ಜೀವನಶೈಲಿ

ಚಳಿಗಾಲದಲ್ಲಿ ಮಕ್ಕಳಲ್ಲಿ ಉಸಿರಾಟದ ಸಮಸ್ಯೆ: ಸತ್ಯ ಸಂಗತಿ ವರ್ಸಸ್ ಮಿಥ್ಯ ತಿಳಿವಳಿಕೆ

Manjula VN

ಚಳಿಗಾಲ ಶುರುವಾದರೆ ಸಾಕು ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚಳಿಗಾಲವು ರೋಗಕಾರಕಗಳು ಸುಲಭವಾಗಿ ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ.  ಶೀತ, ಕೆಮ್ಮು, ಉಸಿರಾಟ ಸಮಸ್ಯೆಗಳು ಸೇರಿದಂತೆ ಮೊದಲಾದ ಆರೋಗ್ಯ ಸಮಸ್ಯೆಗಳಂತೂ ಸಾಮಾನ್ಯವಾಗಿ ಬಿಡುತ್ತವೆ. ಪ್ರಮುಖವಾಗಿ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತವೆ. ಹೀಗಾಗಿಯೇ ಚಳಿಗಾಲ ಬಂತೆಂದರೆ ಪೋಷಕರಿಗೆ ದೊಡ್ಡ ತಲೆನೋವು ಶುರುವಾಗುತ್ತದೆ.

ಚಳಿಗಾಲದಲ್ಲಿ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಕಾಳಜಿವಹಿಸುವುದು ಅತ್ಯಗತ್ಯವಾಗಿದ್ದು, ಈ ಸಂದರ್ಭದಲ್ಲಿ ಸೋಂಕು ತಡೆಗಟ್ಟುವ ವಿಧಾನಗಳು ಹಾಗೂ ಕೆಲವು ಸತ್ಯ-ಮಿಥ್ಯಗಳನ್ನು ಇಲ್ಲಿ ವಿವರಿಸಲಾಗಿದೆ...

ಮಿಥ್ಯ: ಮಕ್ಕಳಲ್ಲಿ ಪ್ರತೀ ಬಾರಿ ಮೂಗು ಸೋರಿದಾಗಲೂ ಆ್ಯಂಟಿಬಯಾಟಿಕ್ ಬಳಕೆ ಮಾಡುವುದು ಅಗತ್ಯ ಎಂದು ಹೇಳಲಾಗುತ್ತದೆ.
ಸತ್ಯ:
ಮೂಗು ಸೋರಿದರೆ ಆ್ಯಂಟಿಬಯಾಟಿಕ್ ಬಳಕೆಯ ಅಗತ್ಯವಿಲ್ಲ. ಶೀತ, ಜ್ವರ ಹಾಗೂ ಶ್ವಾಸಕೋಶಕ್ಕೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ವೈರಸ್ ನಿಂದ ಎದುರಾಗುತ್ತವೆ. ಅನಗತ್ಯವಾಗಿ ಆ್ಯಂಟಿಬಯಾಟಿಕ್ ಬಳಕೆ ಮಾಡಿದರೆ, ಅದು ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

ಮಿಥ್ಯ: ಮಕ್ಕಳು ಜಾಕೆಟ್ ಇಲ್ಲದೆ ತಂಪಾದ ವಾತಾವರಣದಲ್ಲಿ ಆಟವಾಡಿದರೆ ಶೀತವಾಗುತ್ತದೆ...
ಸತ್ಯ:
ಶೀತವು ಸಾಮಾನ್ಯವಾಗಿ ವೈರಸ್ ಗಳಿಂದ ಎದುರಾಗುತ್ತದೆಯೇ ಹೊರತು ಶೀತಯುಕ್ತ ವಾತಾವರಣದಿಂದಲ್ಲ. ಹೀಗಾಗಿ ತಂಪಾದ ವಾತಾವರಣದಲ್ಲೂ ಮಕ್ಕಳು ಆಟವಾಡಬಹುದು.

ಮಿಥ್ಯ: ಫ್ಲೂ ಲಸಿಕೆ ಪಡೆದರೆ ಜ್ವರ ಬರುತ್ತದೆ.
ಸತ್ಯ:
ಫ್ಲೂ ಲಸಿಕೆಯನ್ನು ಸತ್ತ ರೋಗಕಾರಕಗಳಿಂದ ತಯಾರಿಸಲಾಗುತ್ತದೆ. ಹೀಗಾಗಿ ಈ ಲಸಿಕೆಗಳಿಂದ ಜ್ವರ ಬರಲು ಸಾಧ್ಯವಿಲ್ಲ.

ಮಿಥ್ಯ: ಹೆಚ್ಚೆಚ್ಚು ಜೀವಸತ್ವಗಳು ಮತ್ತು ಖನಿಜವುಳ್ಳ ಆಹಾರ ಸೇವನೆಯಿಂದ ಮಕ್ಕಳು ಅನಾರೋಗ್ಯದಿಂದ ದೂರ ಉಳಿಯಬಹುದು.
ಸತ್ಯ:
ಹೆಚ್ಚೆಚ್ಚು ಜೀವಸತ್ವಗಳು ಮತ್ತು ಖನಿಜವುಳ್ಳ ಆಹಾರ ಸೇವಿಸಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ನಿಜ. ಆದರೆ, ಇದು ಮಕ್ಕಳಲ್ಲಿ ಶೀತ, ಜ್ವರ ಬರದಂತೆ ಮಾಡುವುದಿಲ್ಲ.

ಚಳಿಗಾಲದಲ್ಲಿ ಅನಾರೋಗ್ಯದಿಂದ ದೂರ ಉಳಿಯುವುದು ಹೇಗೆ?

  • ಚಳಿಗಾಲವು ರೋಗಕಾರಕಗಳು ಸುಲಭವಾಗಿ ಹರಡಲು ಸೂಕ್ತವಾದ ವಾತಾವರಣವನ್ನು ಒದಗಿಸುತ್ತದೆ. ಹೀಗಾಗಿ ವೈರಸ್ ಗಳಿಂದ ದೂರ ಉಳಿಯಲು ಸ್ವಚ್ಛತೆ ಕಾಪಾಡುವುದು ಅತ್ಯಂತ ಮುಖ್ಯವಾಗುತ್ತದೆ.
  • ಕೆಮ್ಮು ಬಂದಾಗ ಟಿಶ್ಯೂ ಬಳಕೆ ಮಾಡುವುದು, ಆಗಾಗ್ಗೆ ಕೈಗಳ ತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು.
  • ಹೆಚ್ಚೆಚ್ಚು ಜನರು ಸೇರುವ ಪ್ರದೇಶಕ್ಕೆ ಭೇಟಿ ನೀಡುವುದನ್ನು ನಿಯಂತ್ರಿಸಬೇಕು. ಮುಖ್ಯವಾಗಿ ಶೀತ ಹಾಗೂ ನೆಗಡಿಯಿಂದ ಬಳಲುತ್ತಿರುವ ಜನರಿಂದ ಅಂತರ ಕಾಯ್ದುಕೊಳ್ಳಬೇಕು.
  • ಪ್ರತೀ ವರ್ಷ ಅಗತ್ಯವಿರುವ ಲಸಿಕೆಗಳನ್ನು ಪಡೆದುಕೊಳ್ಲಬೇಕು.
  • ಚಳಿಗಾಲದಲ್ಲಿ ಬಹುತೇಕ ಜನರಲ್ಲಿ ಅಸ್ತಮಾ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಔಷಧಿಗಳನ್ನು ಜೊತೆಗಿಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ.
  • ಅತಿಯಾದ ಗಾಳಿಯಿಂದಾಗಿ, ಮೂಗಿನ ಹೊಳ್ಳೆಗಳಲ್ಲಿನ ಲೋಳೆಯ ಪೊರೆಗಳು ಒಣಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇದರಿಂದ ಮೂಗಿನಲ್ಲಿ ರಕ್ತಸ್ರಾವವಾಗಬಹುದು. ಈ ಸಂದರ್ಭದಲ್ಲಿ ಲವಣಯುಕ್ತ ನೀರು ಅಥವಾ ಬಿಸಿ ನೀರಿನ ಹಬೆ ತೆಗೆದುಕೊಳ್ಳುವ ಮೂಲಕ ಸಮಸ್ಯೆಯನ್ನು ತಡೆಯಬಹುದು. ಇದಷ್ಟೇ ಅಲ್ಲದೆ, ಸೈನಸ್ ನಿಂದಲೂ ಮೂಗಿನಲ್ಲಿ ರಕ್ತಸ್ರಾವವಾಗಬಹುದು.

ಈ ಕೆಳಕಂಡ ಲಕ್ಷಣಗಳು ಕಂಡು ಬಂದರೆ ಕೂಡಲೇ ಪೋಷಕರು ಜಾಗ್ರತೆ ವಹಿಸಬೇಕು...

  • ಜ್ವರದ ಜೊತೆಗೆ ದೇಹದಲ್ಲಿ ದದ್ದುಗಳು ಕಂಡು ಬಂದರೆ
  • ಜೋರಾದ ಉಸಿರಾಟ ಅಥವಾ ಉಸಿರಾಡುವಲ್ಲಿ ಸಮಸ್ಯೆಗಳು ಎದುರಾದರೆ
  • ನಿದ್ರೆಯಿಂದ ಏಳಲು ಸಾಧ್ಯವಾಗದೆ ಇದ್ದರೆ
  • ಚರ್ಮದ ಬಣ್ಣ ನೀಲಿಯಾಗುತ್ತಿದ್ದರೆ
  • ಊಟ, ನೀರು ಸೇರದಿದ್ದರೆ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಮತ್ತು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.
SCROLL FOR NEXT