ದಲ್‌ಬೀರ್ ಸಿಂಗ್ ನೂತನ ಭೂಸೇನಾ ಮುಖ್ಯಸ್ಥ
ಲೆಫ್ಟಿನೆಂಟ್ ಜನರಲ್ ದಲ್‌ಬೀರ್ ಸಿಂಗ್ ಸುಹಾಗ್ ಅವರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.
ನವದೆಹಲಿ: ಲೆಫ್ಟಿನೆಂಟ್ ಜನರಲ್ ದಲ್‌ಬೀರ್ ಸಿಂಗ್ ಸುಹಾಗ್ ಅವರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೇ ಜುಲೈ 31ರಂದು ದಲ್‌ಬೀರ್ ಸಿಂಗ್ ಅವರು ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಭೂಸೇನಾ ಮುಖ್ಯಸ್ಥರಾಗಿರುವ ಜ.ಬಿಕ್ರಂ ಸಿಂಗ್ ಅವರು ಜುಲೈ 31ರಂದು ನಿವೃತ್ತರಾಗಲಿದ್ದು, ಅಂದೇ ದಲ್‌ಬೀರ್ ಸಿಂಗ್ ಸುಹಾಗ್ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರತಿಪಕ್ಷ ಬಿಜೆಪಿ ತೀವ್ರ ವಿರೋಧವಿದ್ದರೂ ಭೂಸೇನಾ ಮುಖ್ಯಸ್ಥರನ್ನು ನೇಮಕ ಮಾಡುವ ಮೂಲಕ ಪ್ರಧಾನಿ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರ ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿದೆ. ಈ ಹಿಂದೆ ಯುಪಿಎ ಸರ್ಕಾರದಿಂದ ಭೂಸೇನಾ ಮುಖ್ಯಸ್ಥರ ನೇಮಕ ವಿಚಾರವನ್ನು ವಿರೋಧಿಸಿದ್ದ ಬಿಜೆಪಿ, ತಮ್ಮ ಅಧಿಕಾರದ ಅಂತಿಮ ಘಟದಲ್ಲಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭೂಸೇನಾ ಮುಖ್ಯಸ್ಥರನ್ನು ನೇಮಕ ಮಾಡುವ ನೈತಿಕತೆ ಇಲ್ಲ ಎಂದು ಹೇಳಿತ್ತು.
ಆದರೆ ಬಿಜೆಪಿ ಪಕ್ಷದ ತೀವ್ರ ವಿರೋಧದ ನಡುವೆಯೂ ಯುಪಿಎ ಸರ್ಕಾರ ಭೂಸೇನಾ ಮುಖ್ಯಸ್ಥರನ್ನು ನೇಮಕ ಮಾಡಿದೆ.