ಮೋದಿ ಪತ್ನಿ ನಾನು..ಅವರೊಂದಿಗೆ ಬಾಳಬೇಕು
ಬಹಳ ದಿನಗಳ ನಂತರ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಅಹ್ಮದಾಬಾದ್: ಬಹಳ ದಿನಗಳ ನಂತರ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಜಶೋದಾಬೆನ್ ಅವರು ಈಗಲೂ ನರೇಂದ್ರ ಮೋದಿ ಅವರು ಕರೆದರೆ ಅವರೊಂದಿಗೆ ಜೀವನ ನಡೆಸುತ್ತೇನೆ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಅವರ ಬಗೆಗಿನ ತಮ್ಮ ಪ್ರೀತಿಯನ್ನು ಹೊರಹಾಕಿದ್ದಾರೆ.
ಜಶೋದಾ ಬೆನ್ ಅವರು ನರೇಂದ್ರ ಮೋದಿ ಅವರ ಪತ್ನಿ ಎಂದು ಈ ಹಿಂದಿನ ಚುನಾವಣೆಯಲ್ಲಿಯೇ ಬಹಿರಂಗವಾಗಿತ್ತಾದರೂ ಅವರು ಮಾತ್ರ ತಮ್ಮ ಮತ್ತು ನರೇಂದ್ರ ಮೋದಿ ಅವರ ನಡುವಿನ ಸಂಬಂಧದ ಕುರಿತು ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡರಲಿಲ್ಲ. ಮೋದಿ ವಿಚಾರ ಬಂದಾಗಲೆಲ್ಲಾ ಮಾಧ್ಯಮ ಮತ್ತು ಸಾರ್ವಜನಿಕ ಸಭೆಗಳಿಂದ ಜಶೋದಾಬೆನ್ ಯಾವಾಗಲೂ ದೂರವಿರುತ್ತಿದ್ದರು. ಆದರೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ವಡೋದರಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ವೇಳೆ ಜಶೋದಾ ಬೆನ್ರನ್ನು ತಮ್ಮ ಪತ್ನಿ ಎಂದು ಅಧಿಕೃತವಾಗಿ ಒಪ್ಪಿಕೊಂಡಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು.
ಹೀಗಾಗಿ ಇಷ್ಟು ದಿನ ಮಾಧ್ಯಮಗಳಿಂದ ದೂರವಿರುತ್ತಿದ್ದ ಜಶೋದಾಬೆನ್ ಇದೀಗ ತಮ್ಮ ಮನದ ಮೂಲೆಯಲ್ಲಿ ಅಡಗಿದ್ದ ಭಾವನೆಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. 'ನರೇಂದ್ರ ಮೋದಿ ಅವರು ನನ್ನನ್ನು ತಮ್ಮ ಪತ್ನಿ ಎಂದು ಒಪ್ಪಿಕೊಂಡಿದ್ದು ನನಗೆ ತುಂಬಾ ಸಂತೋಷವಾಗಿದೆ. ಇದುವರೆವಿಗೂ ಅವರು ಎಲ್ಲಿಯೂ ನನ್ನ ಹೆಸರು ಪ್ರಸ್ತಾಪ ಮಾಡಿರಲಿಲ್ಲ. ಈಗ ನಾನು ಅವರ ಪತ್ನಿ ಎಂದು ಅವರ ಮನಸ್ಸೇ ಹೇಳಿಸಿದೆ. ಹೀಗಾಗಿ ಅವರು ನಾಮಪತ್ರ ಸಲ್ಲಿಕೆ ವೇಳೆ ಇದನ್ನು ಬಹಿರಂಗ ಪಡಿಸಿದ್ದಾರೆ. ಸಾರ್ವಜನಿಕವಾಗಿ ನನ್ನ ಹೆಸರು ಉಲ್ಲೇಖ ಮಾಡಿದಾಗ ತುಂಬಾ ಸಂತೋಷವಾಯಿತು.
ನಾವೇನೂ ವಿಚ್ಚೇಧನ ಪಡೆದಿಲ್ಲ. ದೇಶ ಸೇವೆಗಾಗಿ ಅವರು ತಮ್ಮ ಕುಟುಂಬವನ್ನು ತ್ಯಜಿಸಿದ್ದರಿಂದ ನಾವು ಬೇರಾಗಬೇಕಾಯಿತು. ಆದರೆ ನಾವು ಈಗಲೂ ಒಟ್ಟಿಗೇ ಇದ್ದೇವೆ. ದೇಶಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರಿಂದ ನಾನು ಮತ್ತು ಅವರು ದೂರವಾಗಬೇಕಾಯಿತು. ಆದರೆ ಅವರು ಉತ್ತಮ ವ್ಯಕ್ತಿತ್ವ ಉಳ್ಳವರು. ಅವರ ಪ್ರೇರಣೆಯಿಂದಲೇ ಮದುವೆಯ ನಂತರವೂ ನಾನು ಶಿಕ್ಷಣ ಮುಂದುವರೆಸಿದೆ. 1987ರಲ್ಲಿ ನಾವು ಕೊನೆಯ ಬಾರಿಗೆ ಪರಸ್ಪರ ಮಾತನಾಡಿದ್ದೆವು. ಅದಕ್ಕೂ ಮೊದಲು ಪ್ರತ್ಯೇಕವಾಗಿ ಅವಕಾಶ ಸಿಕ್ಕಾಗ ಮಾತನಾಡುತ್ತಿದ್ದೆವು ಅಷ್ಟೇ. ಆಗ ಅವರು ನನ್ನೊಂದಿಗೆ ತುಂಬಾ ಆತ್ಮೀಯವಾಗಿದ್ದರು. ಈಗಲೂ ಅವರು ಜೊತೆಗಿರುವಂತೆ ಆಹ್ವಾನ ನೀಡಿದರೆ ನಾನು ಖಂಡಿತವಾಗಿಯೂ ಅವರೊಂದಿಗೆ ಹೋಗುತ್ತೇನೆ. ಅವರ ಕುಟುಂಬ ಸದಸ್ಯರು ಬಂದಾಗ ಅವರೊಂದಿಗೆ ಮಾತನಾಡಿಸುತ್ತೇನೆ.
2002ರ ನಂತರ ಅವರಿಗೆ ತಮ್ಮ ಕೆಲಸದ ಬಗ್ಗೆ ಬದ್ಧತೆ ಹೆಚ್ಚಾಯಿತು. ಸ್ವತಂತ್ರ ಆಡಳಿತ ಮತ್ತು ಅವರ ಚುರುಕಿನ ಬುದ್ದಿಯನ್ನು ನೋಡಿ ಅವರು ಮುಂದೊಂದು ದಿನ ಪ್ರಧಾನಿಯಾಗುತ್ತಾರೆ ಎಂದು ಭಾವಿಸಿದ್ದೆ. ಈಗ ಅದು ಸಾಕಾರಗೊಂಡಿದೆ. ಅವರು ಲೋಕಸಭಾ ಚುನಾವಣೆಯಲ್ಲಿ ಗೆದ್ದಾಗ ತುಂಬಾ ಸಂತೋಷವಾಗಿತ್ತು. ಪ್ರಸ್ತುತ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಅವರಿಂದ ಅಹ್ವಾನ ಬಂದರೆ ಖಂಡಿತವಾಗಿಯೂ ನಾನು ಸಮಾರಂಭಕ್ಕೆ ತೆರಳುತ್ತೇನೆ.
ಅವರ ಪತ್ನಿಯಾಗಿ ನನಗೆ ತುಂಬಾ ಹೆಮ್ಮೆ ಇದೆ. ಅವರು ಯಾವಾಗಲೂ ಸಂತೋಷವಾಗಿರಬೇಕು. ಇನ್ನಷ್ಟು ಸಾಧನೆ ಮಾಡಿ ಎತರಕ್ಕೇರಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಜಶೋದಾಬೆನ್ ಹೇಳಿದ್ದಾರೆ. ಅಲ್ಲದೆ ಮೋದಿ ಅವರ ಗೆಲುವಿಗಾಗಿ ಜಶೋದಾಬೆನ್ ಕೈಗೊಂಡಿದ್ದ ವ್ರತಗಳ ಕುರಿತು ಕೇಳಿದಾಗ ಆ ಬಗ್ಗೆ ಅವರು ಹೆಚ್ಚೇನು ಉತ್ತರಿಸಿದೇ 'ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ್ದೇ ಅಷ್ಟೇ' ಎಂದು ಹೇಳಿದರು.
ಒಟ್ಟಾರೆ ತಮ್ಮ ಪತಿ ನರೇಂದ್ರ ಮೋದಿ ಅವರ ಕುರಿತು ಅತೀವ ಗೌರವ ಮತ್ತು ಪ್ರೀತಿ ಹೊಂದಿರುವ ಜಶೋದಾಬೆನ್ ಅವರು ಅವರ ಯಶಸ್ಸಿಗಾಗಿ ಹಾರೈಸಿದ್ದಾರೆ.