ಜೀವನಶೈಲಿ

ಲಾಕ್ ಡೌನ್ ಸಮಯದಲ್ಲಿ ಮಕ್ಕಳು ಸಮಯ ಕಳೆಯುವುದು ಹೇಗೆ?

ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ 21 ದಿನಗಳ ಭಾರತ ಲಾಕ್ ಡೌನ್ ನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಮಕ್ಕಳು, ಹಿರಿಯರು ಸೇರಿದಂತೆ ಯಾರೂ ಕೂಡ ಮನೆಯಿಂದ ಹೊರ ಹೋಗುವಂತಿಲ್ಲ.

ಕೊರೋನಾ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ 21 ದಿನಗಳ ಭಾರತ ಲಾಕ್ ಡೌನ್ ನ್ನು ಘೋಷಿಸಿದೆ.

ಈ ಸಂದರ್ಭದಲ್ಲಿ ಮಕ್ಕಳು, ಹಿರಿಯರು ಸೇರಿದಂತೆ ಯಾರೂ ಕೂಡ ಮನೆಯಿಂದ ಹೊರ ಹೋಗುವಂತಿಲ್ಲ. ಮಕ್ಕಳಿಗೆ ಈಗ ಬೇಸಿಗೆ ರಜೆ, ಸಾಮಾನ್ಯ ದಿನಗಳಲ್ಲಾದರೆ ಬೇಸಿಗೆ ರಜೆಯೆಂದರೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ, ನೆಂಟರಿಷ್ಟರ ಮನೆಗೆ, ಊರಿಗೆ ಹೋಗುವುದು, ಸಮಾರಂಭಕ್ಕೆ ಹೋಗುವುದು, ನೆರೆ ಹೊರೆಯ ಮಕ್ಕಳ ಜೊತೆ ಆಟವಾಡುವುದು, ಬೇಸಿಗೆ ಶಿಬಿರಕ್ಕೆ ಹೋಗುವುದು ಹೀಗೆ ಮಕ್ಕಳ ಸಂತೋಷ, ಸಂಭ್ರಮಕ್ಕೆ ಪಾರವೇ ಇಲ್ಲ.

ಆದರೆ ಈ ವರ್ಷ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಬೇಸಿಗೆ ರಜೆ ಸಜೆಯ ರೀತಿ ಮಕ್ಕಳಿಗೆ ಭಾಸವಾಗುತ್ತಿದೆ. ಮನೆಯೊಳಗೆ ಕೂತು, ಕೂತು ಬೇಜಾರಾಯ್ತು ಎಂದು ಎಲ್ಲ ಕಡೆ ಮಕ್ಕಳು ಹೇಳುವುದನ್ನು ಕೇಳುತ್ತಿದ್ದೇವೆ.ಇನ್ನು ಮಕ್ಕಳು ದಿನಪೂರ್ತಿ ಮೊಬೈಲ್, ಕಂಪ್ಯೂಟರ್, ಟಿವಿ, ಲ್ಯಾಪ್ ಟಾಪ್ ಮುಂದೆಯೇ ಇರುತ್ತಾರೆ ಎಂದು ಪೋಷಕರು ಬೇಸರ ಮಾಡಿಕೊಳ್ಳುವುದೂ ಉಂಟು.

ಲಾಕ್ ಡೌನ್ ಇನ್ನೂ ಒಂದು ವಾರ ಇದೆ, ಅದರ ನಂತರವೂ ಪರಿಸ್ಥಿತಿ ಏನಾಗುತ್ತದೆ, ಲಾಕ್ ಡೌನ್ ಮುಂದುವರಿಯುತ್ತದೆಯೇ ಎಂದು ಗೊತ್ತಿಲ್ಲ, ಮಕ್ಕಳು ಈ ಹೊತ್ತಿನಲ್ಲಿ ಬೇಸರ, ಸಿಟ್ಟು, ಉದಾಸೀನ ಮಾಡಿಕೊಳ್ಳದಂತೆ ಅವರನ್ನು ಹೇಗೆ ಚಟುವಟಿಕೆಯಿಂದ ಇರಿಸಬಹುದು ಎಂಬುದಕ್ಕೆ ಇಲ್ಲಿದೆ ಕೆಲವು ಟಿಪ್ಸ್.

ಇಂದು ಮಕ್ಕಳಿಗೆ ಓದಿಗೆ ಪೂರಕವಾದ ಹಲವು ಆಪ್ ಗಳು ಸಿಗುತ್ತವೆ. ಅದರ ಮೂಲಕ ವಿಜ್ಞಾನ, ಗಣಿತ ಕಲಿಕೆಯನ್ನು ವಿನೋದವಾಗಿ ಚೆನ್ನಾಗಿ ಸಮಯ ಕಳೆಯುವಂತೆ ಮಕ್ಕಳಿಗೆ ಹೇಗೆ ಹೇಳಿಕೊಡಬಹುದು ಎಂಬುದು ಸಹ ಇರುತ್ತದೆ. ದಿನದ ಒಂದಷ್ಟು ಸಮಯದಲ್ಲಿ ಮಕ್ಕಳಿಗೆ ಇಂತಹ ಆಪ್ ಮೂಲಕ ಪೋಷಕರು ಹೇಳಿಕೊಡಿ.ರಸಪ್ರಶ್ನೆ, ಸಮಯದ ಸವಾಲು, ನೆನಪಿನ ಶಕ್ತಿಯ ಗೇಮ್ ಮೊದಲಾದವುಗಳನ್ನು ಮಕ್ಕಳಲ್ಲಿ ಆಡಿಸಿ.

ಮಕ್ಕಳ ಜೊತೆ ಪೋಷಕರು ಕುಳಿತು ಚಿತ್ರಕಲೆ, ಕಸೂತಿ, ಹೊಲಿಗೆ ಮಾಡಿ. ಇದರಿಂದ ಮಕ್ಕಳಿಗೆ ಹೊಸ ಕಲಿಕೆ ಆಗುತ್ತದೆ, ಜೊತೆಗೆ ಸಮಯ ಚೆನ್ನಾಗಿ ಕಳೆಯುವಂತಾಗುತ್ತದೆ. ಮಕ್ಕಳಲ್ಲಿರುವ ಸೃಜನಶೀಲತೆ ಹೊರಬರುತ್ತದೆ. ಕ್ಲೆ ಮಾಡೆಲ್ ಗಳನ್ನು ಮಾಡಿಸಿ, ಸ್ಕೆಚ್ ಪೆನ್, ಡ್ರಾಯಿಂಗ್ ಪೆನ್ಸಿಲ್ ನಲ್ಲಿ ಬೇರೆ ಬೇರೆ ಚಿತ್ರಗಳನ್ನು ಮಕ್ಕಳಿಗೆ ಬಿಡಿಸಿ ಕೊಡಿ, ಅವರಲ್ಲಿ ಬಿಡಿಸಲು ಹೇಳಿ.

ಮಕ್ಕಳಿಗೆ ಕಥೆ ಹೇಳಿಕೊಡಿ, ಅವರಲ್ಲಿ ಕಥೆ, ಪದ್ಯ, ಶ್ಲೋಕ, ದೇವರನಾಮ ಹೇಳಿಸಿ, ಸಂಗೀತ, ಡ್ಯಾನ್ಸ್ ಹೇಳಿಕೊಡಿ. ಪೋಷಕರು ಕೂಡ ಅವರ ಜೊತೆ ಕುಳಿತು ಹೇಳುವುದು, ಡ್ಯಾನ್ಸ್ ಮಾಡುವುದು ಮಾಡಬೇಕು. ಮಕ್ಕಳನ್ನು ಅವರ ಪಾಡಿಗೆ ಬಿಟ್ಟರೆ ಆಗುವುದಿಲ್ಲ.ನೀವು ಯೋಗ, ಧ್ಯಾನ, ವ್ಯಾಯಾಮ ಮಾಡುತ್ತಿದ್ದರೆ ಮಕ್ಕಳಿಗೂ ಹೇಳಿಕೊಡಿ.

ಮನೆಯೊಳಗೆ ಆಡುವ ಚೆಸ್, ಕೇರಂ, ಲೂಡೋ, ಹಾವು ಏಣಿ ಆಟ, ಕಳ್ಳ ಪೊಲೀಸ್ ಆಟ, ಬ್ಯುಸಿನೆಸ್ ಆಟ, ಕಾರ್ಡ್ಸ್  ಇತ್ಯಾದಿ ಅನೇಕ ಒಳಾಂಗಣ ಆಟವಾಡಿ. ಹಳೆ ಸಾಂಪ್ರದಾಯಿಕ ಆಟಗಳನ್ನು ಆಡಿಸಿ. ನಿಮಗೆ ಮತ್ತು ನಿಮ್ಮ ಮಕ್ಕಳಿಗೆ ಶಾರೀರಿಕವಾಗಿ ಚಟುವಟಿಕೆ ನೀಡುವ ಆಟಗಳಾದ ಸ್ಕಿಪ್ಪಿಂಗ್, ಜಂಪಿಂಗ್, ಕಣ್ಣ ಮುಚ್ಚಾಲೆಯಾಟ ಇತ್ಯಾದಿಗಳನ್ನು ಆಡಿ.

ಮಕ್ಕಳನ್ನು ನಿಮ್ಮ ಕೆಲಸದಲ್ಲಿ ಸೇರಿಸಿಕೊಳ್ಳಿ: ಲಾಕ್ ಡೌನ್ ಸಮಯ ಕುಟುಂಬದವರ ಜೊತೆ, ಮಕ್ಕಳ ಜೊತೆ ಉತ್ತಮವಾಗಿ ಬೆರೆಯಲು ಅದರಲ್ಲೂ ನಗರ ಪ್ರದೇಶಗಳಲ್ಲಿರುವ ಪೋಷಕರಿಗೆ ಮಕ್ಕಳ ಜೊತೆ ಬೆರೆಯಲು ಉತ್ತಮ ಸಮಯ. ಮನೆಗೆಲಸದಲ್ಲಿ, ಅಡುಗೆ ಕೆಲಸದಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಿ.ಮಕ್ಕಳ ಕೈಯಿಂದ ಸಾಧ್ಯವಾಗುವ ಕೆಲಸ ಮಾಡಿಸಿ.ಇದರಿಂದ ಅವರಿಗೆ ಸಮಯ ಕಳೆಯುತ್ತದೆ, ಜೊತೆಗೆ ಕೆಲಸ ಕಲಿತುಕೊಂಡ ಹಾಗೆ ಕೂಡ ಆಗುತ್ತದೆ. ಮನೆಯ ಹೊರಗೆ ಕೈತೋಟವಿದ್ದರೆ ಅದಕ್ಕೆ ನೀರುಣಿಸುವುದು, ಕಳೆ ಕೀಳುವುದು ಇತ್ಯಾದಿ ಮಕ್ಕಳ ಕೈಯಿಂದ ಮಾಡಿಸಿ.ಮುಂದಿನ ವರ್ಷದ ತರಗತಿಗೆ ಮಕ್ಕಳನ್ನು ಅಣಿಮಾಡಿ.

ಇಂತಹ ಲಾಕ್ ಡೌನ್ ಸಮಯದಲ್ಲಿ ಪೋಷಕರು ಮಾನಸಿಕವಾಗಿ ಸದೃಢರಾಗಿರಬೇಕು. ಮಕ್ಕಳ ಸಮಯವನ್ನು ಸರಿಯಾಗಿ ವ್ಯಯಿಸುವಂತೆ ಮಾಡಬೇಕಾದ ಕರ್ತವ್ಯ ನಮ್ಮೆಲ್ಲರ ಮೇಲಿದೆ.

ಲಾಕ್ ಡೌನ್ ಸಮಯವನ್ನು ಮಕ್ಕಳು ಸೃಜನಾತ್ಮಕವಾಗಿ ಹೇಗೆ ಕಳೆಯಬಹುದು ಎಂಬುದಕ್ಕೆ ಬೆಂಗಳೂರಿನ ವಿಡಿಯಾ ಪೂರ್ಣಪ್ರಜ್ಞ ಶಾಲೆಯ ವಿದ್ಯಾರ್ಥಿನಿ ವಿಂದ್ಯಾ ಪಿ ಎ ಬರೆದ ಒಂದು ಕಥೆಯನ್ನು ಇಲ್ಲಿ ನಿದರ್ಶನವಾಗಿ ತೆಗೆದುಕೊಂಡು ಮಕ್ಕಳು ಈ ರೀತಿ ಸಮಯದ ಸದ್ಭಳಕೆ ಮಾಡಿಕೊಳ್ಳಬಹುದು.

''ಸೋಮು ಎಂಬ ಬಾಲಕನಿದ್ದ. ಆತನ ಹುಟ್ಟುಹಬ್ಬಕ್ಕೆ ಎರಡೇ ದಿನ ಬಾಕಿ. ಹುಟ್ಟುಹಬ್ಬ ಹೇಗೆ ಆಚರಿಸುವುದು ಎಂದು ಬಹಳ ಯೋಜನೆ ಹಾಕಿಕೊಂಡು ಲಗುಬಗೆಯಲ್ಲಿ ಶಾಲೆಗೆ ಹೋಗುತ್ತಾನೆ. ಅಲ್ಲಿ ಸ್ನೇಹಿತರ ಬಳಿ ಇನ್ನೆರಡು ದಿನದಲ್ಲಿ ನನ್ನ ಹುಟ್ಟುಹಬ್ಬ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾನೆ. ಹುಟ್ಟುಹಬ್ಬ ದಿನ ಏನೇನು ಮಾಡಬೇಕು, ತಾನು ಯಾವ ರೀತಿ ಸಿದ್ದವಾಗಬೇಕು, ಯಾರನ್ನೆಲ್ಲಾ ಬರಹೇಳಬೇಕು ಎಂದು ಮನಸ್ಸಿನಲ್ಲೇ ಲೆಕ್ಕಹಾಕುತ್ತಿರುತ್ತಾನೆ.

ಹೀಗೆ ಖುಷಿಯಿಂದ ಮನೆಗೆ ಬಂದು ತನ್ನ ಅಪ್ಪ-ಅಮ್ಮನಲ್ಲಿ ಕೂಡ ಹುಟ್ಟುಹಬ್ಬ ಆಚರಣೆ ಬಗ್ಗೆ ಹೇಳಿಕೊಳ್ಳುತ್ತಾನೆ, ಕುಟುಂಬಕ್ಕೆ ಹತ್ತಿರದ ಚಿಕ್ಕಪ್ಪ, ಸೋದರಮಾವನಿಗೆ ಕೂಡ ಫೋನ್ ಮಾಡಿ ನಾಡಿದ್ದು ನನ್ನ ಹುಟ್ಟುಹಬ್ಬ, ಬರಬೇಕು ಎಂದು ಹೇಳುತ್ತಾನೆ. ಓರಗೆಯ ಮಕ್ಕಳಲ್ಲಿ ಹುಟ್ಟುಹಬ್ಬ ಆಚರಣೆಯ ವಿಷಯ ಹಂಚಿಕೊಳ್ಳುತ್ತಾನೆ. ಹೀಗೆ ಖುಷಿಯಲ್ಲಿ ಆ ರಾತ್ರಿ ಮಲಗುತ್ತಾನೆ.

ಮರುದಿನ ಸೋಮುವನ್ನು ಬೆಳಗ್ಗೆ ತಾಯಿ ಏಳಿಸಿ ಸ್ನಾನ ಮಾಡಿಕೊಂಡು ಬಾ ಎನ್ನುತ್ತಾಳೆ. ಸೋಮು ಸ್ನಾನ ಮಾಡಿಕೊಂಡು ಬಂದು ಬಟ್ಟೆ ಬದಲಿಸುತ್ತಿದ್ದಾಗ ಅವನ ತಾಯಿ ಇವತ್ತಿನಿಂದ ನಿನಗೆ ಶಾಲೆಗೆ ರಜೆಯಂತೆ, ಸಮವಸ್ತ್ರ ಧರಿಸಬೇಡ ಎನ್ನುತ್ತಾಳೆ.

ಏಕೆಂದು ಸೋಮು ಕೇಳಿದಾಗ ಅವನ ತಾಯಿ ಕೊರೋನಾ ಸೋಂಕು ಬಂದಿದೆಯಂಥಲ್ಲ, ಅದಕ್ಕಾಗಿ ಮಕ್ಕಳಿಗೆ ಶಾಲೆಗೆ ರಜೆ ಕೊಟ್ಟಿದ್ದಾರಂತೆ ಎನ್ನುತ್ತಾಳೆ. ಓಡಿಹೋಗಿ ಸೋಮು ಟಿವಿ ನೋಡಿದಾಗ ಮಹಾಮಾರಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಯಾರೂ ಮನೆಯಿಂದ ಆಚೆ ಬರಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಕೆಲವು ದಿನ ಎಲ್ಲಾ ಬಂದ್, ಮಕ್ಕಳಿಗೆ ಶಾಲೆಗೆ ರಜೆ ಎನ್ನುತ್ತಾರೆ.

ಸೋಮುಗೆ ಬಹಳ ನಿರಾಶೆಯಾಯಿತು, ಛೇ ಈ ಬಾರಿ ಶಾಲೆಯಲ್ಲಿ ಸ್ನೇಹಿತರ ಜೊತೆಗೂಡಿ ಖುಷಿ, ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲವಲ್ಲಾ ಎಂದು ಬೇಸರಪಟ್ಟುಕೊಂಡ.

.

ವಿಂದ್ಯಾ ಪಿ ಎ

ಜನರು ಕೊರೋನಾ ರೋಗಕ್ಕೆ ದೇಶದ ಅಲ್ಲಲ್ಲಿ ಸಾವು ನೋವು ಅನುಭವಿಸುತ್ತಿದ್ದಾರೆ, ನರಳುತ್ತಿದ್ದಾರೆ, ಬದುಕಲು, ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎಂದು ಟಿವಿಯಲ್ಲಿ ಸುದ್ದಿ ಓದುವವರು ಹೇಳುತ್ತಿರುವುದು, ಜನರು ಪರಿತಪಿಸುತ್ತಿರುವ ದೃಶ್ಯಗಳನ್ನು ನೋಡಿದಾಗ ಸೋಮು ಒಂದು ನಿರ್ಧಾರಕ್ಕೆ ಬಂದನು. ಹುಟ್ಟುಹಬ್ಬ ಮುಂದಿನ ವರ್ಷವೂ ಬರುತ್ತದೆ, ಆದರೆ ಸದ್ಯ ಕೊರೋನಾ ಮಹಾಮಾರಿಯನ್ನು ನಮ್ಮ ದೇಶದಿಂದ ಓಡಿಸಬೇಕು, ಹೊಸ ಬಟ್ಟೆ, ಸಿಹಿತಿಂಡಿ ಇಲ್ಲದಿದ್ದರೂ ಪರವಾಗಿಲ್ಲ, ಸುರಕ್ಷತೆ, ಆರೋಗ್ಯ ಈಗ ಮುಖ್ಯ ಎಂದು ಮನಸ್ಸಿನಲ್ಲಿಯೇ ಸೋಮು ನಿರ್ಧರಿಸಿ ಆರೋಗ್ಯಪಾಲನೆ ಮಾಡಲು ಮನಸ್ಸಿನಲ್ಲಿ ನಿರ್ಧಾರ ಮಾಡುತ್ತಾನೆ.''

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT