ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಬ್ ಕಿ ಬಾರ್ ಮೋದಿ ಸರ್ಕಾರ್

ಮೂರನೇ ಬಾರಿ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಕೇಂದ್ರದಲ್ಲಿ ಶೀಘ್ರದಲ್ಲಿಯೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ.

Srinivasa Murthy VN
Updated On : 16 May 2014, 1:03 am

ನವದೆಹಲಿ: ಮೂರನೇ ಬಾರಿ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದ್ದು, ಕೇಂದ್ರದಲ್ಲಿ ಶೀಘ್ರದಲ್ಲಿಯೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ.

ಒಟ್ಟು 526 ಕ್ಷೇತ್ರಗಳ ಪೈಕಿ ಸುಮಾರು 246 ಸ್ಥಾನಗಳಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದ್ದು, ಒಟ್ಟು 87 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಯುಪಿಎ ಮೈತ್ರಿಕೂಟ ಕೇವಲ 64 ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಪಡೆದಿದ್ದು, 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ಸ್ಥಾನ ಬಹುತೇಕ ಖಚಿತವಾಗಿದೆ. ದೇಶದ ಮೂರು ಪ್ರಮುಖ ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ. ಗುಜರಾತ್, ದೆಹಲಿ ಮತ್ತು ರಾಜಸ್ತಾನದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ.

ದೇಶದ ಪ್ರತಿಷ್ಟಿತ ಕ್ಷೇತ್ರಗಳೆಂದೇ ಬಿಂಬಿತವಾಗಿರುವ ಅಮೇಥಿ, ರಾಯ್ ಬರೇಲಿ, ವಾರಣಾಸಿ, ಸುಲ್ತಾನ್ ಪುರ, ವಡೋದರದಂತಹ ಕ್ಷೇತ್ರಗಳಲ್ಲಿ ನರೇಂದ್ರ ಮೋದಿ ಅವರ ಹವಾ ಬಲವಾಗಿ ಕೆಲಸಮಾಡಿದೆ. ಕಳೆದ 15 ವರ್ಷಗಳಿಂದ ಅಮೇಥಿ ಕ್ಷೇತ್ರದಲ್ಲಿ ಭಾರಿ ಮತಗಳೊಂದಿಗೆ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ ಅವರು ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮುನ್ನಡೆ ಸಾಧಿಸಿರುವುದು ಮೋದಿ ಪ್ರಾಬಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಅಂತೆಯೇ ರಾಯ್‌ಬರೇಲಿ ಕ್ಷೇತ್ರದಲ್ಲಿ ಸೋನಿಯಾಗಾಂಧಿ ಮುನ್ನಡೆ ಸಾಧಿಸಿದರಾದರೂ, ಕಳೆದ ಭಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ಮುನ್ನಡೆ ಅಂತರ ಗಣನೀಯವಾಗಿ ಕುಸಿತ ಕಂಡಿದೆ. ವಾರಣಾಸಿ ಮತ್ತು ವಡೋದರ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
 
ಇನ್ನು ರಾಜ್ಯಾವಾರು ಫಲಿತಾಂಶಗಳ ಪೈಕಿ ಗುಜರಾತ್, ದೆಹಲಿ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಬಿಜೆಪಿ ಎಲ್ಲ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ಗುಜರಾತ್‌ನ 26 ಲೋಕಸಭಾ ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಭಾರಿ ಮುನ್ನಡೆ ಕಾಯ್ದುಕೊಂಡಿದ್ದು, ಬಹುತೇಕ ಗೆಲುವಿನ ಸನಿಹದಲ್ಲಿದ್ದಾರೆ. ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ನೀಡಿದ್ದ ದೆಹಲಿಯಲ್ಲಿ ಬಿಜೆಪಿ ಕಮಾಲ್ ಮಾಡಿದ್ದು, ಏಳೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸಿದೆ. ಅಂತೆಯೇ ರಾಜಸ್ತಾನದ 24 ಲೋಕಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವಿನ ಸನಿಹದಲ್ಲಿದ್ದಾರೆ.

ಇನ್ನು ಸೀಮಾಂಧ್ರದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಯೇನು ಇಲ್ಲ. ಇಲ್ಲಿ ಬಿಜೆಪಿ ಮತ್ತು ಟಿಡಿಪಿ ಮೈತ್ರಿಕೂಟ 19 ಸ್ಥಾನಗಳಲ್ಲಿ ಗೆಲುವಿನ ಸಮೀಪದಲ್ಲಿದ್ದರೆ, ಸಮೀಪದ ಪ್ರತಿಸ್ಪರ್ಧಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷ 6 ಸ್ಥಾನಗಳಲ್ಲಿ ಮುನ್ನಡೆ ಪಡೆಯುವ ಮೂಲಕ 2ನೇ ಸ್ಥಾನಕ್ಕೇರಿದೆ. ತೆಲಂಗಾಣ ಭಾಗದಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಮುನ್ನಡೆ ಕಾಯ್ದುಕೊಂಡಿದ್ದು, ಒಟ್ಟು 11 ಸ್ಥಾನಗಳಲ್ಲಿ ಟಿಆರ್‌ಎಸ್ ಮುನ್ನಡೆ ದಾಖಲಿಸಿದೆ. ಕಾಂಗ್ರೆಸ್ ಪಕ್ಷ ಕೇವಲ 2 ಸ್ಥಾನಗಳಿಸಿದೆ. ಟಿಡಿಪಿ ಪಕ್ಷ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಇನ್ನು ಉತ್ತರ ಪ್ರದೇಶ ಬಿಜೆಪಿ 65 (ಎಸ್‌ಪಿ 9, ಕಾಂಗ್ರೆಸ್ 4)ಗಳಲ್ಲಿ, ಉತ್ತರಖಾಂಡದಲ್ಲಿ 5, ಸ್ಥಾನಗಳಲ್ಲಿ ಎನ್‌ಡಿಎ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ನೇತೃತ್ವದ ಬಿಜೆಪಿ ಬಹುತೇಕ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಒಟ್ಟು 28 ಕ್ಷೇತ್ರಗಳ ಪೈಕಿ 25 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಗೆಲುವಿನ ಸನಿಹದಲ್ಲಿದೆ.

ಒಟ್ಟಾರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ತೀವ್ರ ಆಘಾತವಾಗಿದ್ದು, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement