ಪಾಕಿಸ್ತಾನ ಉಗ್ರರ ತವರು. ಅಲ್ಲಿ ಉಗ್ರರ ದಾಳಿ ಸಾಮಾನ್ಯ ಎಂಬ ಭಾವನೆ ಎಲ್ಲರಲ್ಲಿಯೂ ಇತ್ತು. ಆದರೆ ಕಳೆದ ಡಿಸೆಂಬರ್ 16ರಂದು ನಡೆದ ಉಗ್ರ ದಾಳಿಯನ್ನು ಕೇವಲ ಪಾಕಿಸ್ತಾನವಷ್ಟೇ ಅಲ್ಲದೇ ಇಡೀ ವಿಶ್ವವೇ ಕ್ಷಮಿಸುವುದಿಲ್ಲ.
ಡಿಸೆಂಬರ್ 16 ಮಂಗಳವಾರ ಪಾಕಿಸ್ತಾನದಲ್ಲಿರುವ ಪೇಶಾವರದಲ್ಲಿರುವ ಸೇನಾ ಶಾಲೆಯ ಮೇಲೆ ದಾಳಿ ನಡೆಸಿದ್ದ ಸುಮಾರು 8 ಮಂದಿ ಉಗ್ರರು ಮನಸೋ ಇಚ್ಛೆ ದಾಳಿ ನಡೆಸಿ 92 ಮಕ್ಕಳು ಸೇರಿದಂತೆ ಒಟ್ಟು 148 ಮಂದಿಯನ್ನು ಹತ್ಯೆಗೈದಿದ್ದರು. ಪಾಕಿಸ್ತಾನ ಸೇನೆ ಮತ್ತು ಉಗ್ರರ ನಡುವಿನ ಈ ಘರ್ಷಣೆ ಸುಮಾರು ಗಂಟೆಗಳ ವರೆಗೂ ನಡೆಯಿತು.
ಅಂತಿಮವಾಗಿ ಪಾಕಿಸ್ತಾನಿ ಸೈನಿಕರು ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾದರಾದರೂ ಅಷ್ಟರಲ್ಲಾಗಲೇ 92 ಅಮಾಯಕ ಮಕ್ಕಳ ಹತ್ಯೆಯಾಗಿತ್ತು. ಪಾಕಿಸ್ತಾನದ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಪ್ರಮಾಣದಲ್ಲಿ ಮಕ್ಕಳ ಹತ್ಯೆಯಾಗಿರಲಿಲ್ಲ.
ದಾಳಿ ಹೊಣೆಹೊತ್ತ ತಾಲಿಬಾನ್ ಸಂಘಟನೆ, ವಜೀರಿಸ್ತಾನದಲ್ಲಿ ಪಾಕಿಸ್ತಾನ ಸೇನೆ ಕೈಗೊಂಡಿರುವ ಕಾರ್ಯಚರಣೆಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೇಳಿತ್ತು. ಘಟನೆ ಕುರಿತಂತೆ ವಿಶ್ವ ಸಮುದಾಯ ಉಗ್ರರ ಪೈಶಾಚಿಕ ಕೃತ್ಯವನ್ನು ಟೀಕಿಸಿತ್ತು. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದರು.
ಇನ್ನು ಉಗ್ರರ ದಾಳಿ ಬಳಿಕ ಎಚ್ಚೆತ್ತುಕೊಂಡಂತಿರುವ ಪಾಕಿಸ್ತಾನ ಸರ್ಕಾರ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಉಗ್ರರನ್ನು ಶೀಘ್ರದಲ್ಲಿಯೇ ಗಲ್ಲಿಗೇರಿಸಲಾಗುತ್ತದೆ ಎಂದು ಹೇಳಿಕೆ ನೀಡಿದೆ. ಆದರೆ ಪಾಕಿಸ್ತಾನ ತನ್ನ ಹೇಳಿಕೆಯ ಮೇಲೆ ಎಷ್ಟು ಪರಿಣಾಮಕಾರಿಯಾಗಿ ನಿಲ್ಲುತ್ತದೆ ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.