ಬೆಂಗಳೂರು ಹೊರವಲಯದಲ್ಲಿ ಭೀಕರ ಸರಣಿ ಅಫಘಾತ
ಅತ್ತಿಬೆಲೆ ವೃತ್ತದಲ್ಲಿ ಭೀಕರ ಸರಣಿ ಅಪಘಾತವಾಗಿದ್ದು, ಅಡ್ಡಾದಿಡ್ಡಿ ಚಲಿಸಿದ ಸರಕು ಸಾಗಣೆ ಲಾರಿಯೊಂದು ಇಬ್ಬರ ಸಾವಿಗೆ ಕಾರಣವಾಗಿದೆ.
ಬೆಂಗಳೂರು: ಬೆಂಗಳೂರು ಹೊರವಲಯದ ಅತ್ತಿಬೆಲೆ ವೃತ್ತದಲ್ಲಿ ಭೀಕರ ಸರಣಿ ಅಪಘಾತವಾಗಿದ್ದು, ಅಡ್ಡಾದಿಡ್ಡಿ ಚಲಿಸಿದ ಸರಕು ಸಾಗಣೆ ಲಾರಿಯೊಂದು ಇಬ್ಬರ ಸಾವಿಗೆ ಕಾರಣವಾಗಿದೆ.
ಆನೇಕಲ್ ತಾಲೂಕಿನ ಅತ್ತಿಬೆಲೆ ವೃತ್ತದಿಂದ ಸರ್ಜಾಪುರ ಮಾರ್ಗವಾಗಿ ಚಲಿಸುತ್ತಿದ್ದ ಲಾರಿಯು ಒಟ್ಟು 7 ಬೈಕ್, 1 ನ್ಯಾನೋ ಕಾರು ಮತ್ತು ಒಂದು ಟಿಟಿಗೆ ಡಿಕ್ಕಿ ಹೊಡೆದಿದೆ. ಅತ್ತಿಬೆಲೆ ವೃತ್ತದ ಬಳಿ ಬೈಕ್‌ವೊಂದಕ್ಕೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕಿನಲ್ಲಿದ್ದ 52 ವರ್ಷದ ಪಾಪರೆಡ್ಡಿ ಎಂಬ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅದೇ ಬೈಕ್‌ನ ಹಿಂಬದಿಯಲ್ಲಿ ಕುಳಿತ್ತಿದ್ದ ಮತ್ತೋರ್ವ 30 ವರ್ಷದ ಜನಾರ್ಧನ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಸ್ಪರ್ಶ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಕೂಡ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಅಲ್ಲದೆ ಸರಣಿ ಅಪಘಾತದಲ್ಲಿ 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡ ಸ್ಪರ್ಶ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಅತ್ತಿಬೆಲೆ ವೃತ್ತದ ಅಪಘಾತದ ನಂತರ ಸುಮಾರು 2 ಕಿ.ಮಿ. ದೂರ ಸಾಗಿದ ಲಾರಿ ಬಿದರಕುಪ್ಪೆ ಗ್ರಾಮದ ಕೆರೆಯ ಮೇಲ್ಸೇತುವೆ ಮೇಲೆ ಟಿಟಿಗೆ ಡಿಕ್ಕಿಹೊಡೆದು ಕೆರೆಗೆ ಬಿದಿದ್ದೆ. ಲಾರಿಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಸ್ಥಳೀಯರು ಕೆರೆಗೆ ಲಾರಿ ಬೀಳುತ್ತಿದ್ದಂತೆಯೇ ಚಾಲಕನನ್ನು ಹೊರಗೆ ಎಳೆದು ತೀವ್ರವಾಗಿ ಥಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಅತ್ತಿಬೆಲೆ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರಿಂದ ತಪ್ಪಿಸಿಕೊಳ್ಳಲು ಅಡ್ಡಾದಿಡ್ಡಿ ಲಾರಿ ಚಾಲನೆ
ಸರಣಿ ಅಪಘಾತಕ್ಕೆ ಕಾರಣನಾದ ಇದೇ ಚಾಲಕ ಇದಕ್ಕೂ ಮೊದಲು ತಮಿಳುನಾಡು ಮತ್ತು ಕರ್ನಾಟಕ ಗಡಿಯಲ್ಲಿ ಮಹಿಳೆಯೊರ್ವಳ ಮೇಲೆ ಲಾರಿ ಹರಿಸಿದ್ದಾನೆ. ಈ ವೇಳೆ ಚೆಕ್‌ಪೋಸ್ಟ್ ಪೊಲೀಸರು ಲಾರಿಯನ್ನು ತಡೆಯಲು ಯತ್ನಿಸಿದಾಗ, ಲಾರಿಯನ್ನು ನಿಲ್ಲಿಸದೇ ಕರ್ನಾಟಕದತ್ತ ಲಾರಿ ಚಾಲನೆ ಮಾಡಿದ್ದಾನೆ, ಲಾರಿಯನ್ನು ಪೊಲೀಸರು ಹಿಂಬಾಲಿಸುತ್ತಿರುವ ವಿಚಾರ ತಿಳಿದ ಚಾಲಕ ಗಾಬರಿಯಿಂದ ಲಾರಿಯನ್ನು ಅತಿವೇಗವಾಗಿ ಚಲಾಯಿಸಿಕೊಂಡು ಕರ್ನಾಟಕಕ್ಕೆ ಬಂದಿದ್ದಾನೆ. ಈ ವೇಳೆ ಅತ್ತಿಬೆಲೆ ವೃತ್ತದಿಂದ ಸರ್ಜಾಪುರ ಮಾರ್ಗವಾಗಿ ನಗರ ಪ್ರವೇಶಿಸಿ ಸರಣಿ ಅಪಘಾತ ಮಾಡಿದ್ದಾನೆ.
ಟಿವಿಎಸ್ ಕಂಪನಿಗೆ ಸೇರಿದ್ದ ಲಾರಿ
ಇದೇ ವೇಳೆ ಸರಣಿ ಅಪಘಾತಕ್ಕೆ ಕಾರಣವಾದ ಲಾರಿ ತಮಿಳುನಾಡಿನ ಟಿವಿಎಸ್ ಕಂಪನಿಗೆ ಸೇರಿದ್ದು ಎಂದು ತಿಳಿದು ಬಂದಿದ್ದು, ಲಾರಿ ಚಾಲಕ ಕೂಡ ಅದೇ ಕಂಪನಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು ಎಂದು ತಿಳಿದಿದೆ. ಲಾರಿಯಲ್ಲಿ ಟಿವಿಎಸ್ ಸಂಸ್ಥೆಗೆ ಸೇರಿದ ಉಪಕರಣಗಳಿದ್ದು, ಅವುಗಳನ್ನು ಸರ್ಜಾಪುರ ರಸ್ತೆಯಲ್ಲಿರುವ ಕಂಪೆನಿಗೆ ತಲುಪಿಸಬೇಕಿತ್ತು. ಇಂದು ಬೆಳಗ್ಗೆ ತನ್ನ ಸಹೋದ್ಯೋಗಿಗಳೊಂದಿಗೆ ಜಗಳ ಮಾಡಿಕೊಂಡಿದ್ದ ಲಾರಿ ಚಾಲಕನು ಅದೇ ಮನಸ್ಥಿತಿಯಲ್ಲಿ ಲಾರಿ ಚಾಲನೆ ಮಾಡಿ ತಮಿಳುನಾಡು ಗಡಿಯಲ್ಲಿ ಮಹಿಳೆ ಮೇಲೆ ಲಾರಿ ಹರಿಸಿದ್ದಾನೆ, ಅಲ್ಲಿಂದ ಹಿಂಬಾಲಿಸಿಕೊಂಡು ಬಂದ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೆಂಗಳೂರಿನಲ್ಲಿಯೂ ಸರಣಿ ಅಪಘಾತ ಮಾಡಿದ್ದಾನೆ.