ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿ ಸರ್ಕಾರದಲ್ಲಿ ಹಿರಿಯರಿಗಿಲ್ಲ ಜವಾಬ್ದಾರಿ!

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಕ್ಷದ ಹಿರಿಯ ನಾಯಕರಿಗೆ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನೀಡದೇ ಇರುವ ಕುರಿತು ಚರ್ಚೆಗಳು ನಡೆಯುತ್ತಿವೆ.

Srinivasa Murthy VN
Updated On : 15 May 2014, 4:36 am

ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪಕ್ಷದ ಹಿರಿಯ ನಾಯಕರಿಗೆ ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ನೀಡದೇ ಇರುವ ಕುರಿತು ಚರ್ಚೆಗಳು ನಡೆಯುತ್ತಿವೆ.

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ಫಲಿತಾಂಶಕ್ಕೂ ಮೊದಲೇ ಬಿಜೆಪಿ ಪಕ್ಷ ಚುನಾವಣಾ ಗೆಲುವಿನ ಹುಮ್ಮಸ್ಸಿನಲ್ಲಿದ್ದಂತಿದೆ. ಸರ್ಕಾರ ರಚನೆ ಮತ್ತು ಯಾರಿಗೆ ಯಾವ ಸ್ಥಾನಮಾನ ನೀಡಬೇಕು ಎಂದು ಕಳೆದ 3 ದಿನಗಳಿಂದ ನಡೆಯುತ್ತಿದ್ದ ಚರ್ಚೆಗೆ ಇಂದು ಹಠಾತ್ ತಿರುವು ದೊರೆತಿದ್ದು, ಹಿರಿಯರನ್ನು ಸರ್ಕಾರ ರಚನೆಯಲ್ಲಿ ಸೇರಿಸಿಕೊಳ್ಳಬೇಕು ಎನ್ನುವ ಮುಖಂಡರ ನಿರ್ಧಾರಕ್ಕೆ ಆರ್‌ಎಸ್‌ಎಸ್ ತಡೆ ನೀಡಿದೆ ಎನ್ನಲಾಗಿದೆ.

ಸಂಘಪರಿವಾರದ ಮುಖಂಡರಾದ ಸುರೇಶ್ ಸೋನಿ ಹಾಗೂ ಮೋದಿ ಆಪ್ತ ಅಮಿತ್ ಶಾ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದು, ಸುಮಾರು 3 ಗಂಟೆಗೂ ಅಧಿಕ ಕಾಲ ಚರ್ಚಿಸಿದ್ದಾರೆ. ಈ ವೇಳೆ ಚುನಾವಣಾ ಫಲಿತಾಂಶದ ನಂತರದ ಪರಿಸ್ಥಿತಿಗಳನ್ನು ಅವಲೋಕಿಸಿ ಚರ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಅಂತೆಯೇ ಬಿಜೆಪಿ ಬಹುಮತ ಪಡೆದರೆ ಯಾವ ನಾಯಕರಿಗೆ ಯಾವ ಸ್ಥಾನಗಳನ್ನು ನೀಡಬೇಕು ಎನ್ನುವ ಕುರಿತು ಚರ್ಚಿಸಲಾಗಿದೆ. ಅಂತೆಯೇ ಸಂಭಾವ್ಯ ನರೇಂದ್ರ ಮೋದಿ ಸರ್ಕಾರಕ್ಕೆ ಸಂಘಪರಿವಾರ ಹಲವು ಸಲಹೆಗಳನ್ನು ನೀಡಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಒಂದಷ್ಟು ಕಿವಿಮಾತು ಹೇಳಿದೆ.

ಮೂಲಗಳ ಪ್ರಕಾರ, ಬಿಜೆಪಿಗೆ ಆರ್‌ಎಸ್‌ಎಸ್ ನೀಡಿರುವ ಸಲಹೆಗಳು..
1. ಸರ್ಕಾರ ರಚನೆ ಜವಾಬ್ದಾರಿಯನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೇ ನೀಡಬೇಕು ಮತ್ತು ಮೋದಿ ನಿರ್ಧಾರದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಬೇಡ.
2. ಪಕ್ಷದ ಹಿರಿಯರನ್ನು ಮತ್ತು ಪಕ್ಷವನ್ನು ನರೇಂದ್ರ ಮೋದಿ ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ.
3. ನರೇಂದ್ರ ಮೋದಿ ಕೇವಲ ಆರ್‌ಎಸ್‌ಎಸ್ ಮುಖಂಡ ಮೋಹನ್ ಭಾಗವತ್ ಅವರಿಗೇ ಉತ್ತರಿಸಬೇಕು. ಇಲ್ಲ ಸಲ್ಲದ ಗೊಂದಲ ನಿರ್ಮಾಣ ತಡೆಗಾಗಿ ಮತ್ತು ಪ್ರಮುಖ ವಿಚಾರಗಳ ಬಗೆಗೆ ಚರ್ಚೆಗಾಗಿ ಈ ಇಬ್ಬರ ನಡುವೆ ಯಾವುದೇ ಮಧ್ಯವರ್ತಿಗಳು ಬೇಡ.
4. ಬಿಜೆಪಿ ಪಕ್ಷದ ಹಿರಿಯರ ಅನುಭವ ಮತ್ತು ಹಿರಿತನವನ್ನು ನಿರ್ವಹಣೆ ಮಾಡುವ ಉದ್ದೇಶದಿಂದ ಮೋದಿ ಸರ್ಕಾರದಲ್ಲಿ ಹಿರಿಯರು ಪಾಲ್ಗೊಳ್ಳುವ ಅವಶ್ಯಕತೆ ಇಲ್ಲ.
5. ಪ್ರಮುಖ ಖಾತೆಗಳ ಹಂಚಿಕೆ ಹೊಣೆಗಾರಿಕೆ ಕೇವಲ ನರೇಂದ್ರ ಮೋದಿ ಅವರದ್ದೇ ಆಗಿರುತ್ತದೆ. ಇದರಲ್ಲಿ ಯಾವುದೇ ರೀತಿಯ ಹೊರಗಿನ ಹಸ್ತಕ್ಷೇಪ ಬೇಡ.
6. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಮೋದಿ ಸರ್ಕಾರದಲ್ಲಿ ಪಾಲ್ಗೊಳ್ಳಬೇಕು ಮತ್ತು ಪ್ರಧಾನಿ ನಂತರದ ಸ್ಥಾನ ಅಂದರೆ 2ನೇ ಸ್ಥಾನದ ಹುದ್ದೆಯಲ್ಲಿ ರಾಜನಾಥ್ ಸಿಂಗ್ ಮುಂದುವರೆಯಬೇಕು ಎಂದು ಆರ್‌ಎಸ್‌ಎಸ್ ಮುಖಂಡರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಈ ಬಗ್ಗೆ ಯಾವುದೇ ರೀತಿಯ ಅಧಿಕೃತ ಹೇಳಿಕೆಗಳು ಇನ್ನೂ ಹೊರಬಿದ್ದಿಲ್ಲ. ನರೇಂದ್ರ ಮೋದಿ ಅವರ 'ಸಂಭಾವ್ಯ ಸರ್ಕಾರದ ಸಂಭಾವ್ಯರ ಪಟ್ಟಿ' ನೀಡುವಂತೆ ಆರ್‌ಎಸ್‌ಎಸ್ ಕೇಳಿದೆ. ಅಂತೆಯೇ ಹಿಂದುತ್ವ ಅಜೆಂಡಾದ ಅಡಿಯಲ್ಲಿ ಸರ್ಕಾರ ರಚನೆ ಬೇಡ. ಬಿಜೆಪಿ ಪಕ್ಷದ ತತ್ವ ಮತ್ತು ಸಿದ್ಧಾಂತಗಳ ಆಧಾರದಲ್ಲಿ ಸ್ಥಿರ ಸರ್ಕಾರ ರಚನೆ ಮಾಡುವಂತೆ ರಾಜನಾಥ್ ಸಿಂಗ್ ಮತ್ತು ನರೇಂದ್ರ ಮೋದಿ ಅವರಿಗೆ ಆರ್‌ಎಸ್‌ಎಸ್ ಸಲಹೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement