LIVE

ರಾಷ್ಟ್ರ ರಾಜಧಾನಿಯಲ್ಲಿ 'ಕೈ', 'ಕಮಲ' ಗುಡಿಸಿ ಗುಂಡಾಂತರ ಮಾಡಿದ 'ಪೊರಕೆ'!

Nagaraja AB

ನವದೆಹಲಿ:ಇಡೀ ರಾಷ್ಟ್ರ ಕುತೂಹಲದಿಂದ ಎದುರು ನೋಡುತ್ತಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳಂತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬಹುಮತ  ಸಾಧಿಸುವತ್ತ ದಾಪುಗಾಲು ಇಟ್ಟಿದ್ದು, ಮೂರನೇ ಬಾರಿಗೆ ಅಧಿಕಾರ ಹಿಡಿಯುವುದು ಖಚಿತವಾಗಿದೆ.

ಇತ್ತೀಚಿನ ಮಾಹಿತಿ ಪ್ರಕಾರ, ಆಮ್ ಆದ್ಮಿ ಪಕ್ಷ 62, ಬಿಜೆಪಿ 8 ಸ್ಥಾನಗಳಲ್ಲಿ ಮುನ್ನಡೆ ಕಾಯ್ಡುಕೊಂಡಿದ್ದು, ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ. ಕಾಂಗ್ರೆಸ್ ಸಾಧನೆ ಶೂನ್ಯವಾಗಿದೆ.

ಪಕ್ಷ ಜಯಬೇರಿಯತ್ತ ಸಾಗುತ್ತಿರುವಂತೆ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೊಡಿಯಾ ಮತ್ತಿತರ ಗಣ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದು, ಸಂಭ್ರಮಪಡುತ್ತಿದ್ದಾರೆ.

ದೆಹಲಿಯಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವತ್ತ ಹೆಜ್ಜೆ ಹಾಕಿರುವ ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ  ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ , ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಮತ್ತಿತರರು ಶುಭ ಕೋರಿದ್ದಾರೆ. 

ರಾಷ್ಟ್ರ ರಾಜಧಾನಿಯ 70 ಸ್ಥಾನಕ್ಕಾಗಿ ಫೆಬ್ರವರಿ 8 ರಂದು ನಡೆದಿದ್ದ ಚುನಾವಣೆಯಲ್ಲಿ  ಶೇ. 67. 5 ರಷ್ಟು ಮತದಾನವಾಗಿತ್ತು.  593 ಪುರುಷರು ಹಾಗೂ 79 ಮಹಿಳೆಯರು ಸೇರಿದಂತೆ ಸುಮಾರು  670 ಅಭ್ಯರ್ಥಿಗಳ ರಾಜಕೀಯ ಅದೃಷ್ಟ ಇಂದು ನಿರ್ಧಾರವಾಗಲಿದೆ.

SCROLL FOR NEXT