ಪ್ರಧಾನಿ ಸಿಂಗ್ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಪ್ರಧಾನಿಯಾಗಿ ತಮ್ಮ ಕೊನೆಯ ದಿನದ ಕಾರ್ಯ ನಿರ್ವಹಿಸಿದ ಡಾ.ಮನಮೋಹನ್ ಸಿಂಗ್ ಅವರಿಗೆ ಕಚೇರಿಯಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ನವದೆಹಲಿ: ಪ್ರಧಾನಿಯಾಗಿ ತಮ್ಮ ಕೊನೆಯ ದಿನದ ಕಾರ್ಯ ನಿರ್ವಹಿಸಿದ ಡಾ.ಮನಮೋಹನ್ ಸಿಂಗ್ ಅವರಿಗೆ ಕಚೇರಿಯಲ್ಲಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಸಂಸತ್ ಭವನದ ಸೌತ್ ಬ್ಲಾಕ್ನಲ್ಲಿರುವ ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ಇಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಗೌರವಯುತ ಬೀಳ್ಕೊಡುಗೆ ನೀಡಲಾಯಿತು. ಕಳೆದ 10 ವರ್ಷಗಳಿಂದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಇಂದು ತಮ್ಮ ಕೊನೆಯ ದಿನದ ಕಾರ್ಯವನ್ನು ನಿರ್ವಹಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೊಂಚ ಗದ್ಘದಿತರಾಗಿಯೇ ತಮ್ಮ ಸಿಬ್ಬಂದಿ ವರ್ಗವನ್ನು ಉದ್ದೇಶಿಸಿ ಮಾತನಾಡಿದರು. 'ನೀವು ದೇಶಕ್ಕಾಗಿ ಸೇವೆ ಸಲ್ಲಿಸಿದ್ದೀರಿ. ದೇವರು ನಿಮಗೆ ಒಳ್ಳೆಯದು ಮಾಡಲಿ' ಎಂದು ಹೇಳಿದರು.
ಪ್ರಧಾನಿಯಾಗಿ ತಮ್ಮ ಕೊನೆಯ ದಿನವಾದ ಇಂದು ಕಾರ್ಯ ನಿರ್ವಹಿಸುತ್ತಿರುವ ಮನಮೋಹನ್ ಸಿಂಗ್ ಅವರು, ನೂತನ ಸೇನಾ ಮುಖ್ಯಸ್ಥರನ್ನು ಆಯ್ಕೆ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಇದಕ್ಕೆ ಪ್ರತಿ ಪಕ್ಷ ಬಿಜೆಪಿ ತೊಡಕಾಗಿದ್ದು, ಸರ್ಕಾರದ ಕೊನೆಯ ದಿನಗಳಲ್ಲಿ ಇಂತಹ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದೆ.
ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ಬಿಜೆಪಿ ಮುಖಂಡ ರವಿಶಂಕರ್ ಪ್ರಸಾದ್ ಅವರು, ಕೇಂದ್ರದ ಯುಪಿಎ ಸರ್ಕಾರದ ಅವಧಿ ಅಂತ್ಯವಾಗುತ್ತಿರುವ ಈ ಹಂತದಲ್ಲಿ ಸೇನಾ ಮುಖ್ಯಸ್ಥರನ್ನು ನೇಮಕ ಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ನಾನು ಈ ಬಗ್ಗೆ ಯಾವುದೇ ಟೀಕೆ ಮಾಡುವುದಿಲ್ಲ. ಆದರೆ ಇಂತಹ ದೊಡ್ಡ ನಿರ್ಧಾರ ತೆಗೆದುಕೊಳ್ಳಲು ಡಾ.ಸಿಂಗ್ ಸರ್ಕಾರಕ್ಕೆ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದ್ದರು.
15ರಂದು ಸಿಂಗ್ ನಿವಾಸದಲ್ಲಿ ಔತಣಕೂಟ
ಅಂತೆಯೇ ಇದೇ ಮೇ 15ರಂದು ಅಂದರೆ ಫಲಿತಾಂಶ ಪ್ರಕಟವಾಗುವ ಒಂದು ದಿನ ಮುಂಚಿತವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಅಧಿಕಾರಿಗಳಿಗೆ ಔತಣಕೂಟವನ್ನು ಏರ್ಪಸಿದ್ದಾರೆ. ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಡಾ.ಸಿಂಗ್ ಈ ಔತಣಕೂಟವನ್ನು ಏರ್ಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸಿಬ್ಬಂದಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಡಾ.ಸಿಂಗ್ ಅವರ ಆಪ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ.
ನಾಳೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗಾಗಿ ತಮ್ಮ ನಿವಾಸದಲ್ಲಿ ಭೋಜನ ಕೂಟವನ್ನು ಆಯೋಜಿಸಿದ್ದಾರೆ. ಮೂಲಗಳ ಪ್ರಕಾರ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸಂಪುಟದ ಸಚಿವರು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಸಹಿ ಮಾಡಿರುವ ನೆನಪಿನ ಕಾಣಿಕೆಯನ್ನು ಡಾ.ಮನಮೋಹನ್ ಸಿಂಗ್ ಅವರಿಗೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಒಟ್ಟಾರೆ 10 ವರ್ಷಗಳ ಯುಪಿಎ ಆಡಳಿತ ತಾರ್ಕಿಕವಾಗಿ ಅಂತ್ಯವಾಗಿದ್ದು, ಸತತ 10 ವರ್ಷಗಳಿಂದ ಪ್ರಧಾನಿಯಾಗಿ ದೇಶಕ್ಕೆ ಸೇವೆ ಸಲ್ಲಿಸಿದ್ದ ಡಾ.ಮನಮೋಹನ್ ಸಿಂಗ್ ಅವರು, ಪ್ರಧಾನಿ ಹುದ್ದೆಯಿಂದ ಗೌರವಯುತವಾಗಿ ಇಳಿಯುತ್ತಿದ್ದಾರೆ.