ಮೋದಿ ಪಟ್ಟಾಭಿಷೇಕಕ್ಕೆ ರಜನಿ ಗೈರು
ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿ ಕಾಂತ್ ಅವರು ಗೈರಾಗಲಿದ್ದಾರೆ.
ಚೆನ್ನೈ: ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿ ಕಾಂತ್ ಅವರು ಗೈರಾಗಲಿದ್ದಾರೆ.
ಇಂದು ಸಂಜೆ ನಡೆಯಲಿರುವ ಪ್ರತಿಜ್ಞಾವಿಧಿ ಸಮಾರಂಭಕ್ಕೆ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರನ್ನು ಆಹ್ವಾನಿಸಿರುವ ಹಿನ್ನಲೆಯಲ್ಲಿ ತಮಿಳುನಾಡಿನಾದ್ಯಂತ ಭಾರಿ ಪ್ರತಿಭಟನೆಗಳು ನಡೆಯುತ್ತಿದ್ದು, ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಪ್ರಮಾಣವಚನ ಸಮಾರಂಭಕ್ಕೆ ತೆರಳದೇ ಇರಲು ನಿರ್ಧರಿಸಿದ್ದಾರೆ.
ಇದಕ್ಕೂ ಮೊದಲು ಡಿಎಂಕೆ, ಎಐಎಡಿಎಂಕೆ ಸೇರಿದಂತೆ ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳು, ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರಿಗೆ ಅಹ್ವಾನ ನೀಡಿದ್ದಕ್ಕಾಗಿ ಬಿಜೆಪಿ ವಿರುದ್ಧ ತೀವ್ರ ಅಸಮಾಧಾನಗೊಂಡಿದ್ದವು. ಅಲ್ಲದೆ ಡಿಎಂಕೆ ಮತ್ತು ಎಂಡಿಎಂಕೆ ಪಕ್ಷಗಳ ಮುಖಂಡರು ನವದೆಹಲಿಗೆ ತೆರಳಿ ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡು ಆಹ್ವಾನ ಹಿಂಪಡೆಯುವಂತೆ ಮನವಿ ಮಾಡಿದ್ದರು. ಆದರೆ ಬಿಜೆಪಿ ಪಕ್ಷದಿಂದ ಸಕಾರಾತ್ಮಕ ಪ್ರತಿಕ್ರಿಯೆ ಲಭಿಸದ ಹಿನ್ನಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರತಿಜ್ಞಾ ವಿಧಿಯನ್ನು ಬಹಿಷ್ಕರಿಸಿದ್ದರು.
ಇದೀಗ ಮೋದಿ ಅವರ ಆಪ್ತರಲ್ಲೊಬ್ಬರಾದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳದೇ ಇರಲು ನಿರ್ಧರಿಸಿದ್ದು, ಈ ವೇಳೆ ಹೈದರಾಬಾದಿನಲ್ಲಿ ತಮ್ಮ ಲಿಂಗ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಸಂಜೆ ಆರು ಗಂಟೆಗೆ ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನದ ಆವರಣದಲ್ಲಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಸಮಾರಂಭಲ್ಲಿದಲ್ಲಿ ವಿವಿಧ ದೇಶಗಳ ಪ್ರಧಾನಿಗಳು, ಸಾರ್ಕ್ ಸಮಿತಿಯ ಸದಸ್ಯರು, ಮತ್ತು ದೇಶದ ಸಿನಿಮಾ ತಾರೆಯರೂ ಸೇರಿದಂತೆ ಒಟ್ಟು ಸುಮಾರು 2,500ಕ್ಕೂ ಅಧಿಕ ಗಣ್ಯರು ಪಾಲ್ಗೊಳ್ಳಲ್ಲಿದ್ದಾರೆ.