ಕರ್ನಾಟಕ ಮತದಾರನ ಆಯ್ಕೆ ಯಾರು?
ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ನಂಬರ್ ಗೇಮ್ ಶುರುವಾಗಿದ್ದು, ಕರ್ನಾಟಕ ಮತದರಾನ ಆಯ್ಕೆ ಯಾರು ಎಂಬ ಜಿಜ್ಞಾಸೆ ಹುಟ್ಟಿಸಿದೆ.
ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ರಾಜಕೀಯ ಪಕ್ಷಗಳಲ್ಲಿ ನಂಬರ್ ಗೇಮ್ ಶುರುವಾಗಿದ್ದು, ಕರ್ನಾಟಕ ಮತದರಾನ ಆಯ್ಕೆ ಯಾರು ಎಂಬ ಜಿಜ್ಞಾಸೆ ಹುಟ್ಟಿಸಿದೆ.
ಇತ್ತೀಚೆಗೆ ವಿವಿಧ ಸಮೀಕ್ಷೆಗಳು ನೀಡಿದ್ದ ವರದಿಗಳು ಕರ್ನಾಟಕದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಹೆಚ್ಚಿನ ಸ್ಥಾನಗಳು ಲಭ್ಯವಾಗುವ ಕುರಿತು ಮಿಶ್ರ ಫಲಿತಾಂಶವನ್ನು ಊಹಿಸಿದ್ದು, ನಾಳಿನ ಫಲಿತಾಂಶದ ಕುರಿತ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಿಸಿವೆ. ಇತ್ತ ಸಿದ್ಧರಾಮಯ್ಯ ಅವರ ನೇತೃತ್ವದ ಆಡಳಿತಾ ರೂಢ ಕಾಂಗ್ರೆಸ್ ಪಕ್ಷ ತಾವೇ ಅತಿ ಹೆಚ್ಚು ಸ್ಥಾನಗಳಿಸುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದರೆ, ಅತ್ತ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿ ವಿವಾದಗಳಿಂದಲೇ ಅಧಿಕಾರದಿಂದ ಇಳಿದಿದ್ದ ಬಿಜೆಪಿ ಮೈಕೊಡವಿ ಎದ್ದುನಿಂತಿದೆ. ಆ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಾನೇ ಹೆಚ್ಚು ಸ್ಥಾನಗಳಿಸುವ ವಿಶ್ವಾಸ ಹೊಂದಿದೆ.
1.ರುಗೆ ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ, ಕ್ಷೀರಭಾಗ್ಯ ಯೋಜನೆ, ಭಾಗ್ಯಜ್ಯೋತಿ ಯೋಜನೆಗಳ ಮೂಲಕ ಜನತೆಗೆ ಹತ್ತಿರವಾಗಿದ್ದೇವೆ ಎಂದು ಬೀಗುತ್ತಿರುವ ಸಿದ್ದು ಅಂಡ್ ಟೀಮ್ ಮೇಲೆ ಅಲ್ಪಸಂಖ್ಯಾತರಿಗೆ ಶಾದಿ ಭಾಗ್ಯ ಯೋಜನೆ, ಮೂಢನಂಬಿಕೆ ಪ್ರತಿಬಂಧಕ ಯೋಜನೆ, ಕಡಿಮೆ ಬೆಲೆಯ ಮದ್ಯದ ಪ್ರಸ್ತಾಪ, ಕಳಂಕಿತರಿಗೆ ಮಣೆಹಾಕಿದ ವಿವಾದಗಳೂ ಕಾಂಗ್ರೆಸ್ ಪಕ್ಷದ ಮೇಲಿವೆ. ಇತ್ತ ವಚನಭ್ರಷ್ಟತೆ ಮತ್ತು ಅನುಕಂಪದ ಆಧಾರದ ಮೇಲೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ, ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರ ಎಂಬ ಕೀರ್ತಿ ಪಾತ್ರವಾಯಿತಾದರೂ, ಅದೂ ಕೂಡ ವಿವಾದಗಳಿಂದ ಹೊರತಾಗಿರಲಿಲ್ಲ.
ತನ್ನ ಆಡಳಿತದ ಆರಂಭದಲ್ಲಿಯೇ ರೈತರ ಮೇಲಿನ ಗೋಲಿಬಾರ್ ಪ್ರಕರಣ ಬಿಜೆಪಿ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗಿ ಪರಿಣಿಮಿಸಿತ್ತು. ಈ ವಿವಾದ ಮರೆಯಾಗುವ ಮುನ್ನವೇ ತನ್ನ ಆಂತರಿಕ ಕಚ್ಚಾಟ, ಭ್ರಷ್ಟಾಚಾರ ಹಗರಣ, ಅಕ್ರಮ ಗಣಿಗಾರಿಕೆ, ಲೋಕಾಯುಕ್ತ ವಿಚಾರಣೆ, ಸದನದಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸಿದ ಶಾಸಕರು, ಅಕ್ರಮ ಡಿನೋಟಿಫಿಕೇಶನ್ ಪ್ರಕರಣ ಮತ್ತು ಒಂದೇ ಸರ್ಕಾರದಲ್ಲಿ ಮೂರು ಭಾರಿ ಮುಖ್ಯಮಂತ್ರಿಗಳ ಬದಲಾವಣೆಯಂತಹ ವಿಚಾರಗಳು ಎಷ್ಟು ಬೇಗ ಬಿಜೆಪಿ ಖ್ಯಾತಿಗಳಿಸಿತೋ ಅಷ್ಟೇ ವೇಗವಾಗಿ ಅದು ಕುಖ್ಯಾತಿಗೆ ಒಳಗಾಗುವಂತೆ ಮಾಡಿತು. ಅಲ್ಲದೆ ಪಕ್ಷದ ಹಿರಿಯ ಮತ್ತು ಪ್ರಬಲ ನಾಯಕರಾಗಿದ್ದ ಯಡಿಯೂರಪ್ಪ ಅವರು ಪಕ್ಷ ತೊರೆದ ವಿಚಾರ ಬಿಜೆಪಿ ಪಕ್ಷಕ್ಕೆ ದುಬಾರಿಯಾಯಿತು.
ಇದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇದು ಅರಿವಾಗಿತ್ತು. ಇದೀಗ ತನ್ನ ಹಳೆಯ ತಪ್ಪುಗಳಿಂದ ಎಚ್ಚೆತ್ತುಕೊಂಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ಪಕ್ಷ ತೊರೆದಿದ್ದ ಯಡಿಯೂರಪ್ಪ ಮತ್ತು ಶ್ರೀರಾಮುಲುರಂತಹ ನಾಯಕರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಮೈಕೊಡವಿ ನಿಂತು ಲೋಕಸಭಾ ಚುನಾವಣೆಯನ್ನು ಎದುರಿಸಿದೆ. ಇನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ ಕೂಡ ಹಲವೆಡೆ ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದನ್ನು ನಾವು ಮರೆಯಬಾರದು.
ರಾಜಕೀಯ ಚಾಣಾಕ್ಷರೆಂದೇ ಕರೆಯಲಾಗುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಗ್ರಾಮವಾಸ್ತವ್ಯದಂತಹ ಜನಪ್ರಿಯ ಕಾರ್ಯಕ್ರಮಗಳಿಂದ ಸುದ್ದಿಯಾಗಿದ್ದ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ, ಇದೇ ಮೊದಲ ಬಾರಿಗೆ ರಾಜಕೀಯ ಅಕಾಡಕ್ಕೆ ಧುಮುಕಿರುವ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿ ಮತ್ತು ಖ್ಯಾತ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರಂತಹ ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಿರುವ ಜೆಡಿಎಸ್ ಕೂಡ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸಬಹುದು.
ಮೋದಿ ಅಲೆ ರಾಜ್ಯದಲ್ಲಿಯೂ ಪ್ರಕಾಶಿಸುತ್ತದೆ ಎನ್ನುವ ಭರವಸೆಯೊಂದಿಗೆ ಬಿಜೆಪಿ ಇದ್ದರೆ, ಜೆಡಿಎಸ್ ಕೂಡ ನಾನೇನು ಕಡಿಮೆ ಇಲ್ಲ ಎನ್ನುವಂತಿದೆ. ಇನ್ನು ಸಿದ್ದರಾಮಯ್ಯ ವರ್ಚಸ್ಸು ಮತ್ತು ಸರ್ಕಾರದ ಯೋಜನೆಗಳ ಮೂಲಕವೇ ಚುನಾವಣೆ ಎದುರಿಸುವ ಮೂಲಕ ತಾನೂ ಕೂಡ ಅತಿ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇನೆ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಪಕ್ಷ ಇದೆ. ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಡಳಿತ ಸುಸೂತ್ರವಾಗಿ ನೆರವೇರಲು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲೇಬೇಕಾದ ಅನಿವಾರ್ಯಕ್ಕೆ ಸಿಲುಕಿದೆ.
ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವೆಂದು ಕಾಂಗ್ರೆಸ್ ಪಕ್ಷದ ಮುಖಂಡರು ವಾದಿಸುತ್ತಿದ್ದರೂ, ಚುನಾವಣಾ ಫಲಿತಾಂಶ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಡಳಿತದ ಮೇಲೆ ಪರಿಣಾಮ ಬೀರುವುದಂತೂ ಖಚಿತ. ಈ ಹಿಂದೆ ಮಾಧ್ಯಮ ವರದಿಗಳಂತೆ ಕಾಂಗ್ರೆಸ್ ಹೈಕಮಾಂಡ್, 'ಹೆಚ್ಚಿನ ಸ್ಥಾನ ಗೆಲ್ಲಿ ಅಥವಾ ಕುರ್ಚಿ ಬಿಡಿ' ಎಂದು ಕಾಂಗ್ರೆಸ್ ಆಡಳಿತದಲ್ಲಿರುವ ಎಲ್ಲ ಮುಖ್ಯಮಂತ್ರಿಗಳಿಗೂ ಸೂಚನೆ ನೀಡಿತ್ತು. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಲ್ಲಗಳೆದರಾದರೂ, ಪ್ರಸಕ್ತ ಲೋಕಸಭಾ ಚುನಾವಣೆ ಸಿದ್ದು ಪಾಲಿಗೆ ಮಾತ್ರ ನಿರ್ಣಾಯಕ ಪಾತ್ರವಹಿಸಲಿದೆ.
ಅಂತೆಯೇ ರಾಜ್ಯದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಪ್ರತಿಷ್ಟಿತ ಕ್ಷೇತ್ರಗಳೆಂದು ಪರಿಗಣಿತವಾಗಿರುವ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿರುವ ಕಾಂಗ್ರೆಸ್‌ನ ನಂದನ್ ನಿಲೇಕಣಿ, ಬಿಜೆಪಿಯ ಅನಂತ್ ಕುಮಾರ್, ಗುಲ್ಬರ್ಗಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ, ಹಾಸನ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯದ ಮೇಲೆಯೂ ನಾಳಿನ ಫಲಿತಾಂಶ ಪರಿಣಾಮ ಬೀರಲಿದೆ.
ಹೀಗಾಗಿ ನಾಳಿನ ಚುನಾವಣಾ ಫಲಿತಾಂಶ ಕೇವಲ ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲದೆ ಇಡೀ ದೇಶದ ಜನರ ನಿರೀಕ್ಷೆಯನ್ನು ಹೆಚ್ಚಿಸಿದೆ. ನಾಳಿನ ಫಲಿತಾಂಶ ದೇಶದ ಜನತೆಯ ಭವಿಷ್ಯವನ್ನು ಬದಲಿಸುತ್ತದೆಯೋ ಇಲ್ಲವೋ ತಿಳಿದಿಲ್ಲ. ಆದರೆ ರಾಜಕೀಯ ನಾಯಕರ ಭವಿಷ್ಯವನ್ನಂತು ಬದಲಿಸುವುದರಲ್ಲಿ ಎರಡು ಮಾತಿಲ್ಲ.