ಮಾರುಕಟ್ಟೆಯಲ್ಲಿ ಚಿನ್ನದೊಂದಿಗೆ ಬೆಳ್ಳಿಯ ಬೆಲೆಯೂ ದಿನದಿಂದ ದಿನಕ್ಕೆ ಶರವೇಗದಲ್ಲಿ ಓಡುತ್ತಿದೆ. ಹಾಗಾಗಿ, ಜನರು ಇವುಗಳ ಬೆಲೆ ಕೊಂಚ ಕಡಿಮೆ ಆದರೂ ಖರೀದಿಸಲು ಮುಗಿಬೀಳುತ್ತಿದ್ದಾರೆ. ಇದರ ನಡುವೆಯೇ, ಮನೆಯಲ್ಲಿ ಬೆಳ್ಳಿ ಇಟ್ಟುಕೊಂಡವರನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆ ಅಂದ್ರೆ, ಬೆಳ್ಳಿ ವಸ್ತುಗಳು ಕಪ್ಪಾಗುವುದು! ಹೌದು, ಸಾಮಾನ್ಯವಾಗಿ ಗಾಳಿ ಮತ್ತು ತೇವಾಂಶಕ್ಕೆ ತೆರೆದುಕೊಂಡಾಗ ಬೆಳ್ಳಿಯು ರಾಸಾಯನಿಕ ಕ್ರಿಯೆಗೆ ಒಳಗಾಗಿ ಕಪ್ಪಾಗುತ್ತದೆ. ಆದರೆ ಕೆಲವು ಸರಳ ಸಂಗ್ರಹಣಾ ವಿಧಾನಗಳನ್ನು ಅನುಸರಿಸುವುದರಿಂದ ಇವುಗಳನ್ನು ದೀರ್ಘಕಾಲದವರೆಗೆ ಹೊಸದರಂತೆ ಕಾಯ್ದುಕೊಳ್ಳಬಹುದು. ಆ ಕುರಿತ ಮಾಹಿತಿ ಇಲ್ಲಿದೆ:
ಗಾಳಿ ತಾಗದಂತೆ ಮುಚ್ಚಿಡಿ:
ಬೆಳ್ಳಿಯ ಅತಿ ದೊಡ್ಡ ಶತ್ರುವೇ ಗಾಳಿ. ಹಾಗಾಗಿ, ಪ್ರತಿ ಬೆಳ್ಳಿ ವಸ್ತುವನ್ನು ಪ್ರತ್ಯೇಕವಾಗಿ ಜಿಪ್ ಲಾಕ್ ಕವರ್ ಅಥವಾ ಏರ್ ಟೈಟ್ ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ. ಇದರಿಂದ ಗಾಳಿ ಮತ್ತು ತೇವಾಂಶ ಒಳಗೆ ಹೋಗುವುದಿಲ್ಲ. ಇದರೊಂದಿಗೆ, ವಸ್ತುಗಳನ್ನು ನೇರವಾಗಿ ಇಡುವ ಬದಲು ಮೃದುವಾದ ಬಿಳಿ ಹತ್ತಿ ಬಟ್ಟೆ ಅಥವಾ ವೆಲ್ವೆಟ್ ಬಟ್ಟೆಯಲ್ಲಿ ಸುತ್ತಿ ಇಡಿ. ಆದರೆ, ಸಿಲ್ಕ್ ಬಟ್ಟೆಗಳನ್ನು ಬಳಸಬೇಡಿ.
ಚಾಕ್ ಪೀಸ್ ಜೊತೆ ಇಡಿ:
ಬೀರುವಿನಲ್ಲಿ ಬೆಳ್ಳಿ ಇರುವ ಡಬ್ಬದಲ್ಲಿ 2-3 ಚಾಕ್ ಪೀಸ್ ಅಥವಾ ಸಿಲಿಕಾ ಜೆಲ್ ಪ್ಯಾಕೆಟ್ ಇಡಿ. ಇವು ತೇವಾಂಶವನ್ನು ಹೀರಿಕೊಂಡು ಕಪ್ಪಾಗುವುದನ್ನು ತಡೆಯುತ್ತವೆ.
ಪೇಪರ್‌ನಲ್ಲಿ ಸುತ್ತಿ ಇಡಬೇಡಿ:
ಅನೇಕರು ನ್ಯೂಸ್ ಪೇಪರ್‌ನಲ್ಲಿ ಸುತ್ತುತ್ತಾರೆ. ಆದರೆ ಪೇಪರ್‌ನಲ್ಲಿರುವ ಇಂಕ್ ಮತ್ತು ಆಸಿಡ್ ಬೆಳ್ಳಿಯನ್ನು ಇನ್ನೂ ಬೇಗ ಕಪ್ಪು ಮಾಡುತ್ತದೆ. ಬದಲಾಗಿ ಫ್ಲಾನೆಲ್ ಬಟ್ಟೆ ಅಥವಾ ಆ್ಯಂಟಿ-ಟಾರ್ನಿಷ್ ಬ್ಯಾಗ್ ಬಳಸಿ.
ರಬ್ಬರ್ ಬ್ಯಾಂಡ್ ಬೇಡ:
ಬೆಳ್ಳಿ ವಸ್ತುಗಳನ್ನು ಕಟ್ಟಲು ರಬ್ಬರ್ ಬ್ಯಾಂಡ್‌ಗಳನ್ನು ಬಳಸಬೇಡಿ. ಯಾಕಂದ್ರೆ, ರಬ್ಬರ್‌ನಲ್ಲಿರುವ ಸಲ್ಫರ್ ಬೆಳ್ಳಿಯನ್ನು ಬೇಗನೆ ಕಪ್ಪಾಗಿಸುತ್ತದೆ. ಇದರೊಂದಿಗೆ ಉಣ್ಣೆ ಬಟ್ಟೆ, ಫೋಮ್ ಜೊತೆ ಕೂಡ ಬೆಳ್ಳಿಯ ಇವುಗಳನ್ನು ಎಂದಿಗೂ ಇಡಬೇಡಿ.
ಬೆವರು ಮತ್ತು ಪರ್ಫ್ಯೂಮ್ ತಾಗದಂತೆ ನೋಡಿಕೊಳ್ಳಿ
ಬೆಳ್ಳಿ ಆಭರಣ ಧರಿಸಿದ ನಂತರ ಬೆವರು, ಪರ್ಫ್ಯೂಮ್, ಲೋಷನ್ ತಾಗಿದರೆ ಕಪ್ಪಾಗುವುದು ಇನ್ನೂ ಬೇಗನೇ ಆಗುತ್ತದೆ. ಹಾಗಾಗಿ ಬೆಳ್ಳಿ ಆಭರಣಗಳನ್ನು ಬಳಕೆ ಮಾಡಿದ ತಕ್ಷಣ ಮೃದುವಾದ ಬಟ್ಟೆಯಿಂದ ಒರೆಸಿ ಆಮೇಲೆ ಜೋಪಾನವಾಗಿಡಿ.
ಇದರೊಂದಿಗೆ, ಎಲ್ಲಾ ಸರ, ಬಳೆಗಳನ್ನು ಒಟ್ಟಿಗೆ ಒಂದು ಪೆಟ್ಟಿಗೆಯಲ್ಲಿ ಹಾಕಿದರೆ ಪರಸ್ಪರ ಉಜ್ಜಿ ಗೀರು ಬೀಳುತ್ತದೆ. ಪ್ರತಿ ಪೀಸ್ ಗೆ ಪ್ರತ್ಯೇಕ ಸಣ್ಣ ಪೌಚ್ ಬಳಸಿ.
ಕಪ್ಪಾದ ಬೆಳ್ಳಿಗೆ ಮನೆಯಲ್ಲೇ ಹೊಳಪು ತರುವುದು ಹೇಗೆ?
ಒಂದು ಬಟ್ಟಲಲ್ಲಿ ಅಲ್ಯೂಮಿನಿಯಂ ಫಾಯಿಲ್ ಹಾಕಿ, ಬಿಸಿ ನೀರು + 1 ಚಮಚ ಬೇಕಿಂಗ್ ಸೋಡಾ + 1 ಚಮಚ ಉಪ್ಪು ಹಾಕಿ.
ಕಪ್ಪಾದ ಬೆಳ್ಳಿಯನ್ನು 2-3 ನಿಮಿಷ ಅದರಲ್ಲಿ ಅದ್ದಿ.
ಮೃದುವಾದ ಬಟ್ಟೆಯಿಂದ ಒರೆಸಿ. ಹೊಸದರಂತೆ ಹೊಳೆಯುತ್ತದೆ.
ಪ್ರಮುಖ ಸಲಹೆ: ಬೆಳ್ಳಿಯನ್ನು ವರ್ಷಕ್ಕೆ 1-2 ಬಾರಿ ಉಜ್ಜಿ ಸ್ವಚ್ಛ ಮಾಡಿ. ಅದರಲ್ಲೂ, ಸತತವಾಗಿ ಬಳಕೆ ಮಾಡುವುದೇ ಬೆಳ್ಳಿಯನ್ನು ಕಪ್ಪಾಗದಂತೆ ನೋಡಿಕೊಳ್ಳುವ ಬೆಸ್ಟ್ ದಾರಿ.
ಒಟ್ಟಾರೆಯಾಗಿ, ಬೆಳ್ಳಿ ಕಪ್ಪಾಗುವುದು ಸಹಜ. ಆದರೆ ಸರಿಯಾದ ರೀತಿಯಲ್ಲಿ ಸಂಗ್ರಹಿಸಿದರೆ 10 ವರ್ಷದ ನಂತರವೂ ಅದು ಹೊಸದರಂತೆ ಇರುತ್ತದೆ. ಇನ್ಮುಂದೆ ಬೀರುವಿನಲ್ಲಿ ಎಸೆಯುವ ಮೊದಲು ಈ ಟಿಪ್ಸ್ ನೆನಪಿಡಿ