ಫೆಬ್ರವರಿ 5-ಕನ್ಯಾಕುಮಾರಿ-ಬೆಂಗಳೂರು ಐಲೆಂಡ್ ಎಕ್ಸ್ ಪ್ರೆಸ್
ಕನ್ಯಾಕುಮಾರಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಕನ್ಯಾಕುಮಾರಿ-ಬೆಂಗಳೂರು ಐಲೆಂಡ್ ಎಕ್ಸ್ ಪ್ರೆಸ್ ರೈಲು ಕಳೆದ ಫೆಬ್ರವರಿ 5ರಂದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪಚೂರ್ ಗ್ರಾಮದ ಬಳಿ ಹಳಿ ತಪ್ಪಿತ್ತು. ರೈಲಿನ 4 ಬೋಗಿಗಳು ಹಳಿ ತಪ್ಪಿದ ಪರಿಣಾಮ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಘಟನಾ ಸ್ಥಳಕ್ಕೆ ದೌಡಾಯಿಸಿದ್ದ ಅಧಿಕಾರಿಗಳು ಪ್ರಯಾಣಿಕರನ್ನು ಬಸ್ ಗಳ ಮೂಲಕ ಬೆಂಗಳೂರಿಗೆ ರವಾನಿಸಿದರು. ಅಂತೆಯೇ ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಮೇ-1-ಹಳೆಯ ದೆಹಲಿ-ಫೈಜಾಬಾದ್ ಎಕ್ಸ್ ಪ್ರೆಸ್
ಉತ್ತರ ಪ್ರದೇಶದ ಫೈಜಾಬಾದ್ ಹಾಗೂ ದೆಹಲಿ ನಡುವೆ ಸಂಚರಿಸುತ್ತಿದ್ದ ಹಳೆಯ ದೆಹಲಿ-ಫೈಜಾಬಾದ್ ಎಕ್ಸ್ ಪ್ರೆಸ್ ರೈಲು ಕಳೆದ ಮೇ 1ರಂದು ಹಾಪುರ್ ಜಿಲ್ಲೆಯ ಘಡ್ ಮುಕ್ತೇಶ್ವರ ಬಳಿ ಹಳಿ ತಪ್ಪಿತ್ತು. ರೈಲಿನ ಒಟ್ಟು 8 ಬೋಗಿಗಳು ಹಳಿ ತಪ್ಪಿದ್ದವು. ಅಪಘಾತದ ಸಂದರ್ಭದಲ್ಲಿ ರೈಲು ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಸಾವನ್ನಪ್ಪದೇ ಇದ್ದರೂ 12 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು.
ಮೇ 5- ಚೆನೈ-ತಿರುವನಂತಪುರಂ ಸೆಂಟ್ರಲ್ ಸೂಪರ್ ಫಾಸ್ಟ್ ಮತ್ತು ಉಪನಗರ ರೈಲು ಅಪಘಾತ
ಮೇ 5ರಂದು ಚೆನೈ-ತಿರುವನಂತಪುರಂ ನಡುವೆ ಸಂಚರಿಸುತ್ತಿದ್ದ ಸೂಪರ್ ಫಾಸ್ಟ್ ರೈಲು ಹಾಗೂ ಸಬ್ ಅರ್ಬನ್ ರೈಲು ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ 8 ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ಗಾಯಾಳುಗಳಲ್ಲಿ ಸಮೀಪದ ಅವಧಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡೂ ರೈಲುಗಳ ಒಂದೇ ಸಮಯದಲ್ಲಿ ಅಕ್ಕಪಕ್ಕದ ಹಳಿಗಳ ಮೇಲೆ ವಾಗವಾಗಿ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿತ್ತು.
ಮೇ 19 ಕನ್ಯಾಕುಮಾರಿ-ದಿಬ್ರುಘಢ್ ವಿವೇಕ್ ಎಕ್ಸ್ ಪ್ರೆಸ್
ಮೇ 19ರಂದು ಕನ್ಯಾಕುಮಾರಿಯಿಂದ ಹೊರಟಿದ್ದ ಕನ್ಯಾಕುಮಾರಿ-ದಿಬ್ರುಘಢ್ ವಿವೇಕ್ ಎಕ್ಸ್ ಪ್ರೆಸ್ ರೈಲು ಕೇರಳದ ತಿರುವನಂತಪುರಂ ಬಳಿಯ ನಗರ್ ಕೋಯಿಲ್ ಬಳಿ ಹಳಿ ತಪ್ಪಿತ್ತು. ಮಳೆಯಿಂದಾಗಿ ರೈಲಿನ ಹಳಿಗಳ ಕೆಳಗಿನ ಭೂಮಿ ಕುಸಿತವಾಗಿದ್ದರಿಂದ ರೈಲು ಎಂಜಿನ್ ನ ಎರಡು ಚಕ್ರಗಳು ಹಳಿ ತಪ್ಪಿದ್ದವು.
ಆಗಸ್ಟ್ 28- ತಿರುವನಂತಪುರಂ- ಮಂಗಳೂರು ಎಕ್ಸ್ ಪ್ರೆಸ್
ಕರ್ನಾಟಕದ ಮಂಗಳೂರಿನಿಂದ ಕೇರಳದ ತಿರುವನಂತಪುರಕ್ಕೆ ಚಲಿಸುತ್ತಿದ್ದ ತಿರುವನಂತಪುರಂ- ಮಂಗಳೂರು ಎಕ್ಸ್ ಪ್ರೆಸ್ ರೈಲು ಆಗಸ್ಟ್ 28ರಂದು ಕೇರಳದ ಅಂಗಮಲಿ ನಿಲ್ದಾಣದ ಸಮೀಪದ ಕಾರುಕುಟ್ಟಿ ಬಳಿ ಹಳಿ ತಪ್ಪಿತ್ತು. ರೈಲಿನ ಬರೊಬ್ಬರಿ 13 ಬೋಗಿಗಳು ಹಳಿ ತಪ್ಪಿದ್ದವಾದರೂ ಅದರೊಳಗಿದ್ದ ಎಲ್ಲ ಪ್ರಯಾಣಿಕರು ಅಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದರು. ರೈಲು ಕೇರಳದ ಚಾಲ್ಕುಡಿಯಿಂದ ಮಂಗಳೂರಿಗೆ ಪ್ರಯಾಣ ಬೆಳೆಸಿತ್ತು.
ನವೆಂಬರ್ 20- ಇಂದೋರ್-ರಾಜೇಂದ್ರ ನಗರ ಎಕ್ಸ್ ಪ್ರೆಸ್
2016ರಲ್ಲಿ ಸಂಭವಿಸಿದ ಅತೀ ದೊಡ್ಡ ರೈಲು ದುರಂತ ಇದಾಗಿದ್ದು, ಇಂದೋರ್- ಪಾಟ್ನಾ ನಡುವೆ ಸಂಚರಿಸುತ್ತಿದ್ದ ಇಂದೋರ್-ರಾಜೇಂದ್ರ ನಗರ ಎಕ್ಸ್ ಪ್ರೆಸ್ ರೈಲು ಉತ್ತರ ಪ್ರದೇಶದ ಕಾನ್ಪುರದ ಫುಖ್ ರಾಯನ್ ಸಮೀಪ ದುರಂತಕ್ಕೀಡಾಗಿತ್ತು. ರೈಲು ಅಪಘಾತಕ್ಕೀಡಾದ ರಭಸಕ್ಕೆ 14 ಭೋಗಿಗಳು ಜಖಂಗೊಂಡಿದ್ದವು. ಈ ಪೈಕಿ ಮೂರು ಬೋಗಿಗಳು ಒಂದಕ್ಕೊಂದು ಅಪ್ಪಳಿಸಿದ್ದರಿಂದ ಸುಮಾರು 150 ಮಂದಿ ಸಾವನ್ನಪ್ಪಿ, 250 ಮಂದಿ ಗಾಯಗೊಂಡಿದ್ದರು. ಕಳೆದ ಆರು ವರ್ಷಗಳಲ್ಲಿ ಸಂಭವಿಸಿದ ಅತೀ ದೊಡ್ಡ ರೈಲು ದುರಂತ ಇದಾಗಿತ್ತು.