ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪ್ರಧಾನಿ ನರೇಂದ್ರ ಮೋದಿ

ದೇಶದ 15ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಈಶ್ವರನ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Srinivasa Murthy VN
Updated On : 26 May 2014, 8:39 am

ನವದೆಹಲಿ: ದೇಶದ 15ನೇ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ಸಂಜೆ 6 ಗಂಟೆಗೆ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾ ವಿಧಿ ಭೋದಿಸಿದ್ದು, ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಿಯಾಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.

ಸಂಜೆ 6.07ಕ್ಕೆ ರಾಷ್ಟ್ರಗೀತೆಯನ್ನು ನುಡಿಸುವ ಮೂಲಕ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾವಿಧಿ ಭೋಧಿಸಿದರು. ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರು, ಈಶ್ವರನ ಹೆಸರಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಬಳಿಕ ಕ್ಯಾಬಿನೆಟ್ ದರ್ಜೆಯ 24 ಮಂದಿ ಸಚಿವರು, 11 ಮಂದಿ ರಾಜ್ಯ ಖಾತೆ ಸಚಿವರಾಗಿ, 10 ಮಂದಿ ಸ್ವತಂತ್ರ ಖಾತೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಪೈಕಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ವೆಂಕಯ್ಯ ನಾಯ್ಡು, ನಿತಿನ್ ಗಡ್ಕರಿ, ಡಿ.ವಿ.ಸದಾನಂದಗೌಡ, ಉಮಾಭಾರತಿ, ನಜ್ಮಾ ಅಫ್ತುಲ್ಲಾ, ಗೋಪಿನಾಥ್ ರಾವ್ ಮುಂಡೆ, ರಾಮ್ ವಿಲಾಸ್ ಪಾಸ್ವಾನ್, ಕಲ್‌ರಾಜ್ ಮಿಶ್ರ್, ಮನೇಕಾ ಗಾಂಧಿ, ಅನಂತ್ ಕುಮಾರ್, ರವಿಶಂಕರ್ ಪ್ರಸಾದ್, ಅಶೋಕ್ ಗಜಪತಿ ರಾಜು, ಅನಂತ್ ಗೀತೆ, ಹರ್ಸಿಮ್ರಾತ್ ಕೌರ್ ಬಾದಲ್, ನರೇಂದ್ರ ಸಿಂಗ್ ಟೋಮರ್, ಜೌಲ್ ಒರಾಂ, ರಾಧಾಮೋಹನ್ ಸಿಂಗ್, ಥಾವರ್ ಸಿಂಗ್ ಗೆಹ್ಲೋಟ್, ಸ್ಮೃತಿ ಇರಾನಿ, ಡಾ.ಹರ್ಷವರ್ದನ್ ಅವರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಸ್ವತಂತ್ರ ಖಾತೆಯ ಸಚಿವರಾಗಿ ಜ.ವಿ.ಕೆ.ಸಿಂಗ್, ಇಂದ್ರಜೀತ್ ಸಿಂಗ್, ಸಂತೋಷ್ ಕುಮಾರ್ ಗಂಗಾವರ್, ಶ್ರೀಪಾದ್ ನಾಯಕ್, ಧರ್ಮೇಂದ್ರ ಪ್ರಧಾನ್, ಸರಬಾನಂದ್ ಸೋನೋವಾಲ್, ಪ್ರಕಾಶ್ ಜಾವೇಡ್ಕರ್, ಪಿಯೂಶ್ ಗೋಯಲ್, ಡಾ.ಜಿತೇಂದ್ರ ಸಿಂಗ್, ನಿರ್ಮಲಾ ಸೀತಾರಾಮನ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯ ಖಾತೆ ಸಚಿವವರಾಗಿ ಜಿ.ಎಂ.ಸಿದ್ದೇಶ್ವರ್, ಮನೋಜ್ ಸಿನ್ಹಾ, ನಿಹಾಲ್ ಚಂದ್, ಉಪೇಂದ್ರ ಕುಶ್‌ವಾಹ್, ಪಿ.ರಾಧಾಕೃಷ್ಣನ್, ಕಿರಣ್ ರಿಜಿಜು, ಕೃಷ್ಣಪಾಲ್ ಗುಜ್ಜರ್, ಡಾ.ಸಂಜೀವ್ ಕುಮಾರ್ ಬಾಲಿಯಾ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಸತತ 10 ವರ್ಷಗಳ ನಂತರ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರದ ಗದ್ದುಗೆಗೇರಿದೆ. ಇಂದು ನಡೆದ ಪ್ರತಿಜ್ಞಾ ವಿಧಿ ಸಮಾರಂಭದಲ್ಲಿ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಭುಟ್ಟೊ, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ, ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಖರ್ಜೈ, ನೇಪಾಳ ಪ್ರಧಾನಿ ಸುಶೀಲ್ ಕೋಯಿರಾಲ, ಭೂತಾನ್ ಪ್ರಧಾನಿ ಶರಿಂಗ್ ತಾಬ್ಗೆ, ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ಅಬ್ದುಲ್ ಗಯೂಮ್ ಮತ್ತು ಬಾಂಗ್ಲಾದೇಶ ಪಾರ್ಲಿಮೆಂಟ್ ಸ್ಪೀಕರ್ ಶಿರಿನ್ ಶರ್ಮಿನ್ ಚೌದರಿ ಅವರು ಭಾಗವಹಿಸಿ ನರೇಂದ್ರ ಮೋದಿ ಅವರಿಗೆ ಶುಭ ಹಾರೈಸಿದರು.

ಬಿಜೆಪಿ ಹಿರಿಯ ಮುಖಂಡ ಮತ್ತು ಎನ್ ಡಿಎ ಮೈತ್ರಿಕೂಟದ ಅಧ್ಯಕ್ಷ ಎಲ್.ಕೆ.ಅಡ್ವಾಣಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾದೀಕ್ಷಿತ್ ಮತ್ತು ಬಾಲಿವುಡ್ ನಟ ಸಲ್ಮಾನ್ ಖಾನ್, ಆರ್ಟ್ ಆಫ್ ಲಿವಿಂಗ್ ನ ಶ್ರೀ ರವಿಶಂಕರ್ ಗುರೂಜಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದಲ್ಲದೆ ಸಾರ್ಕ್ ಸಮಿತಿಯ ಸದಸ್ಯ ರಾಷ್ಟ್ರಗಳ ವಿವಿಧ ಸದಸ್ಯರು ಪ್ರತಿಜ್ಞಾವಿಧಿಗೆ ಸಾಕ್ಷಿಯಾಗಿದ್ದರು. ಉಳಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಜಾರ್ಖಂಡ್ನಿಂದ ಮುಖ್ಯಮಂತ್ರಿ ಹೇಮಂತ್ ಸೊರೇನ್, ಬಿಹಾರ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ, ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಮತ್ತು ಛತ್ತೀಸ್ ಗಡ ಮುಖ್ಯಮಂತ್ರಿ ರಮಣ್ ಸಿಂಗ್ ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸಿದ್ದು, ಜಯಾ ಮತ್ತು ದೀದಿ ಗೈರು
ಇದೇ ವೇಳೆ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ, ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗೈರಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement