ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಸಚಿವರ ಕೈ ತಪ್ಪಿದ ಗೆಲುವು, ಮುಗ್ಗರಿಸಿದ ತಾರಾಮಣಿಗಳು

ತಾರೆಯರಿಗೂ ಮನಸೋತಿಲ್ಲ, ಕ್ರೀಡಾಪಟುಗಳಿಗೂ ಮಣೆ ಹಾಕಿಲ್ಲ

Srinivasa Murthy VN
Updated On : 16 May 2014, 6:16 am

ತಾರೆಯರಿಗೂ ಮನಸೋತಿಲ್ಲ, ಕ್ರೀಡಾಪಟುಗಳಿಗೂ ಮಣೆ ಹಾಕಿಲ್ಲ
ನವದೆಹಲಿ:
ಪ್ರಸಕ್ತ ಲೋಕಸಭಾ ಚುನಾವಣಾ ಫಲಿತಾಂಶ ಹಲವು ಅಚ್ಚರಿ ಫಲಿತಾಂಶವನ್ನು ನೀಡಿದ್ದು, ದೇಶದ ಜನರ ಜನಾದೇಶ ರಾಜಕೀಯ ಪ್ರಮುಖರು ಬೆಚ್ಚಿ ಬೀಳುವಂತೆ ಮಾಡಿದೆ.

ಅಮೇಥಿಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗೆದ್ದರಾದರೂ, ಅವರ ಗೆಲುವು ಈ ಹಿಂದಿನಂತೆ ಸುಲಭವಾಗಿರಲಿಲ್ಲ. ಕಳೆದ ಬಾರಿ ಸುಮಾರು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ರಾಹುಲ್ ಗಾಂಧಿ, ಈ ಬಾರಿ ಬಿಜೆಪಿ ಪಕ್ಷದ ಅಮೇಥಿ ಅಭ್ಯರ್ಥಿ ಸ್ಮೃತಿ ಇರಾನಿ ಅವರಿಂದ ತೀವ್ರ ಪೈಪೋಟಿ ಎದುರಿಸಿದ್ದಾರೆ. ಆ ಮೂಲಕ ಕೆಲವೇ ಸಾವಿರ ಮತಗಳ ಅಂತರದಿಂದ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದಾರೆ.

ಇದೇ ರೀತಿ ಬಿಜೆಪಿ ಪಕ್ಷದಲ್ಲಿಯೂ ಇಂತಹ ಅಚ್ಚರಿ ಫಲಿತಾಂಶಗಳಿದ್ದು, ಬಿಜೆಪಿ ಪಕ್ಷದ ಟ್ರಬಲ್ ಶೂಟರ್ ಹಿರಿಯ ಮುಖಂಡ ಅರುಣ್ ಜೇಟ್ಲಿ ಅವರು ಅಮೃತಸರ್ ಕ್ಷೇತ್ರದಲ್ಲಿ ಮುಗ್ಗರಿಸಿದ್ದಾರೆ. ಅದೇ ರೀತಿ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಸೋಲನ್ನು ಅನುಭವಿಸಿದ್ದಾರೆ. ಚಾಂದಿನಿ ಚೌಕ್‌ನಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವ ಕಪಿಲ್ ಸಿಬಲ್, ಚಂಡೀಗಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ರೇಲ್ವೇ ಸಚಿವ ಪಿ.ಕೆ.ಬನ್ಸಾಲ್ ಅವರು ಸೋಲನನ್ನುಭವಿಸಿದ್ದಾರೆ.

ಅಂತೆಯೇ ಲೋಕಸಭಾ ಸ್ಪೀಕರ್ ಮೀರಾ ಕುಮಾರ್, ಉಧಮ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗುಲಾಮ್ ನಭಿ ಆಜಾದ್, ಸಲ್ಮಾನ್ ಖುರ್ಷೀದ್, ಸುಶೀಲ್ ಕುಮಾರ್ ಶಿಂಧೆ, ಶ್ರೀನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಫಾರುಕ್ ಅಬ್ದುಲ್ಲಾ, ಅಜ್ಮೀರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವ ಸಚಿನ್ ಪೈಲಟ್, ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ ಅಜಯ್ ಮಕನ್, ಮಧುಸೂಧನ್ ಮಿಸ್ತ್ರಿ, ಮಾಜಿ ಮುಖ್ಯಮಂತ್ರಿ ಬೂಟಾ ಸಿಂಗ್, ಕೇಂದ್ರ ಸಚಿವ ಮಣಿಶಂಕರ್, 2ಜಿ ಕುಖ್ಯಾತಿಯ ಎ.ರಾಜಾ, ದಯಾನಿಧಿ ಮಾರನ್, ಜೆಡಿಯು ರಾಷ್ಟ್ರಾಧ್ಯಕ್ಷ ಶರದ್ ಯಾದವ್, ಖಾನ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ ಶ್ರೀ ಪ್ರಕಾಶ್ ಜೈಸ್ವಾಲ್, ವಿಶಾಖಪಟ್ಟಣಂ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ವೈಎಸ್ ರಾಜಶೇಖರರೆಡ್ಡಿ ಅವರ ಪತ್ನಿ ವಿಜಯಮ್ಮ ಅವರು ಸೋಲುಕಂಡಿದ್ದಾರೆ.

ಉಳಿದಂತೆ ಶಿವಗಂಗಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇಂದ್ರ ಸಚಿವ ಪಿ.ಚಿದಬರಂ ಅವರ ಮಗ ಕಾರ್ತಿ ಚಿದಂಬರಂ ಕೂಡ ಸೋಲು ಅನುಭವಿಸಿದ್ದಾರೆ. ಇದೇ ರೀತಿ ತಮ್ಮ ತಂದೆಯ ವರ್ಚಸ್ಸಿನ ಆಧಾರದ ಮೇಲೆ ಚುನಾವಣಾ ಕಣಕ್ಕಿಳಿದಿದ್ದ ಕರ್ನಾಟಕ ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರ ಪುತ್ರಿ ಮತ್ತು ಖ್ಯಾತ ನಟ ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ಕೂಡ ಶಿವಮೊಗ್ಗದಲ್ಲಿ ಸೋಲು ಕಂಡಿದ್ದಾರೆ.

ತಾರೆಯರಿಗಿಲ್ಲ ಗೆಲುವಿನ ಮೆರುಗು
ಅಂತೆಯೇ ತಮ್ಮ ತಾರಾ ವರ್ಚಸ್ಸು ಮತಗಳಾಗಿ ಪರಿವರ್ತನೆಯಾಗಬಹುದು ಎಂದು ಆಲೋಚಿಸಿದ್ದ ಕೆಲ ಸಿನಿ ತಾರೆಯರು ಕೂಡ ಪ್ರಸಕ್ತ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಪೈಕಿ ಮಥುರಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಲಿವುಡ್ ನಟಿ ಹೇಮಾಮಾಲಿನಿ, ಆಂಧ್ರ ಪ್ರದೇಶದ ನಗರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಟಿ ರೋಜಾ ಅವರು ಗೆಲುವಿನ ಸಿಹಿ ಉಂಡಿದ್ದರೆ, ಹಲವರು ಮುಗ್ಗರಿಸಿದ್ದಾರೆ.  ಚಂಪಾರಣ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಖ್ಯಾತ ಚಿತ್ರ ನಿರ್ದೇಶಕ ಪ್ರಕಾಶ್ ಜಾ ಸೋಲು ಅನುಭವಿಸಿದ್ದು, ಮೀರತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಟಿ ನಗ್ಮಾ, ಬಿಜ್ನೋರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯಪ್ರದಾ, ಖಾನ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಲಿವುಡ್ ನಟ ರವಿಕಿಶನ್, ಘಾಜಿಯಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಾಜ್ ಬಬ್ಬರ್, ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಾಲಿವುಡ್ ನಟಿ ರಾಖಿ ಸಾವಂತ್, ಖ್ಯಾತ ಹಿನ್ನಲೆ ಗಾಯಕ ಬಪ್ಪಿ ಲಹರಿ, ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಟಿ ರಮ್ಯಾ, ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಿರುತೆರೆ ನಟಿ ಸ್ಮೃತಿ ಇರಾನಿ ಅವರು ಮುಗ್ಗರಿಸಿದ್ದಾರೆ.

ಗುರಿ ಮುಟ್ಟುವಲ್ಲಿ ವಿಫಲರಾದ ಕ್ರೀಡಾಪಟುಗಳು
ಕೇವಲ ತಾರೆಯರಷ್ಟೇ ಅಲ್ಲದೇ ಕ್ರೀಡಾಪಟುಗಳು ಕೂಡ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ನಿಂತಿದ್ದರು. ಈ ಪೈಕಿ ಮೊರಾದಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ ಮಹಮದ್ ಅಜರುದ್ದೀನ್, ಫೂಲ್‌ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಕ್ರಿಕೆಟಿಗ ಮಹಮದ್ ಕೈಫ್, ಮಾಜಿ ಹಾಕಿ ಆಟಗಾರ ದಿಲೀಪ್ ಟರ್ಕಿ ಅವರು ಸೋಲು ಕಾಣುವ ಮೂಲಕ ಮುಖಭಂಗ ಅನುಭವಿಸಿದ್ದಾರೆ. ಈ ಪಟ್ಟಿ ಇಲ್ಲದ ಮತ್ತು ಗೆಲುವು ಸಾಧಿಸಿದ ಕ್ರೀಡಾಪಟುಗಳ ಸಂಖ್ಯೆ ತೀರಾ ಕಡಿಮೆ ಇದ್ದು, ದರ್ಬಂಗ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಾಜಿ ಕ್ರಿಕೆಟಿಗ ಕೀರ್ತಿ ಅಜಾದ್ ಮತ್ತು ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಶೂಟರ್ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಜೈಪುರ ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿ ವಿಜೇತರಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement