ಜೀವನಶೈಲಿ

ಮಕ್ಕಳು ಹೆಚ್ಚೆಚ್ಚು ಜಂಕ್ ಪುಡ್ ತಿನ್ನಲು ಅವರ ಅಪ್ಪನ ಆದಾಯ ಮತ್ತು ವಿದ್ಯಾರ್ಹತೆಯೂ ಕಾರಣ!

Sumana Upadhyaya
ಆಲಿಘಡ: ಮಕ್ಕಳು ಜಂಕ್ ಫುಡ್ ಬೇಕೆಂದು ಹಠ ಮಾಡಿದರೆ ಇನ್ನು ಮುಂದೆ ಮಕ್ಕಳ ತಾಯಿಯನ್ನು ದೂರಬೇಡಿ. ಅದಕ್ಕೆ ಮಗುವಿನ ತಾಯಿ ಕಾರಣವಲ್ಲ, ತಂದೆಯ ಶಿಕ್ಷಣ ಮತ್ತು ಆದಾಯ ಎಂದು ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕ ನಫೀಸ್ ಫೈಜಿ ಹೇಳುತ್ತಾರೆ.
ಅವರು, ಸಿಂಗಾಪುರದ ಡಾಕ್ಟರಲ್ ವಿದ್ಯಾರ್ಥಿಯಾಗಿರುವ ಮತ್ತು ಹೈದರಾಬಾದಿನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ನ ಸಹಾಯಕ ಪ್ರಾಧ್ಯಾಪಕ ಅರ್ಝಿ ಅಬ್ಡಿ ಜೊತೆ ಸೇರಿ ನಡೆಸಿದ ಸಂಶೋಧನೆಯಲ್ಲಿ, ಮಕ್ಕಳು ಜಂಕ್ ಫುಡ್ ತಿಂದರೆ ತಾಯಂದಿರನ್ನು ಆರೋಪಿಸುವುದೇಕೆ ಎಂದು ಪ್ರಶ್ನಿಸಲಾಗಿದೆ.
ತಾಯಂದಿರು ಶಿಕ್ಷಣವಂತರಾಗಿದ್ದರೆ ಮಕ್ಕಳಿಗೆ ಜಂಕ್ ಫುಡ್ ಕೊಡಿಸುವ ಪ್ರಮಾಣ ಕಡಿಮೆಯಾಗುತ್ತದೆ. ಆದರೆ ತಂದೆಯ ಆದಾಯ, ಶಿಕ್ಷಣ ಹೆಚ್ಚಿದ್ದರೆ ಮಕ್ಕಳು ಹೊರಗಿನ ತಿಂಡಿ, ತಿನಿಸುಗಳನ್ನು ತಿನ್ನುವುದು ಅಧಿಕ ಎಂದು ಅಧ್ಯಯನದಿಂದ ತಿಳಿದುಬಂದಿದೆಯಂತೆ.
ಇಂದಿನ ತಲೆಮಾರಿನ ತಾಯಂದಿರು ಸೋಮಾರಿಗಳಾಗುತ್ತಿದ್ದಾರೆ. ಮನೆಯಲ್ಲಿ ಅಡುಗೆ ಮಾಡುವ ಬದಲು ಮಕ್ಕಳಿಗೆ ಎರಡು ನಿಮಿಷದ ನೂಡಲ್ಸ್  ಮತ್ತು ಇತರ ಜಂಕ್ ಆಹಾರ ಪದಾರ್ಥಗಳನ್ನು ಕೊಡಿಸುತ್ತಾರೆ ಎಂಬ ವಾದವನ್ನು ಇವರ ಅಧ್ಯಯನ ಒಪ್ಪುವುದಿಲ್ಲ. ಹದಿಹರೆಯದ ಆರೋಗ್ಯ ವಿಚಾರದಲ್ಲಿ ತಂದೆಯ ಕಡೆಯ ಅಂಶಗಳು ಕಾರಣವಾಗುತ್ತವೆ ಎಂದು ಫೈಜಿ ಹೇಳುತ್ತಾರೆ.
ತಂದೆಯ ಶಿಕ್ಷಣ ಹೆಚ್ಚಾದರೆ ಮಕ್ಕಳು ಬೇಕರಿ ಮತ್ತು ಹೊರಗಿನ ಆಹಾರ ಪದಾರ್ಥಗಳನ್ನು ಖರೀದಿಸಿ ತಿನ್ನುವ ಪ್ರಮಾಣ ಹೆಚ್ಚಾಗುತ್ತದೆ ಮತ್ತು ತಾಯಿಯ ಶಿಕ್ಷಣ ಅಧಿಕವಾಗಿದ್ದರೆ ಅದು ಕಡಿಮೆಯಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ.
SCROLL FOR NEXT