"ವರ್ಧಾ" ಚಂಡಮಾರುತ ವೇಳೆ 10 ಸಾವಿರ ಮಂದಿ ರಕ್ಷಿಸಿದ ಇಸ್ರೋ!
2016ರ ವರ್ಷಾಂತ್ಯದಲ್ಲಿ ತಮಿಳುನಾಡು ಹಾಗೂ ಆಂಧ್ರ ಪ್ರದೇಶಗಳನ್ನು ಕಾಡಿದ ವರ್ಧಾ ಚಂಡಮಾರುತದ ವೇಳೆ ಇಸ್ರೋ ಉಡಾಯಿಸಿದ್ದ ಇನ್ಸಾಟ್ 3ಡಿಆರ್, ಸ್ಕಾಟ್ ಸ್ಯಾಟ್-1 ಉಪಗ್ರಹಗಳು ಅಪಾಯದಲ್ಲಿ ಸಿಲುಕಿದ್ದ ಸಾವಿರಾರು ಮಂದಿಯ ಜೀವ ಉಳಿಸಲು ನೆರವಾಗಿತ್ತು. ವರ್ಧಾ ಚಂಡಮಾರುತದ ಚಲನೆ ಕುರಿತು ನಿಖರ ಮಾಹಿತಿ ನೀಡಿದ್ದ ಈ ಉಪಗ್ರಹಗಳು ನೀಡಿದ ಮಾಹಿತಿ ಮೇರೆಗೆ ವರ್ಧಾ ಚಂಡಮಾರುತದ ಮಾರ್ಗವನ್ನು ಗುರುತಿಸಿ ಅಲ್ಲಿದ್ದ ಸಾವಿರಾರು ಮಂದಿಯನ್ನು ಮೊದಲೇ ಸ್ಥಳಾಂತರ ಮಾಡಸಲಾಗಿತ್ತು. ಆ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ಇಸ್ರೋದ ಇನ್ಸಾಟ್ 3ಡಿಆರ್, ಸ್ಕಾಟ್ ಸ್ಯಾಟ್-1 ಉಪಗ್ರಹಗಳ ಮುಖಾಂತರ ತಡೆಯಲಾಗಿತ್ತು.
ಪಾಕ್ ವಿರುದ್ಧದ ಸೀಮಿತ ದಾಳಿಗೆ ನೆರವು ನೀಡಿದ್ದ ಉಪಗ್ರಹಗಳು
ಇಡೀ ವಿಶ್ವಕ್ಕೇ ಭಾರತೀಯ ಸೇನೆಯ ಪರಾಕ್ರಮ ಏನು ಎಂದು ತೋರಿಸಿದ ಸೀಮಿತ ದಾಳಿ ಸಂದರ್ಭದಲ್ಲಿ ಇಸ್ರೋದ ಉಪಗ್ರಹಗಳು ನೆರವಾಗಿದ್ದವು. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಸೀಮಿತ ದಾಳಿ ವೇಳೆ ಇಸ್ರೋ ಉಡಾವಣೆ ಮಾಡಿದ್ದ ಕಾರ್ಟೋಸ್ಯಾಟ್ ಸರಣಿಯ ಉಪಗ್ರಹಗಳು ನೀಡಿದ್ದ ಚಿತ್ರಗಳು ಸೇನಾ ಕಾರ್ಯಾಚರಣೆಗೆ ನೆರವಾಗಿದ್ದವು, ಸೀಮಿತ ದಾಳಿಗೆ ಕಾರ್ಯತಂತ್ರ ರೂಪಿಸುವ ಮೊದಲು ದಾಳಿ ನಡೆಸಲು ಉದ್ದೇಶಿಸಲಾಗಿದ್ದ ಸ್ಥಳದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಇಸ್ರೋ ಸಂಸ್ಥೆಯ ಕಾರ್ಟೋಸ್ಯಾಟ್ ಸರಣಿಯ ಉಪಗ್ರಹಗಳು ಕಳಿಸಿದ್ದ ಚಿತ್ರಗಳನ್ನೇ ಬಳಕೆ ಮಾಡಲಾಗಿತ್ತು. ಇಸ್ರೋದ ಕಾರ್ಟೋಸ್ಯಾಟ್ ಸರಣಿಯ ಉಪಗ್ರಹದ ಚಿತ್ರಗಳು ಸ್ಪಷ್ಟ ನಿಖರತೆ ಹೊಂದಿದ್ದು, ಉಪಗ್ರಹಗಳನ್ನು 2016 ರ ಜೂನ್ ನಲ್ಲಿ ಉಡಾವಣೆ ಮಾಡಲಾಗಿತ್ತು. ಆದರೆ ಇಸ್ರೋ ಈ ಉಪಗ್ರಹಗಳನ್ನು ಕಾರ್ಯಕತ್ರದ ಭಾಗವಾಗಿ ಬಳಕೆಯಾಗುವುದರ ಬಗ್ಗೆ ಯಾವುದೇ ಮಾಹಿತಿ ನೀಡದೆ ಗೌಪ್ಯವಾಗಿಟ್ಟಿತ್ತು. ಇಸ್ರೋ ಉಪಗ್ರಹಕ್ಕೆ ಬಳಕೆ ಮಾಡಲಾಗಿದ್ದ ಉಪಕರಣಗಳನ್ನು ಕಾರ್ಯತಂತ್ರಗಳಿಗೆ ನೆರವಾಗುವಂತೆ ರಕ್ಷಣಾ ಪಡೆಗಳ ಅಧಿಕಾರಿಗಳು ನಿರ್ಧರಿಸಿದ್ದರು ಎಂಬ ಮಾಹಿತಿ ಬಹಿರಂಗವಾಗಿದೆ. ಬಾಹ್ಯಾಕಾಶದಿಂದ ಭೂಮಿಯ ಮೇಲೆ ನಿಗಾವಹಿಸುವುದಕ್ಕಾಗಿ ಇಸ್ರೋ ಕಾರ್ಟೋಸ್ಯಾಟ್ ಸರಣಿಯ ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. ಗಡಿಭಾಗ ಹಾಗೂ ಕರಾವಳಿ ಪ್ರದೇಶ, ಹವಾಮಾನ, ಕೃಷಿ, ಭೂ ನಕ್ಷೆ ಸೇರಿದಂತೆ ಹಲವು ಮಾಹಿತಿಗಳನ್ನು ಕಾರ್ಟೋಸ್ಯಾಟ್ ಉಪಗ್ರಹದಿಂದ ಪಡೆಯಬಹುದಾಗಿದೆ.
ಇಸ್ರೋ ಮಹತ್ವದ ಮೈಲುಗಲ್ಲುಗಳು
ಏಕಕಾಲಕ್ಕೆ 2 ಕಕ್ಷೆಗೆ 8 ಉಪಗ್ರಹಗಳ ಯಶಸ್ವಿ ಉಡಾವಣೆ
ಏಕಕಾಲಕ್ಕೆ ಎರಡು ಕಕ್ಷೆಗಳಿಗೆ 8 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಕಾಕಾಶ ಸಂಸ್ಥೆ ಇಸ್ರೋ ಮತ್ತೊಂದು ಸಾಧನೈಗೆದಿತ್ತು. ಸೆಪ್ಟೆಂಬರ್ 26ರಂದು ಆಂಧ್ರ ಪ್ರದೇಶದ ಶ್ರೀಹರಿ ಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಲ್ಲಿ 3 ಸ್ವದೇಶಿ ಹಾಗೂ 5 ವಿದೇಶಿ ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿತ್ತು. ಈ ವೇಳೆ 371 ಕೆಜಿ. ತೂಕದ ಸ್ಕಾಟ್ಸ್ಯಾಟ್-1, ಬೆಂಗಳೂರಿನ ಪಿಇಎಸ್ ಯೂನಿವರ್ಸಿಟಿ ಸಹಭಾಗಿತ್ವದಲ್ಲಿ ನಿರ್ವಿುಸಿದ ಪಿಸ್ಯಾಟ್ ಉಪಗ್ರಹ ಸೇರಿದಂತೆ ಒಟ್ಟು 8 ಉಪಗ್ರಹಗಳನ್ನು ಪಿಎಸ್ಎಲ್ ವಿ ಉಡಾವಣಾ ವಾಹಕದ ಮೂಲಕ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು.
ಸ್ಕ್ರ್ಯಾಮ್ ಜೆಟ್ ರಾಕೆಟ್ ಎಂಜಿನ್ ನ ಯಶಸ್ವಿ ಪರೀಕ್ಷಾರ್ಥ ಉಡಾವಣೆ
ವಾತಾವರಣದಲ್ಲಿನ ಆಮ್ಲಜನಕವನ್ನೇ ಇಂಧನವಾಗಿ ಬಳಸುವ ಮತ್ತು ಅತ್ಯಂತ ಕಡಿಮೆ ಇಂಧನ ಬಳಕೆ ಮಾಡುವ ಸ್ಕ್ರ್ಯಾಮ್ ಜೆಟ್ ರಾಕೆಟ್ ಎಂಜಿನ್ ಅನ್ನು ಇಸ್ರೋ ಕಳೆದ ಆಗಸ್ಟ್ ನಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು. ಆಂಧ್ರ ಪ್ರದೇಶದ ಶ್ರೀ ಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಈ ಪರೀಕ್ಷಾರ್ಥ ಉಡಾವಣೆ ನೆರವೇರಿದ್ದು, ರಾಕೆಟ್ ನಲ್ಲಿ ಆಮ್ಲಜನಕ ಹೊತ್ತೊಯ್ಯುವ ಸಾಮರ್ಥ್ಯವಿರುವುದರಿಂದ ಒಟ್ಟು ರಾಕೆಟ್ ನ ಭಾರ ಹಾಗೂ ಗಾತ್ರ ಕಡಿಮೆಯಾಗುತ್ತದೆ. ಹೀಗಾಗಿ ಹೆಚ್ಚು ತೂಕದ ಉಪಗ್ರಹಗಳನ್ನು ರಾಕೆಟ್ ಹೊತ್ತೊಯ್ಯಬಲ್ಲದು ಮತ್ತು ಈ ರಾಕೆಟ್ ಮೂಲಕ ಮಾಡುವ ಉಡಾವಣೆ ವೆಚ್ಚ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಇಸ್ರೋ ಹೇಳಿತ್ತು.