ಷರೀಫ್ ಆಗಮನದಿಂದ ಸಂಬಂಧ ಸುಧಾರಣೆ: ಒಮರ್
ಮೋದಿ ಅವರ ಪ್ರಮಾಣ ವಚನಕ್ಕೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ..
ಶ್ರೀನಗರ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನಕ್ಕೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಆಗಮನ ಕುರಿತಂತೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಪ್ರಮಾಣ ವಚನಕ್ಕೆ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಆಗಮನದ ಕುರಿತು ಟ್ವೀಟ್ ಮಾಡಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು, 'ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಆಗಮನದಿಂದಾಗಿ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವಿನ ಸಂಬಂಧ ಮತ್ತೆ ಸುಧಾರಣೆಯ ಹಾದಿ ಹಿಡಿಯುವ ಭರವಸೆ ಇದ್ದು, ಜಮ್ಮು ಮತ್ತು ಕಾಶ್ಮೀರದ ಜನತೆ ಈ ಕಾರ್ಯಕ್ರಮವನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ನಮಗೆ ಯಾರು ಪ್ರಧಾನಿಯಾಗುತ್ತಿದ್ದಾರೆ ಎಂಬುದು ವಿಷಯವಲ್ಲ. ಬದಲಿಗೆ ಕಾರ್ಯಕ್ರಮದಲ್ಲಿ ಭಾರತದ ಪ್ರಧಾನಿ ಮತ್ತು ಪಾಕಿಸ್ತಾನದ ಪ್ರಧಾನಿಗಳ ಪರಸ್ಪರ ಹಸ್ತಲಾಘವ ಮಾಡುವುದೇ ಮುಖ್ಯ' ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಇದೇ ಮೇ 26ರಂದು ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೋದಿ ಪ್ರಮಾಣ ವಚನಕ್ಕೆ 2,500 ಕ್ಕೂ ಅಧಿಕ ಗಣ್ಯರು, ವಿವಿಧ ದೇಶಗಳ ಪ್ರಧಾನಿಗಳು ಮತ್ತು ಸಾರ್ಕ್ ಸಮಿತಿಯ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಳ್ಳಲ್ಲಿದ್ದಾರೆ. ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಕೂಡ ಪ್ರಮಾಣ ವಚನ ಆಗಮಿಸುವ ಕುರಿತು ಪಾಕಿಸ್ತಾನ ಹೈಕಮಿಷನ್ ಇಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.