ಮೋದಿ ಭೇಟಿ ಮಾಡಿದ 'ತ್ರಿವಳಿ' ನಾಯಕರು
ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನು ಕೇವಲ 2 ದಿನಗಳಿರುವಂತೆ ಬಿಜೆಪಿ ಹಿರಿಯ ನಾಯಕರು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಅಹ್ಮದಾಬಾದ್: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನು ಕೇವಲ 2 ದಿನಗಳಿರುವಂತೆ ಬಿಜೆಪಿ ಹಿರಿಯ ನಾಯಕರು ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಇಂದು ಗುಜರಾತ್‌ನ ಗಾಂಧಿನಗರದಲ್ಲಿರುವ ನರೇಂದ್ರ ಮೋದಿ ಅವರ ನಿವಾಸಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಅರುಣ್ ಜೇಟ್ಲಿ ಅವರು ಆಗಮಿಸಿದ್ದಾರೆ. ಸುಮಾರು 1 ಗಂಟೆಗೂ ಅಧಿಕ ಕಾಲ ಸಭೆ ನಡೆಸಿದ ನಾಯಕರು, ಫಲಿತಾಂಶದ ನಂತರದ ರಣತಂತ್ರಗಳ ಕುರಿತು ಚರ್ಚಿಸಿದ್ದಾರೆ.
ಈ ಸಭೆಯಲ್ಲಿ ಪ್ರಮುಖವಾಗಿ ಬಿಜೆಪಿ ಪಕ್ಷಕ್ಕೆ ಬಹುಮತ ಲಭಿಸಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಸಂದರ್ಭ ಬಂದರೆ ಪಕ್ಷದ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅವರಿಗೆ ನೀಡಬಹುದಾದ ಸ್ಥಾನಗಳ ಸಾಧ್ಯತೆಗಳ ಕುರಿತು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಅಂತೆಯೇ ಸಂಪೂರ್ಣ ಬಹುಮತಕ್ಕೆ ಅಗತ್ಯವಾದ ಸ್ಥಾನಗಳ ಕೊರತೆಯುಂಟಾಗಿ ಇತರೆ ಪಕ್ಷಗಳ ಬೆಂಬಲ ಅಗತ್ಯವಾದರೆ ಯಾವ ಯಾವ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು..? ಎಂಬ ಅಂಶಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ.
ಅಂತೆಯೇ ಪ್ರಸ್ತುತ ಸಭೆಯಲ್ಲಿ ಬೆಂಬಲ ನೀಡಲು ಮುಂದಾಗಿರುವ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಮತ್ತು ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಪಕ್ಷಗಳ ಕುರಿತು ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು, 'ಎಲ್ಲ ವಿಚಾರಗಳನ್ನು ದೂರವಾಣಿ ಮೂಲಕ ಮಾತನಾಡಲು ಸಾಧ್ಯವಿಲ್ಲ. ಚುನಾವಣೆ ಮತ್ತು ಫಲಿತಾಂಶಗಳು ಸೇರಿದಂತೆ ಪಕ್ಷದ ಕುರಿತು ಚರ್ಚಿಸಬೇಕಿದ್ದ ಹಲವು ವಿಚಾರಗಳನ್ನು ನಾವು ಚರ್ಚಿಸಿದ್ದೇವೆ. ಚುನಾವಣಾ ಫಲಿತಾಂಶದ ಕುರಿತು ನಾವು ಸಕಾರಾತ್ಮಕವಾಗಿದ್ದು, ಜನಾದೇಶ ಬಿಜೆಪಿ ಪಕ್ಷದ ಪರವಾಗಿರಲಿದೆ ಎಂಬ ವಿಶ್ವಾಸ ನಮಗಿದೆ' ಎಂದು ಹೇಳಿದರು.
ಒಟ್ಟಾರೆ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಸಕಾರಾತ್ಮಕವಾಗಿರುವ ಬಿಜೆಪಿ, ಸರ್ಕಾರದ ರೂಪುರೇಷೆಯತ್ತ ಗಮನ ಕೇಂದ್ರೀಕರಿಸಿದೆ. ಅಂತೆಯೇ ಪಕ್ಷದ ಹಿರಿಯ ನಾಯಕರಿಗೆ ನೀಡಬೇಕಾದ ಸ್ಥಾನಗಳ ಕುರಿತಾಗಿಯೂ ಬಿಜೆಪಿ ತಲೆಕೆಡಿಸಿಕೊಂಡಿದೆ.