ಗ್ಲಾಸ್ ಸ್ಕಿನ್ ಎಂದರೆ ಕೇವಲ ಹೊಳೆಯುವ ಮುಖವಲ್ಲ, ಅದು ಒಳಗಿನಿಂದ ತೇವಾಂಶದಿಂದ ತುಂಬಿದ, ಮೃದುವಾದ, ಸಮತೋಲನಗೊಂಡ ಮತ್ತು ಸ್ವಚ್ಛವಾದ ಚರ್ಮದ ಲುಕ್. ಇದು ತಕ್ಷಣ ಸಿಗುವ ಫಲಿತಾಂಶವಲ್ಲ; ಸರಿಯಾದ ಆರೈಕೆ, ಆಹಾರ ಮತ್ತು ನಿರಂತರತೆಯಿಂದ ನಿಧಾನವಾಗಿ ರೂಪುಗೊಳ್ಳುವ ಚರ್ಮದ ಸ್ಥಿತಿ.
ಈ ಲುಕ್ ಪಡೆಯಲು ದುಬಾರಿ ಕ್ರೀಮ್‌ಗಳಿಗಿಂತ ಹೆಚ್ಚಾಗಿ ಸರಿಯಾದ ಸ್ಕಿನ್‌ಕೇರ್ ರೂಟೀನ್ ಮತ್ತು ನೈಸರ್ಗಿಕ ಆರೈಕೆ ಮುಖ್ಯ.
ಗ್ಲಾಸ್ ಸ್ಕಿನ್ ಪಡೆಯಲು ಚರ್ಮವನ್ನು ಮೊದಲು ಕ್ಲೆನ್ಸ್ ಮಾಡುವುದು ಅಗತ್ಯ. ದಿನಕ್ಕೆ ಎರಡು ಬಾರಿ ಮುಖ ತೊಳೆಯಬೇಕು. ಇದು ಚರ್ಮದಲ್ಲಿರುವ ಧೂಳು ಮತ್ತು ತೈಲವನ್ನು ತೆಗೆದುಹಾಕುತ್ತದೆ. ನಂತರ ಚರ್ಮಕ್ಕೆ ತೇವಾಂಶ ನೀಡುವುದು ಬಹಳ ಮುಖ್ಯ. ಅಲೋವೆರಾ ಜೆಲ್, ಹೈಡ್ರೇಟಿಂಗ್ ಕ್ರೀಮ್ ಅಥವಾ ನೈಸರ್ಗಿಕ ತೈಲಗಳನ್ನು ಬಳಸಿ ಚರ್ಮವನ್ನು ಮೃದುವಾಗಿಸಬಹುದು.
ಅಡುಗೆಮನೆಯಲ್ಲಿರುವ ಸರಳ ನೈಸರ್ಗಿಕ ಪದಾರ್ಥಗಳನ್ನು ಸರಿಯಾಗಿ ಬಳಸಿದರೆ ದುಬಾರಿ ಸ್ಕಿನ್‌ಕೇರ್ ಉತ್ಪನ್ನಗಳಿಲ್ಲದೆ ಕೂಡ ಚರ್ಮದಲ್ಲಿ ನೈಸರ್ಗಿಕ ಹೊಳಪು ತರಬಹುದು.
ಅಕ್ಕಿ ತೊಳೆದ ನೀರು ಚರ್ಮದ ಹೊಳಪಿಗೆ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತದೆ. ಅಕ್ಕಿಯಲ್ಲಿ ಇರುವ ನೈಸರ್ಗಿಕ ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮದ ಕಪ್ಪುತನವನ್ನು ಕಡಿಮೆ ಮಾಡಿ, ಮೃದುವಾಗುವಂತೆ ಮಾಡುತ್ತದೆ.
ಇದಕ್ಕಾಗಿ ಅಕ್ಕಿಯನ್ನು ನೀರಿನಲ್ಲಿ ಅರ್ಧ ಗಂಟೆ ನೆನೆಸಿ ಆ ನೀರನ್ನು ಶೋಧಿಸಿ ಟೋನರ್ ಆಗಿ ಬಳಸಬಹುದು. ಇದನ್ನು ಮುಖ ತೊಳೆಯಿದ ನಂತರ ಕಾಟನ್ ಮೂಲಕ ಹಚ್ಚಿದರೆ ಚರ್ಮ ತಾಜಾತನವನ್ನು ಪಡೆಯುತ್ತದೆ ಮತ್ತು ನಿಧಾನವಾಗಿ ಹೊಳೆಯುವ ಚರ್ಮ ನಿಮ್ಮದಾಗುತ್ತದೆ.
ಬಳಕೆ ವಿಧಾನ:
2 ಚಮಚ ಅಕ್ಕಿಯನ್ನು 1 ಕಪ್ ನೀರಿನಲ್ಲಿ 30 ನಿಮಿಷ ನೆನೆಸಿ
ನಂತರ ನೀರನ್ನು ಶೋಧಿಸಿ ಅದನ್ನು ಟೋನರ್ ಆಗಿ ಬಳಸಿ
ಅಕ್ಕಿ ಹಿಟ್ಟನ್ನು ಹಾಲಿನೊಂದಿಗೆ ಮಿಶ್ರಣ ಮಾಡಿ 10 ನಿಮಿಷ ಮಾಸ್ಕ್ ಆಗಿ ಬಳಸಬಹುದು
ಜೇನುತುಪ್ಪವು ನೈಸರ್ಗಿಕ ತೇವಾಂಶದ ಮೂಲವಾಗಿದೆ. ಇದು ಚರ್ಮವನ್ನು ತೇವಾಂಶವಿರುವಂತೆ ಮಾಡಲಿದ್ದು, ನೀರು ಹಿಡಿದುಕೊಳ್ಳಲು ಸಹಾಯ ಮಾಡುತ್ತದೆ. ಮುಖ ಸ್ವಲ್ಪ ತೇವವಾಗಿರುವಾಗ ಜೇನುತುಪ್ಪ ಹಚ್ಚಿ 10 ರಿಂದ 15 ನಿಮಿಷ ಬಿಡುವುದು ಚರ್ಮವನ್ನು ಮೃದುವಾಗಿಸಿ ಪ್ಲಂಪ್ ಲುಕ್ ನೀಡುತ್ತದೆ. ಕೆಲವರು ಇದನ್ನು ರೋಸ್ ವಾಟರ್ ಜೊತೆಗೆ ಮಿಶ್ರಣ ಮಾಡಿ ಬಳಸುವುದುಂಟು. ಇದರಿಂದ ಚರ್ಮದ ಹೊಳಪು ಹೆಚ್ಚಾಗುತ್ತದೆ.
ಬಳಕೆ ವಿಧಾನ:
ಮುಖ ತೊಳೆದ ನಂತರ ಚರ್ಮದಲ್ಲಿ ತೇವಾಂಶ ಇರುವಾಗಲೇ ಜೇನುತಪ್ಪ ಹಚ್ಚಿ. 15 ನಿಮಿಷಗಳ ನಂತರ ತೊಳೆಯಿರಿ.
ಹೆಚ್ಚುವರಿ ಹೊಳಪಿಗಾಗಿ ರೋಸ್ ವಾಟರ್ ಮಿಶ್ರಣ ಮಾಡಬಹುದು.
ಅಲೋವೆರಾ ಜೆಲ್ ಚರ್ಮಕ್ಕೆ ತಕ್ಷಣದ ತಂಪು ಮತ್ತು ಹೈಡ್ರೇಶನ್ ನೀಡುತ್ತದೆ. ಇದು ವಿಶೇಷವಾಗಿ ಸೆನ್ಸಿಟಿವ್ ಅಥವಾ ರೆಡ್‌ನೆಸ್ ಇರುವ ಚರ್ಮಕ್ಕೆ ಉಪಯುಕ್ತ. ತಾಜಾ ಅಲೋವೆರಾ ಜೆಲ್ ಅನ್ನು ನೇರವಾಗಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಡಬಹುದು ಅಥವಾ ರಾತ್ರಿ ಮಲಗುವ ಮೊದಲು ಹಚ್ಚಿದರೆ ಬೆಳಿಗ್ಗೆ ಚರ್ಮ ಹೆಚ್ಚು ಮೃದುವಾಗಿರುತ್ತದೆ. ಕೆಲವರು ಇದಕ್ಕೆ ಸ್ವಲ್ಪ ಅರಿಶಿನ ಸೇರಿಸಿ ಬಳಸುತ್ತಾರೆ, ಇದು ಚರ್ಮವನ್ನು ಮತ್ತಷ್ಟು ಹೊಳೆಯುವಂತೆ ಮಾಡುತ್ತದೆ.
ಬಳಕೆ ವಿಧಾನ:
ತಾಜಾ ಅಲೋವೆರಾ ಜೆಲ್ ಅನ್ನು ತೆಳುವಾಗಿ ಮುಖಕ್ಕೆ ಹಚ್ಚಿ
ರಾತ್ರಿ ಮಲಗುವ ಮೊದಲು ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
ಸ್ವಲ್ಪ ಅರಿಶಿನ ಸೇರಿಸಿದರೆ ಹೆಚ್ಚುವರಿ ಲಾಭ ಸಿಗುತ್ತದೆ
ಮೊಸರು ಚರ್ಮದ ಸತ್ತ ಜೀವಕೋಶಗಳನ್ನು ತೆಗೆದು ಹಾಕುತ್ತದೆ. ಇದರಲ್ಲಿ ಇರುವ ಲ್ಯಾಕ್ಟಿಕ್ ಆಸಿಡ್ ಮೃತಕೋಶಗಳನ್ನು ತೆಗೆದುಹಾಕಿ ಹೊಸ ಚರ್ಮವನ್ನು ಹೊರತರುತ್ತದೆ. ಮೊಸರನ್ನು ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ 10 ರಿಂದ 15 ನಿಮಿಷ ಮುಖಕ್ಕೆ ಹಚ್ಚಿ ತೊಳೆಯುವುದರಿಂದ ಚರ್ಮ ಸ್ಮೂತ್ ಆಗುತ್ತದೆ. ಇದನ್ನು ವಾರಕ್ಕೆ ಎರಡು ಬಾರಿ ಬಳಸುವುದು ಉತ್ತಮ.
ಬಳಕೆ ವಿಧಾನ:
1 ಚಮಚ ಮೊಸರು + 1 ಚಮಚ ಜೇನುತುಪ್ಪ ಮಿಶ್ರಣ ಮಾಡಿ
10–15 ನಿಮಿಷ ಮುಖಕ್ಕೆ ಹಚ್ಚಿ ನಂತರ ತೊಳೆಯಿರಿ.
ಸೌತೆಕಾಯಿ ಚರ್ಮಕ್ಕೆ ತಕ್ಷಣದ ಫ್ರೆಶ್‌ನೆಸ್ ನೀಡುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ನೀರು ಇರುವುದರಿಂದ ಚರ್ಮವನ್ನು ತಂಪಾಗಿಸಿ ಡಿಹೈಡ್ರೇಶನ್ ಕಡಿಮೆ ಮಾಡುತ್ತದೆ. ಸೌತೆಕಾಯಿಯನ್ನು ಪೇಸ್ಟ್ ಆಗಿ ಮುಖಕ್ಕೆ ಹಚ್ಚಬಹುದು ಅಥವಾ ಅದರ ರಸವನ್ನು ಟೋನರ್ ಆಗಿ ಬಳಸಬಹುದು. ಇದು ಕ್ಲೀನ್ ಮತ್ತು ರಿಫ್ರೆಶ್ಡ್ ಲುಕ್ ನೀಡುತ್ತದೆ.
ಬಳಕೆ ವಿಧಾನ:
ಸೌತೆಕಾಯಿಯನ್ನು ಪೇಸ್ಟ್ ಮಾಡಿ ಮುಖಕ್ಕ ಹಚ್ಚಿ
ಅಥವಾ ಅದರ ರಸವನ್ನು ಟೋನರ್ ಆಗಿ ಬಳಸಿ.
ಗ್ಲಾಸ್ ಸ್ಕಿನ್ ಪಡೆಯಲು ಒಂದು ಬಾರಿ ಮಾತ್ರ ಆರೈಕೆ ಮಾಡಿದರೆ ಸಾಕಾಗುವುದಿಲ್ಲ. ಇದಕ್ಕೆ ನಿರಂತರ ರೂಟೀನ್ ಮತ್ತು ಸಮತೋಲನದ ಆರೈಕೆ ಅಗತ್ಯ. ದಿನನಿತ್ಯ ನಿಮ್ಮ ಮುಖಕ್ಕೆ ಕ್ಲೆನ್ಸಿಂಗ್, ಹೈಡ್ರೇಶನ್ ಮತ್ತು ತೇವಾಂಶವನ್ನು ಕಾಪಾಡುವುದು ಮುಖ್ಯ.
ವಾರಕ್ಕೆ ಎರಡು ಅಥವಾ ಮೂರು ಬಾರಿ ನೈಸರ್ಗಿಕ ಮಾಸ್ಕ್‌ಗಳನ್ನು ಬಳಸುವುದು ಉತ್ತಮ ಫಲಿತಾಂಶ ನೀಡುತ್ತದೆ. ಚರ್ಮ ಸಿಪ್ಪೆಸುಲಿಯುವಿಕೆಯನ್ನು ತಪ್ಪಿಸಿ, ಏಕೆಂದರೆ ಅದು ಚರ್ಮದ ನೈಸರ್ಗಿಕ ತೈಲವನ್ನು ಹಾನಿಗೊಳಿಸಬಹುದು.
ಅತ್ಯಂತ ಮುಖ್ಯವಾಗಿ, ಚರ್ಮದ ಹೊರಗಿನ ಆರೈಕೆಯ ಜೊತೆಗೆ ಆಂತರಿಕ ಆರೈಕೆ ಕೂಡ ಮುಖ್ಯ. ಹೀಗಾಗಿ ಸಾಕಷ್ಟು ನೀರು ಕುಡಿಯುವುದು, ಸರಿಯಾದ ನಿದ್ರೆ ಮತ್ತು ಸಮತೋಲಿತ ಆಹಾರ ಸೇವನೆ ಮಾಡಿ. ಸನ್‌ಸ್ಕ್ರೀನ್ ಬಳಸದೇ ಗ್ಲಾಸ್ ಸ್ಕಿನ್ ಸ್ಥಿರವಾಗಿರಲು ಸಾಧ್ಯವಿಲ್ಲ, ಏಕೆಂದರೆ ಸೂರ್ಯಕಿರಣಗಳು ಚರ್ಮದ ಹೊಳಪನ್ನು ಹಾನಿಗೊಳಿಸುತ್ತವೆ. ಹೀಗಾಗಿ ನಮ್ಮ ಸ್ಕಿನ್'ಗೆ ಸರಿ ಹೊಂದುವ ಸನ್ ಸ್ಕ್ರೀನ್ ಬಳಕೆ ಮಾಡಿ.
ಸರಿಯಾದ ಕ್ರಮದಲ್ಲಿ ಈ ಟಿಪ್ಸ್ ಗಳನ್ನು ಫಾಲೋ ಮಾಡಿದರೆ, ಹೊಳೆಯುವ, ಮೃದುವಾದ ಮತ್ತು ಆರೋಗ್ಯಕರ ಗ್ಲಾಸ್ ಲುಕ್ ಸ್ಕಿನ್ ಪಡೆಯಬಹುದು.