2016 ನೇ ವರ್ಷ ರಾಜ್ಯದಲ್ಲಿ ಹಲವು ಬದಲಾವಣೆಯ ಪರ್ವಗಳನ್ನೇ ಸೃಷ್ಟಿಸಿದೆ. ವಿವಿಧ ರಾಜಕೀಯ ಪಕ್ಷಗಳು ಹಲವು ಏಳುಬೀಳುಗಳನ್ನು ಕಂಡಿವೆ. ಕಾವೇರಿ ವಿವಾದ ಹೊತ್ತಿಸಿದ ಕಿಡಿ ತಣ್ಣಗಾಗಲು ತಿಂಗಳುಗಳ ಸಮಯವೇ ಬೇಕಾಯಿತು. 2016ರಲ್ಲಿ ನಡೆದ ಹಲವು ಸ್ಥಿತ್ಯಂತರಗಳ ಸಣ್ಣ ಕಿರುನೋಟ ಇಲ್ಲಿದೆ...
ಭುಗಿಲೆದ್ದ ಕಾವೇರಿ ವಿವಾದ: ರಾಜ್ಯ ಬಂದ್, ಹಲವೆಡೆ ಹಿಂಸಾಚಾರ, ಪೊಲೀಸರ ಗುಂಡೇಟಿಗೆ ಓರ್ವ ಬಲಿ
ತಮಿಳುನಾಡಿಗೆ ನೀರು ಬಿಡುವ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪನ್ನ ವಿರೋಧಿಸಿ, ರಾಜ್ಯಾದ್ಯಂತ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಸುಪ್ರೀಂ ರಾಜ್ಯದ ವಿರುದ್ಧವಾಗಿ ನೀಡಿದ ತೀರ್ಪಿಗೆ ಕರ್ನಾಟಕದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ಸೆ.9ರಂದು 'ಕರ್ನಾಟಕ ಬಂದ್'ಗೆ ಕರೆ ನೀಡಿದ್ದವು. ಬಂದ್ ವೇಳೆ ಅಲ್ಲಲ್ಲಿ ಹಿಂಸಾಚಾರ ಭುಗಿಲೆದ್ದಿತು. ತಮಿಳುನಾಡು ಮೂಲದ ಬಸ್ ಗಳಿಗೆ ಬೆಂಕಿ ಹಚ್ಚಲಾಯಿತು. ಬೆಂಗಳೂರಿನಲ್ಲಿ ಬಂದ್ ವೇಳೆ ಪೊಲೀಸರ ಗುಂಡೇಟಿಗೆ ತುಮಕೂರಿನ ಉಮೇಶ್ ಎಂಬಾತ ಬಲಿಯಾಗಿದ್ದ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 16 ಸ್ಥಳಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಕಾವೇರಿ ನದಿ ವಿವಾದ ಸಂಬಂಧ ಉಂಟಾದ ಗಲಭೆ ವೇಳೆ ಸುಮಾರು 500 ಸಂಸ್ಥೆಗಳಿಗೆ ಹಾನಿಯಾಗಿದ್ದು, ಅಂದಾಜು 25 ಸಾವಿರ ಕೋಟಿ ರೂ. ವಹಿವಾಟು ನಷ್ಟವಾಗಿದೆ ಎಂದು ವರದಿಯಾಗಿದೆ.
ರಾಸಲೀಲೆ ಪ್ರಕರಣ: ಸಚಿವ ಸ್ಥಾನಕ್ಕೆ ಎಚ್.ವೈ ಮೇಟಿ ರಾಜೀನಾಮೆ
ರಾಜ್ಯ ಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದ್ದು, ಅಬಕಾರಿ ಸಚಿವ ಎಚ್.ವೇ ಮೇಟಿ ರಾಸಲೀಲೆ ಸಿಡಿ. ಸರ್ಕಾರಿ ಕಚೇರಿಯಲ್ಲಿ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿರುವ ದೃಶ್ಯ ಬಿಡುಗಡೆಯಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಮೇಟಿ ಅವರ ರಾಜೀನಾಮೆ ಪಡೆದು ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದ್ದಾರೆ.
ಟಿಪ್ಪು ಜಯಂತಿಯಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಸಚಿವ ತನ್ವೀರ್ ಸೇಠ್
ರಾಯಚೂರಿನಲ್ಲಿ ನಡೆದ ಟಿಪ್ಪು ಜಯಂತಿ ಸಮಾರಂಭದಲ್ಲಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಮೊಬೈಲ್‍ನಲ್ಲಿ ಅರೆನಗ್ನ ಚಿತ್ರ ವೀಕ್ಷಿಸಿದ್ದು ತೀವ್ರ ವಿವಾದ ಸೃಷ್ಟಿ ಮಾಡಿತ್ತು, ಈ ಪ್ರಕರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಐಡಿ ತನಿಖೆಗೆ ವಹಿಸಿದರು. ತನಿಖೆ ನಡೆಸಿದ ಸಿಐಡಿ ಸೈಬರ್ ದಳ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.
ಸಿಎಂ ಸಿದ್ದರಾಮಯ್ಯ ದುಬಾರಿ ವಾಚ್ ಪ್ರಕರಣ
2016ನೇ ವರ್ಷದಲ್ಲಿ ರಾಜ್ಯದಲ್ಲಿ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಗಳಲ್ಲಿ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಕೂಡ ಒಂದಾಗಿದೆ. ಸಿದ್ದರಾಮಯ್ಯ ಅವರ ದುಬಾರಿ ವಾಚ್ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಸಿದ್ದರಾಮಯ್ಯ ಸಮಾಜವಾದಿ ಮುಖ್ಯಮಂತ್ರಿ ಅಲ್ಲ. ಅವರು ಮಜಾವಾದಿಯಾಗಿದ್ದು ಕೈಗೆ 50 ಲಕ್ಷ ರೂ. ಮೌಲ್ಯದ ವಾಚುಗಳನ್ನು ಕಟ್ಟಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದಾದ ಬಳಿಕ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಗಿರೀಶ್ ಅವರನ್ನು ವಿಚಾರಣೆ ನಡೆಸಿದ್ದರು. ಕೊನೆಗೆ ಸಿದ್ದರಾಮಯ್ಯನವರು ಈ ವಾಚ್ ಸಹವಾಸವೇ ಬೇಡ ಎಂದು ತೀರ್ಮಾನಿಸಿ ಸರ್ಕಾರದ ಸುಪರ್ದಿಗೆ ಒಪ್ಪಿಸಿ ವಿವಾದವನ್ನು ಅಂತ್ಯಗೊಳಿಸಿದ್ದರು.
ಬೆಲ್ಜಿಯಂ ನಲ್ಲಿ ಸಿಎಂ ಪುತ್ರ ರಾಕೇಶ್ ಸಿದ್ದರಾಮಯ್ಯ ನಿಧನ
ಬೆಲ್ಜಿಯಂ ಪ್ರವಾಸಕ್ಕಾಗಿ ತೆರಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಪುತ್ರ ರಾಕೇಶ್ (39ವರ್ಷ) ಸಿದ್ದರಾಮಯ್ಯ ಬ್ರಸೆಲ್ಸ್ ಸಿಟಿಯ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಅಕಾಲಿಕ ಮರಣ ಹೊಂದಿದರು. ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರನ್ನು ಬ್ರಸೆಲ್ಸ್ ನ ಯೂನಿರ್ವಸಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರಾಕೇಶ್ ಸಿದ್ದರಾಮಯ್ಯ ನಿಧನರಾದರು.
ಕಿಕ್ ಬ್ಯಾಕ್ ಪ್ರಕರಣದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಸಿಬಿಐ ಕ್ಲೀನ್ ಚಿಟ್
ಜಿಂದಾಲ್ ಸ್ಟೀಲ್ ವರ್ಕ್ಸ್, ಸೌತ್ ವೆಸ್ಟ್ ಮೈನಿಂಗ್ ಕಂಪನಿಗಳಿಗೆ ಗಣಿಗಾರಿಕೆ ಗುತ್ತಿಗೆ ನೀಡಲು ಯಡಿಯೂರಪ್ಪನವರು ಪ್ರೇರಣಾ ಟ್ರಸ್ಟ್, ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಮತ್ತು ಭಗತ್ ಹೋಂ ಕಂಪನಿಗಳ ಹೆಸರಿನಲ್ಲಿ 20 ಕೋಟಿ ರು. ಲಂಚ ಪಡೆದಿದ್ದರೆಂದು ಆರೋಪಿಸಿ ದೂರು ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಯಡಿಯೂರಪ್ಪ, ಅವರ ಇಬ್ಬರು ಮಕ್ಕಳಾದ ಬಿ.ವೈ. ವಿಜಯೇಂದ್ರ, ಶಿವಮೊಗ್ಗದ ಸಂಸದ ಬಿ.ವೈ. ರಾಘವೇಂದ್ರ, ಅಳಿಯ ಸೋಹನ್ ಕುಮಾರ್, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಜಿಂದಾಲ್ ಸ್ಟೀಲ್ ವರ್ಕ್ಸ್ ಮತ್ತು ಸೌತ್ ವೆಸ್ಟ್ ಮೈನಿಂಗ್ ಕಂಪನಿ ನಿರ್ದೇಶಕರು ಸೇರಿ ಒಟ್ಟು 13 ಜನ ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕೆ.ಎಸ್ ಈಶ್ವರಪ್ಪರಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ "ಅಹಿಂದ' (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ) ಸಂಘಟನೆಯ ತಂತ್ರಕ್ಕೆ ಪರ್ಯಾಯವಾಗಿ ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು "ಸಂಗೊಳ್ಳಿ ರಾಯಣ್ಣ ಬ್ರಿಗೇಡ್' ಎಂಬ ನೂತನ ಸಂಘಟನೆ ಸ್ಥಾಪಿಸಿದ್ದಾರೆ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತೀವ್ರ ವಿರೋಧ ವ್ಯಕ್ತ ಪಡಿಸಿದರೂ ಅದನ್ನು ಲೆಕ್ಕಿಸದೇ ಈಶ್ವರಪ್ಪ ಬ್ರಿಗೇಡ್ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ: 8 ಜೆಡಿಎಸ್ ಶಾಸಕರ ಅಮಾನತು
ರಾಜ್ಯಸಭೆ ಚುನಾವಣೆ, ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷಕ್ಕೆ ಮುಖಭಂಗವಾಗುವಂತೆ ಮಾಡಿದ 8 ಮಂದಿ ಜೆಡಿಎಸ್ ಬಂಡಾಯ ಶಾಸಕರ ವಿರುದ್ಧ ಶಿಸ್ತು ಕ್ರಮ ವಾಗಿ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಜಮೀರ್ ಅಹಮದ್, ಇಕ್ಬಾಲ್ ಅನ್ಸಾರಿ, ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಅಖಂಡಶ್ರೀನಿವಾಸಮೂರ್ತಿ, ಗೋಪಾಲಯ್ಯ ,ಭೀಮಾ ನಾಯ್ಕ ಸೇರಿ ಎಂಟು ಶಾಸಕರನ್ನು ಪಕ್ಷದ ಶಿಸ್ತು ಸಮಿತಿ ಅಮಾನತುಗೊಳಿಸಿತ್ತು.
ರಾಜ್ಯಸಭೆ ಚುನಾವಣೆ: ಜೆಡಿಎಸ್ ಗೆ ಮುಖಭಂಗ
ಕರ್ನಾಟಕ ವಿಧಾನಸಭೆಯಿಂದ ನಾಲ್ವರು ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಿತು. ಮೂವರು ಕಾಂಗ್ರೆಸ್ ಮತ್ತು ಒಬ್ಬರು ಬಿಜೆಪಿಯ ಅಭ್ಯರ್ಥಿಗಳು ಜಯಗಳಿಸಿ, ಜೆಡಿಎಸ್ ಪಕ್ಷಕ್ಕೆ ಮುಖಭಂಗ ಅನುಭವಿಸಿತು. ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್‌ನಿಂದ ಆಸ್ಕರ್ ಫರ್ನಾಂಡೀಸ್, ಜೈರಾಮ್ ರಮೇಶ್, ಕೆ.ಸಿ.ರಾಮಮೂರ್ತಿ ಜಯಗಳಿಸಿದರೇ ಮತ್ತು ಜೆಡಿಎಸ್‌ನಿಂದ ಬಿ.ಎಂ.ಫಾರೂಕ್ ಸೋಲನುಭವಿಸಿದರು.
ವಿಧಾನ ಪರಿಷತ್ ಚುನಾವಣೆ
ವಿಧಾನಸಭೆಯಿಂದ ವಿಧಾನಪರಿಷತ್ ನ ಏಳು ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಬಿಜೆಪಿ ಎರಡು ಹಾಗೂ ಜೆಡಿಎಸ್ 1 ಸ್ಥಾನದಲ್ಲಿ ಗೆಲುವು ಸಾಧಿಸಿದವು. ಪರಿಷತ್ ನ ಒಟ್ಟು 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಮಂದಿ ಸ್ಪರ್ಧಿಸಿದ್ದರು. ಆ ಪೈಕಿ ಕಾಂಗ್ರೆಸ್ ನ ಅಲ್ಲಂ ವೀರಭದ್ರಪ್ಪ, ಆರ್ ಬಿ. ತಿಮ್ಮಾಪುರ್, ವೀಣಾ ಅಚ್ಚಯ್ಯ, ರಿಜ್ವಾನ್ ಅರ್ಷದ್, ಬಿಜೆಪಿಯ ವಿ.ಸೋಮಣ್ಣ, ಲೇಹರ್ ಸಿಂಗ್ ಹಾಗೂ ಜೆಡಿಎಸ್ ನ ಕೆ.ವಿ.ನಾರಾಯಣಸ್ವಾಮಿ ಅವರು ಗೆಲುವು ಸಾಧಿಸಿದರು.
ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿ ಸ್ಥಾಪನೆ
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದ ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ ಸರ್ಕಾರ ಜೂನ್ ತಿಂಗಳಲ್ಲಿ ಲೋಕಾಯುಕ್ತಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪನೆ ಮಾಡಿತು. ಇದು ಲೋಕಾಯುಕ್ತಕ್ಕೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆ. ಇದು ನೇರವಾಗಿ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾಗಿದೆ.
ವೆಂಕಯ್ಯ ನಾಯ್ಡು ಬದಲಿಗೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಗೆ ಆಯ್ಕೆ
ರಾಜ್ಯದಿಂದ ಮೂರು ಭಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ವೆಂಕಯ್ಯ ನಾಯ್ಡು ಅವರನ್ನು ನಾಲ್ಕನೇ ಬಾರಿ ಆಯ್ಕೆ ಮಾಡಲು ತೀವ್ರ ವಿರೋಧ ವ್ಯಕ್ತ ವಾಯಿತು. ಇದರಿಂದ ಬೇಸರಗೊಂಡ ವೆಂಕಯ್ಯ ನಾಯ್ಡು, ರಾಜಸ್ತಾನದಿಂದ ಆಯ್ಕೆ ಬಯಸಿದರು. ವೆಂಕಯ್ಯ ಬದಲಿಗೆ ರಾಜ್ಯದಿಂದ ತಮಿಳುನಾಡಿನ ನಿರ್ಮಲಾ ಸೀತರಾಮನ್ ಅವರನ್ನು ಆರಿಸಿ ಕಳುಹಿಸಲಾಯಿತು.
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನ ಗಳಿಸಿದರೂ, ಪಕ್ಷೇತರರನ್ನು ಒಲವು ಗಳಿಸಿಕೊಳ್ಳದೇ ಅಧಿಕಾರದ ಚುಕ್ಕಾಣಿ ಹಿಡಿಯಲಾಗಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಬಿಎಂಪಿ ಗದ್ದುಗೆ ಏರಿದವು. ಕಾಂಗ್ರೆಸ್ ಗೆ ಮೇಯರ್ ಹಾಗೂ ಜೆಡಿಎಸ್ ಉಪ ಮೇಯರ್ ಪಟ್ಟ ಪಡೆದುಕೊಂಡವು.
ಮುಜುಗರ ತಂದಿಟ್ಟ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮತ್ತೆ ರಾಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ವ್ಯಾಪಕ ಟೀಕೆ ಟಿಪ್ಪಣಿ ಎದುರಿಸಬೇಕಾಯಿತು. ಈ ಹಗರಣದ ತನಿಖೆಯನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿತು. ನಂತರ ಪ್ರಕರಣ ಸಂಬಂಧ 10 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಯಿತು.
ಮೈಸೂರು ಡಿಸಿ ಸಿ.ಶಿಖಾ ಅವರಿಗೆ ಸಿಎಂ ಆಪ್ತ ಮರಿಗೌಡನಿಂದ ಧಮ್ಕಿ
ತಹಶೀಲ್ದಾರ್ ವರ್ಗಾವಣೆ ವಿಚಾರವಾಗಿ ಮೈಸೂರು ಜಿಲ್ಲಾಧಿಕಾರಿ ಸಿ.ಶಿಖಾ ಅವರಿಗೆ ಸಿಎಂ ಸಿದ್ದರಾಮಯ್ಯ ಅವರ ಮುಂದೆಯೇ ಕಾಂಗ್ರೆಸ್ ನಾಯಕರು ಬೆದರಿಕೆ ಹಾಕಿದ ಪ್ರಕರಣ ಭಾರೀ ವಿವಾದಕ್ಕೆಡೆ ಮಾಡಿಕೊಟ್ಟಿತು.ಡಿಸಿ ಶಿಖಾ ಅವರು ಮರಿಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿದ ಶ್ರೀನಿವಾಸ್ ಪ್ರಸಾದ್
ಸಂಪುಟ ವಿಸ್ತರಣೆ ವೇಳೆ ತಮ್ಮನ್ನು ಸಚಿವ ಸ್ಥಾನದಿಂದ ಕೈ ಬಿಟ್ಟ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅಕ್ಟೋಬರ್ 17 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದರು. ಸಭಾಪತಿ ಕೆ.ಬಿ. ಕೋಳಿವಾಡ್ ಅವರನ್ನು ಭೇಟಿಯಾಗಿ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಸಂಪುಟ ವಿಸ್ತರಣೆ: ಅಸಮಾಧಾನಿತರ ಕೆಂಗಣ್ಣಿಗೆ ಸಿಎಂ ಗುರಿ
ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗಜ ಪ್ರಸವದಂತಾಗಿದ್ದ ಸಂಪುಟ ವಿಸ್ತರಣೆಯನ್ನು ಸಿಎಂ ಸಿದ್ದರಾಮಯ್ಯ ಮುಗಿಸಿದ್ದರು, ಆದರೆ ಅದ ಬೆನ್ನಲ್ಲೇ ಅವರು ಆಕ್ರೋಶಕ್ಕೆ ಗುರಿಯಾಗಬೇಕಾಯಿತು. ಸಂಪುಟದಿಂದ 14 ಅಸಮರ್ಥ ಸಚಿವರನ್ನು ಕೈಬಿಟ್ಟ ಸಿಎಂ ಯುವಕರನ್ನು ಸಚಿವರನ್ನಾಗಿಸುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾದರು.
ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ಎಸ್ ಯಡಿಯೂರಪ್ಪ ನೇಮಕ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ 2016 ರ ಏಪ್ರಿಲ್ 14 ರಂದು ಅಧಿಕಾರ ಸ್ವೀಕರಿಸಿದ್ದರು. ಕರ್ನಾಟಕದಲ್ಲಿ ಮಿಷನ್ -150 ಟಾರ್ಗೆಟ್ ಮಾಡಿರುವ ಬಿಎಸ್ ವೈ 2018ರ ವಿಧಾನ ಸಭೆ ಚುನಾವಣೆಗಾಗಿ ಭರದ ಸಿದ್ಧತೆ ನಡೆಸುತ್ತಿದ್ದಾರೆ.
ಕೆಪಿಎಸ್ಸಿಗೆ ಶ್ಯಾಂ ಭಟ್ ನೇಮಕ ವಿವಾದ: ಗವರ್ನರ್ v/s ಗವರ್ನಮೆಂಟ್
ಕಳೆದ ಹಲವು ವರ್ಷಗಳಿಂದ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕಿರುವ ಕೆಪಿಎಸ್ಸಿ ಅಧ್ಯಕ್ಷರ ನೇಮಕ ಹಗ್ಗಜಗ್ಗಾಟದ ನಂತರ ನೆರವೇರಿತು. 2016ರ ಮೇ ತಿಂಗಳಲ್ಲಿ ಶ್ಯಾಂ ಭಟ್ ಅವರ ಹೆಸರನ್ನು ಸರಕಾರ ಶಿಫಾರಸು ಮಾಡಿತ್ತು. ಈ ನಡುವೆ ರಾಜ್ಯಪಾಲರು ಹಾಗೂ ಸರ್ಕಾರದ ನಡುವೆ ತಿಕ್ಕಾಟ ಮುಂದುವರಿಯಿತು. ಕೆಪಿಎಸ್ಸಿಗೆ ಟಿ. ಶ್ಯಾಂ ಭಟ್ ಅವರ ನೇಮಕ ಶಿಫಾರಸನ್ನು ಎರಡು ಬಾರಿ ತಿರಸ್ಕರಿಸಿದ್ದ ರಾಜ್ಯಪಾಲರು ಮೂರನೇ ಬಾರಿ ಒಪ್ಪಿ ಅಚ್ಚರಿ ಮೂಡಿಸಿದರು.
ಪಿಎಫ್ ಗಾಗಿ ಗಾರ್ಮೆಂಟ್ಸ್ ನೌಕರರ ಪ್ರತಿಭಟನೆ
ನೂತನ ಭವಿಷ್ಯ ನಿಧಿ (ಪಿಎಫ್) ನೀತಿ ಖಂಡಿಸಿ ಸಿದ್ಧ ಉಡುಪು ಕಾರ್ಖಾನೆ ನೌಕರರು ನಡೆಸಿದ್ದ ಹೋರಾಟ ಹಿಂಸಾರೂಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರು, ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದರು. ಪೀಣ್ಯ ಬಳಿ ನಾಲ್ಕು ಬಸ್‌ಗಳಿಗೆ ಬೆಂಕಿ ಹಚ್ಚಿ, ಪೊಲೀಸ್ ಜೀಪು ಜಖಂಗೊಳಿಸಿದ್ದರು. ಗಲಾಟೆಯಲ್ಲಿ11 ಪೊಲೀಸರು ಹಾಗೂ 15 ಕಾರ್ಮಿಕರು ಗಾಯಗೊಂಡಿದ್ದರು.
ವೇತನ ಪರಿಷ್ಕರಣೆಗಾಗಿ ಪೊಲೀಸರ ಪ್ರತಿಭಟನೆ
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೊಲೀಸರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ಈ ಹೋರಾಟ ಹತ್ತಿಕ್ಕಲು ಆಯಾ ವಿಭಾಗಗಳಲ್ಲಿ ಸಭೆ ನಡೆಸಿದ್ದ ಹಿರಿಯ ಅಧಿಕಾರಿಗಳು, ಪ್ರತಿಭಟನೆ ಮಾಡದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. ಆ ದಿನ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಡಿಜಿಪಿ ಸುತ್ತೋಲೆ ಹೊರಡಿಸಿದ್ದರಿಂದ ಯಾರೊಬ್ಬರೂ ಪ್ರತಿಭಟನೆಗೆ ಹೋಗಿರಲಿಲ್ಲ.
ಆಮ್ನೆಸ್ಟಿ ವಿರುದ್ಧ ಪ್ರತಿಭಟನೆ
ಮಿಲ್ಲರ್ ರಸ್ತೆಯ ಥಿಯೋಲಾಜಿಕಲ್ ಕಾಲೇಜಿನಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.ಆಮ್ನೆಸ್ಟಿ ಸಂಸ್ಥೆ ನಿಷೇಧಕ್ಕೆ ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ತೀವ್ರ ಸ್ವರೂಪದ ಪ್ರತಿಭಟನೆ ನಡೆಸಿದ್ದರು. ಕಮಿಷನರ್ ಕಚೇರಿಗೆ ನುಗ್ಗಲು ಯತ್ನಿಸಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ, 20ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದರು.
- ಶಿಲ್ಪ.ಡಿ