ಭಯೋತ್ಪಾದಕರೇಕೆ ಒಂದೇ ಕೋಮಿನವರಾಗಿರುತ್ತಾರೆ..?
ಭಯೋತ್ಪಾದಕರೇಕೆ ಒಂದೇ ಕೋಮಿನವರಾಗಿರುತ್ತಾರೆ ಎಂದು ಹೇಳುವ ಮೂಲಕ ಬಿಹಾರ ಬಿಜೆಪಿ..
ನವದೆಹಲಿ: ಭಯೋತ್ಪಾದಕರೇಕೆ ಒಂದೇ ಕೋಮಿನವರಾಗಿರುತ್ತಾರೆ ಎಂದು ಹೇಳುವ ಮೂಲಕ ಬಿಹಾರ ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು ಮತ್ತೆ ವಿವಾದವೊಂದರ ಕೇಂದ್ರಬಿಂದುವಾಗಿದ್ದಾರೆ.
ಈ ಹಿಂದೆ ನರೇಂದ್ರ ಮೋದಿ ಅವರನ್ನು ದ್ವೇಷಿಸುವವರು ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದ ಗಿರಿರಾಜ್ ಸಿಂಗ್ ಅವರು ಇಂದು ಮತ್ತೆ ಅಂಥಹುದೇ ಮತ್ತೊಂದು ವಿವಾದಕ್ಕೀಡಾಗಿದ್ದಾರೆ.
ಖಾಸಗಿ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಂಡಿದ್ದ ಗಿರಿರಾಜ್ ಸಿಂಗ್ ಅವರು, 'ಭಯೋತ್ಪಾದನಾ ಚಟುವಟಿಕೆಯಲ್ಲಿ ಸೆರೆಸಿಕ್ಕವರೆಲ್ಲರೂ ಒಂದೇ ಕೋಮಿಗೆ ಸೇರಿದವರಾಗಿರುತ್ತಾರೆ. ಇದು ಸತ್ಯವಲ್ಲವೇ..? ನಾನು ಯಾವುದೇ ಒಂದು ಕೋಮಿನ ವಿರುದ್ಧ ಮಾತನಾಡುತ್ತಿಲ್ಲ. ಆದರೆ ಇದು ಎಲ್ಲರಿಗೂ ತಿಳಿದಿರುವ ಸತ್ಯ. ಜಾತ್ಯಾತೀತರೆಂದು ಮುಖವಾಡ ಧರಿಸಿರುವವರೇಕೆ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.
ಗಿರಿರಾಜ್ ಸಿಂಗ್ ಅವರ ಹೇಳಿಕೆ ವಿಚಾರ ಇದೀಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಹಿಂದೆ ನರೇಂದ್ರ ಮೋದಿ ಅವರನ್ನು ಪ್ರಸನ್ನಗೊಳಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದ ಗಿರಿರಾಜ್ ಸಿಂಗ್ ಅವರಿಗೆ ಷರತ್ತುಬದ್ಧ ಜಾಮೀನು ಪಡೆದಿದ್ದರು. ಈ ಹಿಂದೆ ಬಿಜೆಪಿ ಮತ್ತು ಜೆಡಿಯು ಮೈತ್ರಿಕೂಟ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದ ಗಿರಿರಾಜ್ ಸಿಂಗ್ ಅವರು ಪದೇ ಪದೇ ಇಂತಹ ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಮಾಧ್ಯಮಗಳಿಗೆ ಮತ್ತು ವಿರೋಧ ಪಕ್ಷಗಳಿಗೆ ಆಹಾರವಾಗುತ್ತಿದ್ದಾರೆ.