ವಿನಾ ಕಾರಣ ಪತ್ರಕರ್ತರನ್ನು ಭಾರತಕ್ಕೆ ಅಟ್ಟಿದ ಪಾಕ್
ಭಾರತದ ಇಬ್ಬರು ಪತ್ರಕರ್ತರು ದೇಶ ತೊರೆಯಬೇಕು ಎಂದು ಪಾಕಿಸ್ತಾನ ಸರ್ಕಾರ ಸೂಚನೆ ನೀಡಿದೆ.
ಇಸ್ಲಾಮಾಬಾದ್: ಭಾರತದ ಇಬ್ಬರು ಪತ್ರಕರ್ತರು ದೇಶ ತೊರೆಯಬೇಕು ಎಂದು ಪಾಕಿಸ್ತಾನ ಸರ್ಕಾರ ಸೂಚನೆ ನೀಡಿದೆ.
'ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ' (ಪಿಟಿಐ)ದ ಸ್ನೇಹೇಶ್ ಅಲೆಕ್ಸ್ ಫಿಲಿಪ್ಸ್ ಮತ್ತು 'ದಿ ಹಿಂದೂ' ಪತ್ರಿಕೆಯ ಮೀನಾ ಮೆನನ್ ಎಂಬ ಪತ್ರಕರ್ತರನ್ನು ಪಾಕಿಸ್ತಾನ ಭಾರತಕ್ಕೆ ಮರಳುವಂತೆ ಸೂಚನೆ ನೀಡಿದೆ. ನಿನ್ನೆ ರಾತ್ರಿ ಈ ಕುರಿತು ಸೂಚನೆ ರವಾನಿಸಿರುವ ಪಾಕಿಸ್ತಾನ ಸರ್ಕಾರ ಮೇ 20ರೊಳಗೆ ದೇಶ ತೊರೆಯುವಂತೆ ಹೇಳಿದೆ.
ಪತ್ರಕರ್ತರನ್ನು ವಾಪಸ್ ಕಳುಹಿಸುವ ತನ್ನ ನಿರ್ಧಾರಕ್ಕೆ ಪಾಕ್ ಸರ್ಕಾರ ಯಾವುದೇ ಕಾರಣಗಳನ್ನು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ಕಳೆದ ಆಗಸ್ಟ್ ತಿಂಗಳಿನಿಂದ ಈ ಇಬ್ಬರು ಪತ್ರಕರ್ತರು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ವೀಸಾ ಅವಧಿ ಮಾರ್ಚ್ ತಿಂಗಳಿಗೆ ಅಂತ್ಯವಾಗಿತ್ತು. ಆದರೆ ಈಗಾಗಲೇ ಈ ಇಬ್ಬರು ಪತ್ರಕರ್ತರು ವಿಸಾ ಅವಧಿ ವಿಸ್ತರಣೆಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿಯು ಪರಿಶೀಲನೆಯಲ್ಲಿದೆ.
ಪಾಕಿಸ್ತಾನ ಸರ್ಕಾರ ಹೇಳಿರುವಂತೆ ಈ ಇಬ್ಬರು ಪತ್ರಕರ್ತರ ವೀಸಾ ಅವಧಿ ವಿಸ್ತರಣೆಗೊಳ್ಳದಿರಲು ಯಾವುದೇ ಕಾರಣಗಳನ್ನೂ ನೀಡಿಲ್ಲ. ಹೀಗಾಗಿ ಈ ಇಬ್ಬರು ಪತ್ರಕರ್ತರನ್ನು ಅವರ ಸ್ವದೇಶಕ್ಕೆ ವಾಪಸಾಗುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದೆ. ಆದರೆ ಈ ಪ್ರಕರಣದ ಕುರಿತು ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾರತ ಮತ್ತು ಪಾಕಿಸ್ತಾನ ದೇಶಗಳು ತಲಾ ಇಬ್ಬರು ಪತ್ರಕರ್ತರಿಗೆ ಅವಕಾಶ ನೀಡಿದ್ದು, ಇವರು ಆಯಾ ದೇಶದ ಸುದ್ದಿಗಳನ್ನು ತಮ್ಮ ತಮ್ಮ ದೇಶದ ಸುದ್ದಿ ಸಂಸ್ಥೆಗಳಿಗೆ ರವಾನಿಸುತ್ತಿರುತ್ತಾರೆ.