ಜೂನ್ 2ರಂದು ಕೆಸಿಆರ್ ಪ್ರಮಾಣ ವಚನ ಸ್ವೀಕಾರ
ಇದೇ ಜೂನ್ 2ರಂದು ನೂತನ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿ..
ಹೈದರಾಬಾದ್: ಇದೇ ಜೂನ್ 2ರಂದು ನೂತನ ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖ್ಯಸ್ಥ ಕೆ.ಚಂದ್ರಶೇಖರ ರಾವ್ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆಂಧ್ರ ಪ್ರದೇಶ ವಿಭಜನೆಯೊಂದಿಗೆ ಉದಯಿಸಿದ ನೂತನ ರಾಜ್ಯ ತೆಲಂಗಾಣಕ್ಕೆ ಮೊದಲ ಮುಖ್ಯಮಂತ್ರಿಯಾಗಿ ಕೆ.ಚಂದ್ರಶೇಖರರಾವ್ ಅವರು ಆಯ್ಕೆಯಾಗಿದ್ದು, ಜೂನ್ 2ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಚಂದ್ರಶೇಖರ ರಾವ್ ಅವರೊಂದಿಗೆ ಟಿಆರ್‌ಎಸ್ ಪಕ್ಷದ 16 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಚಂದ್ರಶೇಖರ ರಾವ್ ಅವರ ಸೋದರಳಿಯ ಹರೀಶ್ ರಾವ್, ಪಕ್ಷದ ಮುಖಂಡರಾದ ಈಟೆಲ ರಾಜೇಂದರ್, ಪೋಚಾರಂ ಶ್ರೀನಿವಾಸ ರೆಡ್ಡಿ, ಮಹಮದ್ ಅಲಿ ಸೇರಿದಂತೆ ಒಟ್ಟು 16 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ತೆಲಂಗಾಣ ರಾಜ್ಯ ವಿಭಜನೆ ಗೊಂದಲದಿಂದಾಗಿ ಆಂಧ್ರ ಪ್ರದೇಶದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟಿನಿಂದಾಗಿ ಅಲ್ಲಿ ಅನಿವಾರ್ಯವಾಗಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು. ಬಳಿಕ ಕಳೆದ ಲೋಕಸಭಾ ಚುನಾವಣಾ ಸಂದರ್ಭಲ್ಲಿಯೇ ವಿಧಾನಸಭೆ ಚುನಾವಣೆ ಕೂಡ ನಡೆದಿದ್ದು, ಚಂದ್ರಶೇಖರರಾವ್ ಅವರ ನೇತೃತ್ವದ ಟಿಆರ್‌ಎಸ್ ಪಕ್ಷ ಬಹುಮತ ಪಡೆದುಕೊಳ್ಳುವ ಮೂಲಕ ಆಡಳಿತ ಚುಕ್ಕಾಣಿ ಹಿಡಿದಿದೆ.