ಜೀವನಶೈಲಿ

ಹಳೆ ಕಾಲದ ಅಜ್ಜಿಮದ್ದು, ಕಷಾಯಕ್ಕೆ ಮತ್ತೆ ಸಿಕ್ಕಿತು ಮನ್ನಣೆ: ಎಲ್ಲಾ ಕೊರೋನಾ ಮಹಿಮೆ!

Sumana Upadhyaya

ಕೋವಿಡ್-19ಗೆ ಲಸಿಕೆ, ಔಷಧಿ ಕಂಡುಹಿಡಿದು ಅದು ಮಾರುಕಟ್ಟೆಗೆ ಬರಲು ಇನ್ನೂ ಸಮಯವಿದ್ದು ಈ ಸಮಯದಲ್ಲಿ ನಮ್ಮ ಪುರಾತನ ಅಜ್ಜಿಮದ್ದು, ಹಳ್ಳಿ ಮದ್ದು, ಕಷಾಯಗಳು ಮತ್ತೆ ಜನಪ್ರಿಯವಾಗುತ್ತಿದೆ.

ಅಡುಗೆ ಮನೆಯಲ್ಲಿ ಸಾಂಬಾರು ಡಬ್ಬಿಯಲ್ಲಿರುವ ಮಸಾಲೆ ಪದಾರ್ಥಗಳು, ಮಳೆಗಾಲದಲ್ಲಿ ಹಳ್ಳಿಗಳಲ್ಲಿ ಮಾಡುತ್ತಿದ್ದ ಕಷಾಯಗಳ ಬಗ್ಗೆ ಈಗ ನಗರ ಪ್ರದೇಶದ ಜನ ಕೂಡ ಮಾತನಾಡುತ್ತಿದ್ದಾರೆ, ಮತ್ತು ಮಾಡಿ ಕುಡಿಯುತ್ತಿದ್ದಾರೆ. ಕೋವಿಡ್-19 ಬರದಂತೆ ತಡೆಗಟ್ಟಲು ಹಳ್ಳಿ ಮದ್ದುಗಳು ಪರಿಣಾಮಕಾರಿಯಾಗಿವೆ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ಮಾತು ಹೆಚ್ಚಾಗಿ ಕೇಳಿಬರುತ್ತಿದೆ. ಆಯುರ್ವೇದ ಔಷಧಿಗಳನ್ನು ಜನರು ಮತ್ತೆ ಸ್ವೀಕರಿಸಲು ಮುಂದಾಗಿದ್ದಾರೆ. ನಗರಗಳಲ್ಲಿ ಅನೇಕರು ಆಯುರ್ವೇದ ಅಂಗಡಿಗಳು, ಗ್ರಂಥಿಗೆ ಅಂಗಡಿಗಳ ಮುಂದೆ ಸಾಲಿನಲ್ಲಿ ನಿಂತು ಖರೀದಿಸಿಕೊಂಡು ಹೋಗುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಕೆಲವು ಮಸಾಲೆ, ಸಾಂಬಾರು ಪದಾರ್ಥಗಳ ಬೆಲೆ ಏರಿಕೆಯಾದರೆ ಅದರಲ್ಲಿ ಅಚ್ಚರಿಪಡಬೇಕಾಗಿಲ್ಲ. ಶೀತ, ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆಗೆ ಬಳಸುವ ಹಿಪ್ಪಿಲಿ ಬೆಲೆ ಹೆಚ್ಚಾಗಿದೆ. ಇನ್ನು ಕೆಲವು ಕಡೆಗಳಲ್ಲಿ ಇದು ಸಿಗುತ್ತಿಲ್ಲ, ಅಶ್ವಗಂಧ ಪುಡಿಯ ಬೆಲೆ 50 ಗ್ರಾಂಗೆ 25 ರೂಪಾಯಿಯಿಂದ 50 ರೂಪಾಯಿಗೆ ಹೆಚ್ಚಾಗಿದೆ. ಶುದ್ಧ ಅರಶಿನ ಬೆಲೆ 100 ಗ್ರಾಂಗೆ ಮಾರುಕಟ್ಟೆಯಲ್ಲಿ 40ರಿಂದ 50 ರೂಪಾಯಿಯಿದೆ. ಕಪ್ಪು ಜೀರಿಗೆ ಬೆಲೆ ಕೂಡ ಹೆಚ್ಚಾಗಿದೆ. ಇದುವರೆಗೆ ಕಷಾಯ ಸೇವಿಸದೇ ಇದ್ದವರು ಕೋವಿಡ್-19 ಬಂದ ಮೇಲೆ ತಮ್ಮ ನಿತ್ಯ ಆಹಾರ, ಡಯಟ್ ನಲ್ಲಿ ಅದನ್ನು ಸೇವಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೋಡುತ್ತಿದ್ದಾರೆ ಎಂದು ಆಯುಷ್ ವೈದ್ಯರೊಬ್ಬರು ಹೇಳುತ್ತಾರೆ.

ವಿಪ್ರ ಮಲ್ಟಿಪರ್ಪಸ್ ಸೌಹಾರ್ದ ಸೊಸೈಟಿಯ ನಿರ್ದೇಶಕ ರತ್ನಾಕರ್, ಕಳೆದ 22 ದಿನಗಳಲ್ಲಿ 228 ಪ್ಯಾಕೆಟ್ ಕಷಾಯ ಪುಡಿಯನ್ನು ಮಾರಾಟ ಮಾಡಿದ್ದೇವೆ. ಹಿಪ್ಪಿಲಿ,ಅಶ್ವಗಂಧ ಬೇರು, ಕಪ್ಪು ಜೀರಿಗೆ, ಕರಿಮೆಣಸು, ಜೇಷ್ಠಮಧು, ಒಣ ಶುಂಠಿ, ಏಲಕ್ಕಿ, ಬಜೆ, ಜೀರಿಗೆ ಇವುಗಳಿಗೆಲ್ಲ ಬೇಡಿಕೆ ಹೆಚ್ಚಾಗಿದೆ, ಹಿಪ್ಪಿಲಿ ಖಾಲಿಯಾಗಿ ಹೋಗಿದ್ದು ಸ್ಥಳೀಯ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಜೇಷ್ಠಮಧು ಮತ್ತು ಅಶ್ವಗಂಧದ ಬೇರುಗಳನ್ನು ಕೊಂಡುಹೋಗಿ ಮನೆಯಲ್ಲಿ ಕಷಾಯ ಮಾಡಿಕೊಳ್ಳುತ್ತಾರೆ ಎಂದರು.

ಕೋವಿಡ್-19 ವಿರುದ್ಧ ಸಹಾಯ ಮಾಡುತ್ತದೆ ಹಪ್ಪಳ: ಕೋವಿಡ್-19 ವಿರುದ್ಧ ಹೋರಾಡಲು,ದೇಹದಲ್ಲಿ ರೋಗನಿರೋಧಕ ಶಕ್ತಿ ಬೆಳೆಸಲು ಹಪ್ಪಳ ಸಹಾಯ ಮಾಡುತ್ತದೆ ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೆಘವಲ್ ಹೇಳುತ್ತಾರೆ.

SCROLL FOR NEXT