ಬಿಜೆಪಿಗಿಲ್ಲ ಡಿಎಂಕೆ ಬೆಂಬಲ
ಭಾರತೀಯ ಜನತಾ ಪಾರ್ಟಿಗೆ ತಾವು ಬೆಂಬಲ ನೀಡುವುದಿಲ್ಲ ಎಂದು ಡಿಎಂಕೆ ಪಕ್ಷ ಗುರುವಾರ ಸ್ಪಷ್ಟಪಡಿಸಿದೆ.
ಚೆನ್ನೈ: ಭಾರತೀಯ ಜನತಾ ಪಾರ್ಟಿಗೆ ತಾವು ಬೆಂಬಲ ನೀಡುವುದಿಲ್ಲ ಎಂದು ಡಿಎಂಕೆ ಪಕ್ಷ ಗುರುವಾರ ಸ್ಪಷ್ಟಪಡಿಸಿದೆ.
ಚುನವಾಣೋತ್ತರ ಸಮೀಕ್ಷೆಗಳು ಬಿಜೆಪಿ ಮೈತ್ರಿಕೂಟಕ್ಕೆ ಬಹುಮತ ಲಭಿಸಲಿದೆ ಎಂಬ ವರದಿಗಳ ಹೊರತಾಗಿಯೂ ಡಿಎಂಕೆ ಪಕ್ಷ ಬಿಜೆಪಿಗೆ ತನ್ನ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ತಮಿಳುನಾಡಿನ ಪ್ರಾದೇಶಿಕ ಪಕ್ಷ ಮತ್ತು ಯುಪಿಎ ಮೈತ್ರಿಕೂಟದ ಈ ಹಿಂದಿನ ಅಂಗಪಕ್ಷವಾದ ಡಿಎಂಕೆ, ಜಾತ್ಯಾತೀತ ಪಕ್ಷಗಳಿಗೇ ತನ್ನ ಬೆಂಬಲ ಎಂದು ಮರು ಉತ್ತರಿಸಿದೆ.
ಈ ಬಗ್ಗೆ ಮಾತನಾಡಿರುವ ಡಿಎಂಕೆ ಪಕ್ಷದ ಮುಖಂಡ ಟಿ.ಕೆ.ಎಸ್.ಇಳಂಗೋವನ್ ಅವರು, ಡಿಎಂಕೆ ಪಕ್ಷದಲ್ಲಿ ಅಂತಹ ಯಾವುದೇ ಪ್ರಸ್ತಾಪಗಳಿಲ್ಲ. ನಾವು ಎಂದಿಗೂ ಜಾತ್ಯಾತೀತ ಪಕ್ಷಗಳಿಗೆ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಆ ಮೂಲಕ ಬಿಜೆಪಿ ಪಕ್ಷವನ್ನು ತಾವು ಬೆಂಬಲಿಸುವುದಿಲ್ಲ ಎಂದು ಇಳಂಗೋವನ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ 2ಜಿ ಹಗರಣದ ವಿಚಾರಗವಾಗಿ ಯುಪಿಎ ಮೈತ್ರಿಕೂಟದಿಂದ ಹೊರಬಂದಿದ್ದ ಡಿಎಂಕೆ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸೇರುವ ಕುರಿತು ಊಹಾಪೋಹಗಳು ಎದಿದ್ದವು ಆದರೆ ಇಂದು ಡಿಎಂಕೆ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಿದೆ.
543 ಸದಸ್ಯ ಬಲದ ಸಂಸತ್ತಿನಲ್ಲಿ ಸರ್ಕಾರ ರಚನೆಗೆ 272 ಸ್ಥಾನಗಳ ಅವಶ್ಯಕತೆ ಇದೆ. ಈ ಹಿಂದಿನ ಚುನಾವಣಾ ಸಮೀಕ್ಷೆಗಳ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸುಮಾರು 270ರಿಂದ 275 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದೆ ಎಂದು ವರದಿಗಳು ಬಂದಿದ್ದವು. ತಮಿಳುನಾಡಿನಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಜಯಲಲಿತಾ ಅವರ ಎಐಎಡಿಎಂಕೆ ಪಕ್ಷ 29ರಿಂದ 35 ಸ್ಥಾನಗಳನ್ನು, ಡಿಎಂಕೆ ಪಕ್ಷ 4ರಿಂದ 5 ಸ್ಥಾನಗಳನ್ನು ಮತ್ತು ಬಿಜೆಪಿ ಪಕ್ಷ 0ಯಿಂದ 1 ಸ್ಥಾನ ಪಡೆಯಬಹುದು ಎಂದು ಸಮೀಕ್ಷಾ ವರದಿಗಳು ಊಹಿಸಿವೆ.