ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಡಿಎಂಕೆ ಕಚೇರಿಯಲ್ಲಿ ಹೈಡ್ರಾಮ: ರಾಜಿನಾಮೆ ನೀಡಿ, ವಾಪಸ್ ಪಡೆದ ಸ್ಟಾಲಿನ್

ಲೋಕಸಭಾ ಚುನಾವಣಾ ಸೋಲಿನ ಪರಾಮರ್ಶೆ ನಡೆಸಲು ಚೆನ್ನೈನಲ್ಲಿರುವ ಡಿಎಂಕೆ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಹೈಡ್ರಾಮವೇ ನಡೆದಿದ್ದು, ಪಕ್ಷದ ಮುಖಂಡ ಎಂ.ಕೆ.ಸ್ಟಾಲಿನ್ ಅವರು..

Srinivasa Murthy VN
Updated On : 18 May 2014, 6:57 am

ಚೆನ್ನೈ: ಲೋಕಸಭಾ ಚುನಾವಣಾ ಸೋಲಿನ ಪರಾಮರ್ಶೆ ನಡೆಸಲು ಚೆನ್ನೈನಲ್ಲಿರುವ ಡಿಎಂಕೆ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಹೈಡ್ರಾಮವೇ ನಡೆದಿದ್ದು, ಪಕ್ಷದ ಮುಖಂಡ ಎಂ.ಕೆ.ಸ್ಟಾಲಿನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ವಾಪಸ್ ಪಡೆದಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಟಾಲಿನ್ ಅವರು ಡಿಎಂಕೆ ಪಕ್ಷದ ಚುನಾವಣಾ ಪ್ರಚಾರ ಮೇಲುಸ್ತುವಾರಿ ವಹಿಸಿಕೊಂಡಿದ್ದು, ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆಹೊತ್ತು ತಮ್ಮ ಖಜಾಂಚಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಆ ಬಳಿಕ ಸ್ಟಾಲಿನ್‌ರನ್ನು ಸಮಾಧಾನಗೊಳಿಸಿದ ಅವರ ತಂದೆ ಮತ್ತು ಪಕ್ಷದ ಮುಖ್ಯಸ್ಥ ಎಂ.ಕರುಣಾ ನಿಧಿ ಅವರು ರಾಜಿನಾಮೆ ವಾಪಸ್ ಪಡೆಯುವಂತೆ ಮನವೊಲಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.

ತಮ್ಮ ತಂದೆ ಕರುಣಾ ನಿಧಿ ಮತ್ತು ತಮ್ಮ ಬೆಂಬಲಿಗರ ಒತ್ತಾಯಕ್ಕೆ ಮಣಿದ ಸ್ಟಾಲಿನ್ ಅವರು ತಮ್ಮ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಡಿಎಂಕೆ ಪಕ್ಷದ ಮುಖಂಡ ದುರೈ ಮುರುಗನ್ ಅವರು, ಮಾಧ್ಯಮಗಳ ಟೀಕೆಗಳಿಂದ ನೊಂದು ಸ್ಟಾಲಿನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಆದರೆ ಪಕ್ಷದ ಅಧ್ಯಕ್ಷರಾಗಿರುವ ಎಂ.ಕರುಣಾನಿಧಿ ಅವರು ರಾಜಿನಾಮೆಯನ್ನು ತಿರಸ್ಕರಿಸಿದ್ದಾರೆ. ಅಲ್ಲದೆ ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಸಲಹೆ ನೀಡಿದ್ದರು. ಅವರ ಮಾತಿಗೆ ಮತ್ತು ಬೆಂಬಲಿಗರಿಗೆ ಗೌರವ ನೀಡಿದ ಸ್ಟಾಲಿನ್ ಅವರು ರಾಜಿನಾಮೆಯನ್ನು ಹಿಂಪಡೆದಿದ್ದಾರೆ ಎಂದು ತಿಳಿಸಿದರು.

ಒಟ್ಟು 37 ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ತಮಿಳುನಾಡಿನಲ್ಲಿ ಆಡಳಿತಾ ರೂಢ ಎಐಎಡಿಎಂಕೆ ಪಕ್ಷ 37 ಸ್ಥಾನಗಳನ್ನು ಗಳಿಸಿದ್ದು, ಬಿಜೆಪಿ 1 ಮತ್ತು ಪಿಎಂಕೆ ಪಕ್ಷ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದವು. ಆದರೆ ತಮಿಳುನಾಡಿನ ಪ್ರಮುಖ ಪಕ್ಷವಾಗಿರುವ ಡಿಎಂಕೆ 1 ಕ್ಷೇತ್ರವನ್ನು ಗೆಲ್ಲದೆ ಖಾತೆತೆರೆಯುವಲ್ಲಿ ವಿಫಲವಾಗಿದೆ. ಡಿಎಂಕೆ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ 1 ಸ್ಥಾನವನ್ನು ಗೆಲ್ಲದೇ ಪಕ್ಷ ತೀವ್ರಮುಖಭಂಗವನ್ನು ಅನುಭವಿಸಿದೆ. ಹೀಗಾಗಿ ಸೋಲಿನ ನೈತಿಕ ಹೊಣೆ ಹೊತ್ತು ಸ್ಟಾಲಿನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಲು ಮುಂದಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement