ಜೀವನಶೈಲಿ

ಕುಳಿತಲ್ಲೇ ಕೆಲಸ ಮಾಡುವವರ ಗಮನಕ್ಕೆ: ಬಾಡಿ ಓಡಾಡಿಸಿ, ಆರೋಗ್ಯವಾಗಿರಿ...

Srinivas Rao BV

ನಾವೆಲ್ಲಾ ಜೂ.21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದ್ದೀವಿ. ಹಲವು ಮಂದಿ ತಮ್ಮ ಸಂಪೂರ್ಣ ಆರೋಗ್ಯಕ್ಕೆ ದೈಹಿಕ ವ್ಯಾಯಾಮ, ಯೋಗ ಆಸನಗಳ ಪ್ರಾಮುಖ್ಯತೆಯನ್ನು ಅರಿಯುತ್ತಿರುವುದು ಸಂತಸದ ವಿಷಯ. 

ವ್ಯಾಯಾಮವನ್ನೇ ರೂಢಿಸಿಕೊಳ್ಳದೇ ಇರುವವರಿಗೆ ಪ್ರತಿ ದಿನ 15-30 ನಿಮಿಷಗಳವರೆಗಿನ ಬೆಳಗಿನ ನಡಿಗೆ ಅಥವಾ ಯೋಗ ಮಾಡುವುದರಿಂದ ಹೃದಯದ ಆರೋಗ್ಯ, ರೋಗನಿರೋಧಕ ಆರೋಗ್ಯ, ಮೆದುಳು, ಕೂದಲು, ಚರ್ಮ, ಚಯಾಪಚಯ ಪ್ರಕ್ರಿಯೆಯನ್ನು ಉತ್ತಮಗೊಳಿಸಿ, ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಉಂಟುಮಾಡುತ್ತದೆ.

15-30 ನಿಮಿಷಗಳ ಕಾಲ ದಿನನಿತ್ಯ ವ್ಯಾಯಾಮ ಪ್ರಾರಂಭ ಮಾಡುವುದು ಸೂಕ್ತವಾದರೂ, ಒಂದು ಗಂಟೆಗಿಂತಲೂ ಹೆಚ್ಚಿನ ಕಾಲ ಒಂದೇ ಕಡೆಯಲ್ಲಿ ಕುಳಿತುಕೊಳ್ಳಬಾರದು ಎಂಬುದನ್ನು ನಾವು ಅರಿಯಬೇಕು. ದಿನ ನಿತ್ಯ ಹೆಚ್ಚಿನ ಸಮಯ ದೈಹಿಕ ಚಟುವಟಿಕೆಗಳೇ ಇಲ್ಲದೇ ಒಂದೇ ಕಡೆ ಕುಳಿತುಕೊಂಡರೆ ಅದು ಧೂಮಪಾನ ಮಾಡುವಷ್ಟೇ ಆರೋಗ್ಯಕ್ಕೆ ಹಾನಿಕರವಾಗಿರಲಿದ್ದು, ವ್ಯಾಯಾಮವೂ ಪರಿಣಾಮ ಉಂಟುಮಾಡುವುದಿಲ್ಲ. 

ಹೆಚ್ಚು ಸಮಯ ಕುಳಿತುಕೊಳ್ಳುವುದರಿಂದ ನಮ್ಮ ರಕ್ತಚಲನೆ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಲಿದ್ದು, ನಮ್ಮ ಅಂಗ ವಿನ್ಯಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದ್ದು, ಲ್ಯಾಕ್ಟಿಕ್ ಆಮ್ಲ ಉತ್ಪಾದನೆಯಿಂದ ಸ್ನಾಯುಗಳಲ್ಲಿ ಸೆಳೆತ, ನೋವು ಮತ್ತು ಬಿಗಿತ, ಕೀಲುಗಳ ನೋವು ಪ್ರಾರಂಭವಾಗುತ್ತದೆ. 

ಡೆಸ್ಕ್ ಕೆಲಸಗಳಲ್ಲಿ ನಿರತರಾಗುವ ಉದ್ಯೋಗಿಗಳಂತೂ ತೀವ್ರವಾದ ಬೆನ್ನು ನೋವು, ಭುಜದ ನೋವಿನಿಂದ ಬಳಲುತ್ತಾರೆ. ಆದ್ದರಿಂದ ಬೆಳಗಿನ ನಡಿಗೆಯೂ ಕೆಲವೊಮ್ಮೆ ಲ್ಯಾಕ್ಟಿಕ್ ಆಮ್ಲ ಉತ್ಪಾದನೆಯಿಂದ ಮುಕ್ತಿ ನೀಡುವುದಿಲ್ಲ. ಹಾಗಂತ ಬೆಳಗಿನ ನಡಿಗೆ ವ್ಯಾಯಾಮಗಳನ್ನು ಬಿಟ್ಟುಬಿಡಿ ಎಂದು ಹೇಳುತ್ತಿಲ್ಲ. ಇದನ್ನು ಮುಂದುವರೆಸುವುದರಿಂದ ಸ್ನಾಯುಗಳ ಆರೋಗ್ಯ ಹಾಗೂ, ಚಯಾಪಚಯ ಪ್ರಕ್ರಿಯೆಯನ್ನು ಉತ್ತಮಗೊಳಿಸಬಹುದಾಗಿದೆ.

ಅಂತೆಯೇ, ದಿನಪೂರ್ತಿ ದೈಹಿಕವಾಗಿ ಚಟುವಟಿಕೆಯಿಂದ ಇರಲು ಹಾಗೂ ಆಗಾಗ್ಗೆ ನಿಮ್ಮ ಮೇಜಿನ ಸ್ಥಳದಿಂದ ಹೊರಬಂದು ನೀರು ಕುಡಿಯುವುದಕ್ಕೆ ಅಥವಾ ಅಲ್ಪ ವಿರಾಮ ತೆಗೆದುಕೊಳ್ಳುವುದಕ್ಕೆ ಅಡ್ಡಾಡುವುದನ್ನೂ ಅಭ್ಯಾಸ ಮಾಡಿಕೊಳ್ಳಬೇಕಿದೆ. ಅಥವಾ ಕುಳಿತಲ್ಲಿಯೇ ದೇಹದ ಭಾಗಗಳನ್ನು ಚಾಚುವ ಅಥವಾ ಸಣ್ಣ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬಹುದು. ಇದರೊಂದಿಗೆ ಊಟವಾದ ಬಳಿಕ 10 ನಿಮಿಷಗಳ ಕಾಲ ನಡೆಯುವುದೂ ಸಹ ಆರೋಗ್ಯಕ್ಕೆ ಒಳ್ಳೆಯದು. ಇದರೊಂದಿಗೆ ನಿಂತುಕೊಂಡು ಕಾಲ್ಬೆರಳುಗಳನ್ನು ಮುಟ್ಟಲು ಯತ್ನಿಸುವ ವ್ಯಾಯಾಮವನ್ನು ದಿನಕ್ಕೆ ಒಮ್ಮೆಯಾದರೂ ಮಾಡುವುದು ಒಳಿತು. ಈ ರೀತಿ ಮಾಡುವುದರಿಂದ ದೇಹದಲ್ಲಿ ಲ್ಯಾಕ್ಟಿಕ್ ಆಸಿಡ್ ಉತ್ಪಾದನೆಯನ್ನು ಕಡಿಮೆ ಮಾಡಬಹುದಾಗಿದ್ದು ಈ ಮೂಲಕ ಕೀಲು ನೋವು, ಬಿಗಿತ ಮುಂತಾದ ಸಮಸ್ಯೆಗಳನ್ನು ದೂರಮಾಡಿ, ರಕ್ತ ಪರಿಚಲನೆಯನ್ನು ಆರೋಗ್ಯವಾಗಿಡಲು ಸಾಧ್ಯವಾಗಲಿದೆ. 

-ದೀಪಿಕಾ ರಾಥೋಡ್

ಮುಖ್ಯ ಪೋಷಣೆ ಅಧಿಕಾರಿ, ಲ್ಯೂಕ್ ಕೌಟಿನ್ಹೋ ಹೋಲಿಸ್ಟಿಕ್ ಹೀಲಿಂಗ್ ಸಿಸ್ಟಮ್ಸ್.

ಲೇಖಕರು ಕ್ಲಿನಿಕಲ್ ಪೌಷ್ಟಿಕತಜ್ಞರಾಗಿದ್ದು, ಆರೋಗ್ಯಕರ ಜೀವನಶೈಲಿಯ ಆಯ್ಕೆಗಳ ಮೇಲೆ ಕೇಂದ್ರೀಕರಿಸಿದ್ದಾರೆ.

SCROLL FOR NEXT