂಗ್ ಅವರ ನೇತೃತ್ವದ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆ ಮೂಲಕ 2009ರಿಂದ 2014ರ ಅವಧಿಯ ತಮ್ಮ ಅಧಿಕಾರವನ್ನು ಮನಮೋಹನ್ ಸಿಂಗ್ ಅವರು ಸಂಪೂರ್ಣವಾಗಿ ನಿಭಾಯಿಸಿದ್ದಾರೆ.

ರಾಷ್ಟ್ರಪತಿ ಪ್ರಣಬ್ ರನ್ನು ಭೇಟಿ ಮಾಡಿದ ಸೋನಿಯಾ
ಇದೇ ವೇಳೆ ಅತ್ತ ಕೇಂದ್ರ ಸಚಿವ ಸಂಪುಟ ಸಭೆ ನಡೆಯುತ್ತಿದ್ದಂತೆಯೇ ಇತ್ತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದಾರೆ. ಪ್ರಸಕ್ತ ರಾಜಕೀಯ ಬೆಳವಣಿಗೆ ಮತ್ತು ಮುಂದಿನ ಕಾರ್ಯತಂತ್ರಗಳ ಕುರಿತು ಸೋನಿಯಾ ಗಾಂಧಿ ಅವರು ಪ್ರಣಬ್ ಮುಖರ್ಜಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಟ್ಟಾರೆ ಲೋಕಸಭಾ ಚುನಾವಣೆಯ ಮತದಾನ ಮುಗಿದು ಫಲಿತಾಂಶಕ್ಕಾಗಿ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆಯೇ ದೇಶದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement