ಕನ್ನಡ ಸಂಘರ್ಷ ಸಮಿತಿಯವರು ಡಾ. ಅನುಪಮಾ ನಿರಂಜನ ಸ್ಮೃತಿಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಕವಯತ್ರಿ ಛಾಯಾ ಭಗವತಿ ಪ್ರಥಮ ಬಹುಮಾನ ಪಡೆದಿದ್ದಾರೆ. ಮೇ 17ರ ಶನಿವಾರ ಸಂಜೆ ೫-೩೦ಕ್ಕೆ ಸಾಹಿತ್ಯ ಪರಿಷತ್ತಿನ ಮೂರನೇ ಮಹಡಿಯ ಕುವೆಂಪು ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು.
ಹೊಲವೆ ನಮ್ಮ ಬದುಕು- ಕಥೆಗಾಗಿ ಈ ಬಹಮಾನ ಗಳಿಸಿರುವ ಛಾಯಾ ಭಗವತಿ ಈ ಕುರಿತು ಫೇಸ್ಬುಕ್ನಲ್ಲಿ ಬರೆದುಕೊಂಡಿರುವುದು ಹೀಗೆ:
ಕನ್ನಡ ಸಂಘರ್ಷ ಸಮಿತಿಯವರು ಡಾ. ಅನುಪಮಾ ನಿರಂಜನ ಸ್ಮೃತಿಯಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಕಥಾಸ್ಪರ್ಧೆಯ ಪ್ರಕಟಣೆಯನ್ನು ಪತ್ರಿಕೆಯಲ್ಲಿ ಗಮನಿಸಿ, ೮-೧೦ ವರ್ಷಗಳ ಹಿಂದೆಯೇ ಬರೆದಿಟ್ಟು ಅದಕ್ಕೊಂದು ಕೊನೆಗಾಣಿಸದೇ ಬಿಟ್ಟಿದ್ದ ಕತೆಯನ್ನು ಪೂರ್ಣಗೊಳಿಸಿ ಕಳಿಸಿದ್ದೆ. ಕವಿತೆ, ಲೇಖನ, ಲಲಿತ ಪ್ರಬಂಧಗಳು ಒಲಿದ ಹಾಗೆ ಕತೆ ಒಲಿದಿರಲಿಲ್ಲ. ಬರೆಯಲಿಕ್ಕೆ ಕುಂತಾಗಲೆಲ್ಲ ಗೊಂದಲವೆನಿಸಿ, ಏನೂ ತೋಚದೇ ಮತ್ತೆ ಹಾಳೆಗಳನ್ನು ಮಡಿಚಿಟ್ಟು ಬಿಡುತ್ತಿದ್ದೆ. ಮೊನ್ನೆ ಈ ಕಥೆ ಸಿಕ್ತು. ಬಿದ್ದು ಬೆನ್ನು ಪೆಟ್ಟು ಮಾಡಿಕೊಂಡಿದ್ದರೂ, ಬಿಡದೇ ಬೆನ್ನತ್ತಿ, ‘ನೀನಾ ನಾನಾ?’ ಲೆಕ್ಕದಲ್ಲಿ ಕೈಯಿಂದ ಬರೆದು, ಒಂದು ಕೊನೆಯನ್ನೂ ಕೊಟ್ಟು, ಕೊರಿಯರ್ ಮಾಡಿ ತವರುಮನೆಗೆ ಮಕ್ಕಳನ್ನು ಕರೆದುಕೊಂಡು ರಜಕ್ಕೆ ಹೋಗಿಬಿಟ್ಟೆ. ಅಲ್ಲಿದ್ದಾಗ ಬಂದ ಕರೆ,. . . ಹೊಲವೆ ನಮ್ಮ ಬದುಕು ಕತೆಗೆ ಮೊದಲ ಬಹುಮಾನ ಬಂದಿದೆ ಅಂತ. ಅಮ್ಮ ಅಲ್ಲೇ ಇದ್ಲು. ಹೊಲ ಮಾಡಲಿಕ್ಕಾಗದೇ ಬದುಕುಗಳು ಒಳಗೊಳಗೇ ನರಳುತ್ತಿರುವಾಗ ಈ ಮಗಳು ಹೊಲವೆ ನಮ್ಮ ಬದುಕು ಅಂತಾಳಲ್ಲ ಅನಿಸಿ ಆಕೆಗೆ ಕಣ್ಣು ಮಂಜಾದ್ವು. ನನ್ನ ಕಣ್ಣೂ ಸಹ...
ಮಕ್ಕಳು ಬಹುಮಾನ ಬಂದಿಲ್ಲಾ ಅಂತ ಅಮ್ಮ ಅಳ್ತಾ ಇದಾಳೆ ಕಣೋ ಅಂತ ಮಾತಾಡ್ಕಂಡು ನಕ್ಕೊಂಡು ಬಾವಿ ದಂಡೆಗೆ ಬಂದು ಕೂರುತ್ತಿದ್ದ ಕಿಂಗ್ ಫಿಶರನ್ನ ನೋಡಲಿಕ್ಕೆ ಹೋದ್ವು...ಇದು ನನ್ನ ಕತೆಯ ಕತೆ.