ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಒವೈಸಿ ಹತ್ಯೆಗೆ ಸಂಚು: ಕರ್ನಾಟಕದ ಇಬ್ಬರ ಬಂಧನ

ಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಅವರ ಕೊಲೆಗೆ ಸಂಚು ರೂಪಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

Srinivasa Murthy VN
Updated On : 18 May 2014, 5:45 am

ಬೆಂಗಳೂರು: ಎಂಐಎಂ ಶಾಸಕ ಅಕ್ಬರುದ್ದೀನ್ ಒವೈಸಿ ಅವರ ಕೊಲೆಗೆ ಸಂಚು ರೂಪಿಸಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಹಿಂದೂಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಣಿಗಲ್ ಗಿರಿ ಮತ್ತು ಆತನ ಓರ್ವ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕುಣಿಗಲ್ ಗಿರಿಗೆ ದೊಡ್ಡ ಡಾನ್ ಆಗಿ ಕು'ಖ್ಯಾತಿ'ಗಳಿಸುವ ಆಸೆ ಇದ್ದು, ಪ್ರಧಾನ ಮಂತ್ರಿಗಳ ಬಾಯಲ್ಲೂ ತನ್ನ ಹೆಸರು ಕೇಳಬೇಕೆಂದು ಹವಣಿಸುತ್ತಿದ್ದ ಗಿರಿ, ಇದಕ್ಕಾಗಿ ಹೈದರಾಬಾದ್ ಶಾಸಕ ಅಕ್ಬರುದ್ದೀನ್ ಒವೈಸಿಯನ್ನು ಹತ್ಯೆ ಮಾಡಲು ಯತ್ನಿಸಿದ್ದನು ಎಂದು ಹೇಳಲಾಗುತ್ತಿದೆ.

ಇದಕ್ಕಾಗಿಯೇ ತನ್ನ ಐದು ಸಹಚರರೊಡನೆ ಕೂಡಿ ಹೈದರಾಬಾದ್‌ಗೆ ಕೂಡ ತೆರಳಿದ್ದನು. ಆದರೆ ಹತ್ಯೆ ಮಾಡುವಲ್ಲಿ ಆತ ವಿಫಲನಾಗಿದ್ದನು. ಇಂದು ಹಿಂದೂಪುರದಲ್ಲಿ ತನ್ನ ಸಹಚರನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ಗಿರಿಯನ್ನು ಅನುಮಾನಿಸಿದ ಪೊಲೀಸರು ಆತನನ್ನು ತಡೆಯಲು ಯತ್ನಿಸಿದಾಗ ಆತ ಪರಾರಿಯಾಗಿದ್ದಾನೆ. ಈ ವೇಳೆ ರಸ್ತೆ ಅಪಘಾತದಲ್ಲಿ ಗಿರಿ ಮತ್ತು ಆತನ ಸಹಚರ ಇಬ್ಬರೂ ಗಾಯಗೊಂಡಿದ್ದರು. ಸ್ಥಳೀಯರು ಈ ಇಬ್ಬರನ್ನು ಹಿಂದೂಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಗಿರಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾಗ ಆತನ ಬಳಿ ರಿವಾಲ್ವರ್ ಇರುವುದನ್ನು ಕಂಡ ವೈದ್ಯರು ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಕರ್ನಾಟಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಇಬ್ಬರೂ ಆರೋಪಿಗಳನ್ನು ಕರ್ನಾಟಕಕ್ಕೆ ಕರೆತರುವ ಮಾರ್ಗದಲ್ಲಿ ಮತ್ತೆ ಪೊಲೀಸರ ಮೇಲೆ ಕಲ್ಲುಗಳಿಂದ ದಾಳಿ ನಡೆಸಿದ ಆರೋಪಿಗಳನ್ನು ಪೊಲೀಸರು ಹರಸಾಹಸ ಪಟ್ಟು ಬಂಧಿಸಿ ಕರೆತಂದಿದ್ದಾರೆ.

ಇದಕ್ಕೂ ಮೊದಲು 10 ದಿನಗಳ ಹಿಂದೆ ಬೆಂಗಳೂರಿನಲ್ಲಿ ದರೋಡೆಗೆ ಮುಂದಾಗಿದ್ದ ಒಂದು ಗುಂಪನ್ನು ಪೊಲೀಸರು ಬಂಧಿಸಿದ್ದರು. ತನಿಖೆ ವೇಳೆ ಇವರು ಇದೇ ಕುಣಿಗಲ್ ಗಿರಿಯ ಸಹಚರರು ಎಂದು ಗೊತ್ತಾಗಿದೆ. ಅಲ್ಲದೆ ಗಿರಿ ಒವೈಸಿ ಸಂಚು ಕೂಡ ಬಯಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement