ಕಿರಣ್ ಬೇಡಿಗೆ ಬಿಜೆಪಿಯಲ್ಲೇ ವಿರೋಧ
ಮೋದಿ ಸರ್ಕಾರಕ್ಕೆ ಬೆಂಬಲ ಘೋಷಿಸುತ್ತಲೇ ದೆಹಲಿ ಮುಖ್ಯಮಂತ್ರಿ ಸ್ಥಾನದ ಮೇಲೆ..
ನವದೆಹಲಿ: ಮೋದಿ ಸರ್ಕಾರಕ್ಕೆ ಬೆಂಬಲ ಘೋಷಿಸುತ್ತಲೇ ದೆಹಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ನಿವೃತ್ತ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರ ಆಯ್ಕೆಗೆ ದೆಹಲಿ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಪಕ್ಷದ ಕಾರ್ಯಕರ್ತರಲ್ಲದವರಿಗೆ ಪ್ರಧಾನ ಹುದ್ದೆಯನ್ನು ನೀಡಿದರೆ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಸಾಮಾನ್ಯ ಕಾರ್ಯಕರ್ತರಿಗೆ ಬೇರೆಯದೇ ಸಂದೇಶ ರವಾನೆಯಾದಂತಾಗುತ್ತದೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಅವರು ಬಿಜೆಪಿ ಬಗೆಗೆ ಒಲವು ತೋರುವ ಮೂಲಕ ಪ್ರಧಾನ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ನಿರಾಯಾಸವಾಗಿ ಮತ್ತು ಕಷ್ಟವಿಲ್ಲದೇ ಒಂದು ರಾಜ್ಯದ ಪ್ರಧಾನ ಹುದ್ಧೆಯನ್ನು ಪಡೆಯಲು ಮುಂದಾಗಿದ್ದಾರೆ.
ಕಿರಣ್ ಬೇಡಿ ಅವರ ಈ ಚಿಂತನೆಯಲ್ಲಿ ಕೇವಲ ಲಾಭಾಕಾಂಕ್ಷೆಗಳೇ ಕಾಣುತ್ತಿದ್ದು, ಅವರನ್ನು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬಾರದು ಎಂದು ದೆಹಲಿ ಬಿಜೆಪಿ ಘಟಕ ಅಭಿಪ್ರಾಯಪಟ್ಟಿದೆ. ಅಲ್ಲದೆ ಪಕ್ಷದಲ್ಲಿಯೇ ಸಾಕಷ್ಟು ನಿಷ್ಟಾವಂತ ಕಾರ್ಯಕರ್ತರಿದ್ದು, ಮೊದಲ ಆದ್ಯತೆ ಅವರಿಗೇ ನೀಡಬೇಕು ಎಂದು ದೆಹಲಿ ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಸಂಸದ ಹರ್ಷವರ್ಧನ್ ಅವರು, ನಮ್ಮಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದು, ಕೆಲ ನಾಯಕರು ಮುಖ್ಯಮಂತ್ರಿ ಸ್ಥಾನವನ್ನು ನಿಭಾಯಿಸಲು ಸಮರ್ಥರಾಗಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಿರಣ್ ಬೇಡಿ ಅವರ ಆಯ್ಕೆ ವಿಚಾರವನ್ನು ತಳ್ಳಿಹಾಕಿದ್ದಾರೆ. ಆದರೆ ಅವರ ಮಾತಿನಲ್ಲಿ ಕಿರಣ್ ಬೇಡಿ ಅವರ ಬಿಜೆಪಿ ಸೇರ್ಪಡೆಗೆ ವಿರೋಧವಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.
ಈ ಹಿಂದೆ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಅಣ್ಣಾ ಹಜಾರೆ ಮತ್ತು ತಂಡದೊಂದಿಗೆ ಗುರುತಿಸಿಕೊಂಡಿದ್ದ ಕಿರಣ್ ಬೇಡಿ ಅವರು, ಲೋಕಸಭಾ ಚುನಾವಣಾ ಸಮಯದಲ್ಲಿ ಸರಣಿ ಟ್ವೀಟ್ ಮಾಡಿದ್ದರು. ಅಲ್ಲದೆ ನರೇಂದ್ರ ಮೋದಿ ಅವರಿಗೆ ನೇರ ಬೆಂಬಲ ನೀಡಿದ್ದು, ನರೇಂದ್ರ ಮೋದಿಯಂತಹ ಪ್ರಾಮಾಣಿಕ ವ್ಯಕ್ತಿಗೆ ನಮ್ಮ ಬೆಂಬಲ ನೀಡಬೇಕು ಎಂದು ಹೇಳಿದ್ದರು.