ಯಡ್ಡಿ ವಿರುದ್ಧ ರಾಜನಾಥ್ ಸಿಂಗ್ ಅಸಮಾಧಾನ
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಡಿಯೂರಪ್ಪ ಅವರು ಬರೆದಿದ್ದ ಪತ್ರ..
ನವದೆಹಲಿ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಡಿಯೂರಪ್ಪ ಅವರು ಬರೆದಿದ್ದ ಪತ್ರದ ವಿಚಾರವಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗುಜರಾತ್ ಭವನದಲ್ಲಿ ಇಂದು ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸಭೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ರಾಜನಾಥ್ ಸಿಂಗ್ ಅವರು, 'ಯಡಿಯೂರಪ್ಪ ಅವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ನಾವು ಎಂದೂ ಹೇಳಿಲ್ಲ. ಸಂಪುಟ ರಚನೆ ಕುರಿತು ಅಂತಿಮ ತೀರ್ಮಾನ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರದ್ದೇ ಆಗಿರುತ್ತದೆ. ಹೀಗಿದ್ದೂ ಯಡಿಯೂರಪ್ಪ ಅವರು ನೇರವಾಗಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಲ್ಲದೇ ಆ ಪತ್ರವನ್ನು ಮಾಧ್ಯಮಗಳಿಗೆ ದೊರೆಯುವಂತೆ ಮಾಡಿದ್ದು ಸರಿಯಲ್ಲ'
'ಕರ್ನಾಟಕದಲ್ಲಿ ಬಿಜೆಪಿ ಪಕ್ಷದ ಬಲವರ್ಧನೆಗೆ ಯಡಿಯೂರಪ್ಪ ಅವರು ಸಾಕಷ್ಟು ಶ್ರಮವಿದೆ. ಅಲ್ಲದೆ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸುವಲ್ಲಿ ಯಡಿಯೂರಪ್ಪ ಅವರ ಪಾತ್ರ ಪ್ರಮುಖವಾಗಿತ್ತು. ಆದರೆ ಅವರ ಸುತ್ತ ಇರುವ ಬೆಂಬಲಿಗರು ಅವರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಪಕ್ಷದ ವಿಚಾರವಾಗಿ ಯಾವುದೇ ಮಾಹಿತಿಯನ್ನು ಯಡಿಯೂರಪ್ಪ ಅವರ ನನ್ನೊಂದಿಗೆ ಹಂಚಿಕೊಳ್ಳಬಹುದಿತ್ತು. ಆದರೆ ಯಡಿಯೂರಪ್ಪ ಅವರು ನೇರವಾಗಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು ಸರಿಯಲ್ಲ' ಎಂದು ಹೇಳಿದ್ದಾರೆ.
ಈ ಹಿಂದೆ ಸಚಿವ ಸಂಪುಟ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಅನಂತ್ ಕುಮಾರ್ ನೇತೃತ್ವದ ಒಂದು ತಂಡ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ನಿನ್ನೆ ಮಾಜಿ ಮುಖ್ಯಮಂತ್ರಿ ಮತ್ತು ಶಿವಮೊಗ್ಗ ಸಂಸದರಾದ ಯಡಿಯೂರಪ್ಪ ಅವರು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. 'ತಾವು ರಾಷ್ಟ್ರಾರಾಜಕಾರಣಕ್ಕಿಂತ ರಾಜ್ಯ ರಾಜಕೀಯದಲ್ಲಿಯೇ ಹೆಚ್ಚು ಉತ್ಸುಕರಾಗಿದ್ದು, ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ. ತಮಗೆ ಯಾವುದೇ ಸಚಿವ ಸ್ಥಾನ ಅಥವಾ ರಾಜ್ಯಾಧ್ಯಕ್ಷ ಪಟ್ಟವಾಗಲಿ ಬೇಡ ಎನ್ನುವ ಧಾಟಿಯಲ್ಲಿ ಪತ್ರ ಬರೆದಿದ್ದರು. ಇದೇ ಪತ್ರ ಇದೀಗ ವಿವಾದಕ್ಕೆ ಕಾರಣವಾಗಿದೆ.