ಹಿನ್ನೋಟ 2016: ರಾಷ್ಟ್ರ ಮಟ್ಟದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದ ವಿಷಯಗಳು
2016ರಲ್ಲಿ ಹಲವು ವಿಷಯಗಳು ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿವೆ. ರಾಜಕೀಯ, ಕ್ರೀಡೆ, ಉದ್ಯಮ ಕ್ಷೇತ್ರ, ಧಾರ್ಮಿಕ ಭಾವನೆ ಸೇರಿದಂತೆ ಹಲವು ವಿಷಯಗಳ ಕುರಿತು ಪರ ವಿರೋಧ ಚರ್ಚೆಗಳು ನಡೆದಿವೆ. ಇವುಗಳಲ್ಲಿ ಪ್ರಮುಖವಾದದ್ದು ನೋಟು ನಿಷೇಧ. ನೋಟು ನಿಷೇಧ ಭಾರತದ ಮಟ್ಟಿಗೆ ಒಂದು ದೊಡ್ಡ ನಿರ್ಧಾರವಾಗಿತ್ತು. ಕೇಂದ್ರ ಸರ್ಕಾರದ ಈ ನಡೆಯನ್ನು ಇಂದಿಗೂ ವಿಪಕ್ಷಗಳು ತೀವ್ರವಾಗಿ ವಿರೋಧಿಸುತ್ತಲೇ ಬಂದಿವೆ.
ನೋಟು ನಿಷೇಧ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನವೆಂಬರ್ 8 ರಂದು ಬಹು ದೊಡ್ಡ ನಿರ್ಧಾರವನ್ನು ಕೈಗೊಂಡಿತ್ತು. ಗರಿಷ್ಠ ಮುಖಬೆಲೆಯ ನೋಟುಗಳಾದ 500-1000 ನೋಟುಗಳನ್ನು ಏಕಾಏಕಿ ನಿಷೇಧ ತೀರ್ಮಾನ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಕಪ್ಪುಹಣ, ಭ್ರಷ್ಟಾಚಾರ ನಿಯಂತ್ರಣ ಮೂಲದ ಉದ್ದೇಶವನ್ನಾಗಿಟ್ಟುಕೊಂಡು ಕೇಂದ್ರ ಸರ್ಕಾರದ ಈ ತೀರ್ಮಾನ ಕೈಗೊಂಡಿದ್ದು ಇದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಯಿತು. ಸಾರ್ವಜನಿಕ ವಲಯದಲ್ಲಿ ಮೋದಿ ಅವರ ನಿರ್ಧಾರಕ್ಕೆ ಬಹುಮತ ಸಿಕ್ಕರು ರಾಜಕೀಯ ವಲಯದಲ್ಲಿ ದೊಡ್ಡ ವಿರೋಧ ವ್ಯಕ್ತವಾಯಿತು. ನೋಟು ನಿಷೇಧದೊಂದಿಗೆ ಕೇಂದ್ರ ಸರ್ಕಾರ ಬಡವರ ಬದುಕಿನೊಂದಿಗೆ ಆಟವಾಡುತ್ತಿದೆ. ಮೋದಿ ಅವರು ನೋಟು ನಿಷೇಧ ಮಾಡಿದ ಬಳಿಕ ಜನರ ಅನುಕೂಲಕ್ಕಾಗಿ ಬೇಕಾದ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವುದರಲ್ಲಿ ಎಡವಿದ್ದಾರೆ ಎಂಬ ಹೇಳಿಕೆಗಳು ವಿಪಕ್ಷಗಳ ವಲಯಗಳಲ್ಲಿ ಕೇಳಿಬಂದವು. ನೋಟು ನಿಷೇಧವಾದ ನವೆಂಬರ್ 8ರಿಂದ ಡಿಸೆಂಬರ್ 10ರವರೆಗೂ ಸುಮಾರು 14.4 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಗಳಲ್ಲಿ ಜಮಾವಣೆಯಾಗಿದೆ. ನೋಟು ನಿಷೇಧವನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಗದ್ದಲವೆಬ್ಬಿಸಿದ್ದು ಯಾವುದೇ ಕಾಯ್ದೆಗಳು ಅಂಗೀಕಾರವಾಗದೇ ಸಂಸತ್ ಸದನಗಳ ಸಮಯ ವ್ಯರ್ಥವಾಯಿತು.
ಸೈರಸ್ ಮಿಸ್ರಿ-ಟಾಟಾ ವಿವಾದ
ಟಾಟಾ ಸನ್ಸ್ ಕಂಪನಿಯ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ಟಾಟಾ ಕಂಪನಿ ಏಕಾಏಕಿ ವಜಾಗೊಳಿಸಿತ್ತು. ಟಾಟಾ ಸಂಸ್ಥೆಯ ಈ ನಿರ್ಧಾರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು. 2008ರಲ್ಲಿ ಟಾಟಾ ಸಂಸ್ಥೆ ತನ್ನ ಪ್ರತಿಷ್ಟಿತ 1 ಲಕ್ಷಕ್ಕೆ ಕಾರು ನೀಡುವ ಯೋಜನೆ ಆರಂಭಿಸಿತ್ತು. ಆದರೆ 1 ಲಕ್ಷಕ್ಕೆ ಕಾರು ನೀಡಲಾಗದೆ ಕಾರಿನ ದರವನ್ನು ಹೆಚ್ಚಿಸಿತ್ತು. ಈಗ ನ್ಯಾನೊ ಕಾರು 2.25 ಮಾರಾಟ ಮಾಡಲಾಗುತ್ತಿದೆ. ಯೋಜನೆ ಆರಂಭವಾದಾಗಿನಿಂದ ಈಗಿನವರೆಗೂ ಕಾರಿನ ಮಾರಾಟದಲ್ಲಿ ಯಾವುದೇ ರೀತಿಯ ಪ್ರಗತಿ ಕಂಡುಬಂದಿಲ್ಲ. ಬದಲಿಗೆ ಘಟಕ ನಿರ್ವಹಣೆ ವೆಚ್ಚ ದುಬಾರಿಯಾಗಿದ್ದು, ಯೋಜನೆಯಿಂದಾಗಿ ಸಂಸ್ಥೆಗೆ ನೂರಾರು ಕೋಟಿ ನಷ್ಟವಾಗುತ್ತಿತ್ತು. ಹೀಗಾಗಿ ಯೋಜನೆಯನ್ನು ಸ್ಥಗಿತಗೊಳಿಸಲು ಮುಂದಾಗಿತ್ತು ಇದೇ ಕಾರಣಕ್ಕಾಗಿ ಅಂದಿನ ಟಾಟಾ ಸಂಸ್ಥೆ ಅಧ್ಯಕ್ಷರಾಗಿದ್ದ ಸೈರಸ್ ಮಿಸ್ತ್ರಿಯನ್ನು ವಜಾಗೊಳಿಸಲು ಟಾಟಾ ಸಮೂಹ ನಿರ್ಧರಿಸಿತ್ತು. ಇದೇ ವಿಚಾರವಾಗಿ ಸೈರಸ್ ಮಿಸ್ತ್ರಿ ಮತ್ತು ರತನ್ ಟಾಟಾ ನಡುವೆ ವಿವಾದಕ್ಕೆ ಕಾರಣವಾಯಿತು. ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಬಳಿಕ ಸೈರಸ್ ಮಿಸ್ತ್ರಿ ಟಾಟಾ ಗ್ರೂಪ್ ನಲ್ಲಿ ಹದಗೆಟ್ಟಿರುವ ಆಡಳಿತವನ್ನು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದರು.
ಅರ್ನಬ್ ಗೋಸ್ವಾಮಿ, ಬರ್ಕಾ ದತ್ ಕದನ
ಕಾರ್ಗಿಲ್ ವಿಜಯ್ ದಿವಸ್ ಅಂದರೆ ಜುಲೈ 26 ಆಚರಣೆ ಸಂದರ್ಭದಲ್ಲಿ ಅರ್ನಬ್ ಗೋಸ್ವಾಮಿ ಎನ್ ಡಿ ಟಿವಿ ಪತ್ರಕರ್ತೆ ಬರ್ಕಾ ದತ್ ಅವರನ್ನು ಪೊಳ್ಳು ಜಾತ್ಯಾತೀತತೆಗಾಗಿ ಟೀಕಿಸಿದ್ದರು. ಅಷ್ಟೇ ಅಲ್ಲದೇ ಪಾಕಿಸ್ತಾನದ ಪರ ವಹಿಸಿ ಮಾತನಾಡುತ್ತಿರುವ ಪತ್ರಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದರು. ಅರ್ನಬ್ ಟೀಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ಬರ್ಕಾ ದತ್ ಅರ್ನಬ್ ಗೋಸ್ವಾಮಿಯವರಂತಹ ಪತ್ರಕರ್ತರಿರುವ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ನಾಚಿಕೆಯಾಗುತ್ತಿದೆ ಎಂದಿದ್ದರು, ಇಬ್ಬರ ನಡುವಿನ ಪರೋಕ್ಷ ವಾಗ್ಯುದ್ಧ ಸಹ 2016 ರಲ್ಲಿ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಒಂದಾಗಿದೆ.
ಟೈಮ್ಸ್ ಗೆ ಅರ್ನಬ್ ಗೋಸ್ವಾಮಿ ವಿದಾಯ
ಟೈಮ್ಸ್ ನೌ ವಾಹಿನಿಯ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ನವೆಂಬರ್ ನಲ್ಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಗೊಳಗಾದ ವಿಷಯಗಳಲ್ಲಿ ಒಂದು. ಟೈಮ್ಸ್ ನೌಗೆ ಅರ್ನಬ್ ಗೋಸ್ವಾಮಿ ರಾಜೀನಾಮೆ ನೀಡಿದ ಬಳಿಕ ಅವರ ಹೊಸ ಯೋಜನೆ, ಹೊಸ ಚಾನಲ್ ಬಗ್ಗೆ ವ್ಯಾಪಕ ಚರ್ಚೆಯಾಗಿತ್ತು.
ಗುಜರಾತ್ ನ ಉನಾದಲ್ಲಿ ಸತ್ತ ಹಸುವಿನ ಚರ್ಮ ಸುಲಿಯುತ್ತಿದ್ದ ನಾಲ್ವರು ದಲಿತರನ್ನು ಕಂಬಕ್ಕೆ ಕಟ್ಟಿ ಅವರಿಗೆ ಬೆಲ್ಟ್ ನಿಂದ ಹೊಡೆಯಲಾಗಿತ್ತು. ಈ ವಿಷಯ ದೇಶಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ಗುಜರಾತ್ ನಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಅಂಶವನ್ನಿಟ್ಟುಕೊಂಡು ರಾಜಕೀಯ ಪಕ್ಷಗಳು ಬೊಬ್ಬೆ ಹೊಡೆದಿದ್ದವು. ಇನ್ನು ಉನಾ ಘಟನೆ ದಲಿತರ ಸ್ವಾಭಿಮಾನವನ್ನು ಬಡಿದೆಬ್ಬಿಸಿದ್ದವು. ಇದರಿಂದಾಗಿ ದಲಿತರು ಹಸುವಿನ ಶವಗಳನ್ನು ಇನ್ನೆಂದು ಮುಟ್ಟುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದವು. ಇನ್ನು ದಲಿತರ ಮೇಲಿನ ಹಲ್ಲೆ ವಿಚಾರ ಸಂಸತ್ ಸದನಗಳಲ್ಲೂ ಪ್ರತಿಧ್ವನಿಸಿದ್ದವು.
ಶನಿ ಸಿಂಗಣಾಪುರ್ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ
400 ವರ್ಷಗಳ ಇತಿಹಾಸವಿರುವ ಮುಂಬೈನ ಶನಿ ಸಿಂಗಣಾಪುರ ದೇವಾಲಯದ ಗರ್ಭಗುಡಿಗೆ ಮಹಿಳೆಯ ಪ್ರವೇಶವನ್ನು ನಿಷೇಧಿಸಲಾಗಿತ್ತು. ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ನೀಡಬೇಕು. ಎಲ್ಲೂ ಮಹಿಳೆಯರ ಹಕ್ಕನ್ನು ಕಸಿದುಕೊಳ್ಳಬಾರದು ಎಂದು ಹೋರಾಟ ನಡೆಸಿದ್ದರು. ಬಳಿಕ ಮಹಿಳೆಯರಿಗೆ ದೇವಾಲಯದ ಟ್ರಸ್ಟ್ ಅನುಮತಿ ನೀಡುವುದರೊಂದಿಗೆ ವಿವಾದ ಇತ್ಯಾರ್ಥವಾಗಿತ್ತು.
ಭಾರತ್ ಮಾತಾಕೀ ಜೈ
ಮಹಾರಾಷ್ಟ್ರದ ಲಾಥೂರ್ ನ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಎಐಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ ನನ್ನ ಕುತ್ತಿಗೆ ಮೇಲೆ ಕತ್ತಿಯಿಟ್ಟರೂ ನನ್ನ ಬಾಯಿಯಿಂದ ಭಾರತ ಮಾತಾಕೀ ಜೈ ಎಂಬ ಘೋಷಣೆ ಬರುವುದಿಲ್ಲ ಎಂದು ಹೇಳುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದರು. ಓವೈಸಿ ಬಾಯಲ್ಲಿ ದೇಶದ್ರೋಹ ಹೇಳಿಕೆ ಬರುತ್ತಿದ್ದಂತೆ ದೇಶದಾದ್ಯಂತ ಓವೈಸಿ ವಿರುದ್ಧ ಟೀಕೆಗಳು ವ್ಯಕ್ತವಾದವು. ಇನ್ನು ಭಾರತ್ ಮಾತಾಕೀ ಜೈ ಎನ್ನಲು ನಿರಾಕರಿಸುವವರು ದೇಶ ಬಿಟ್ಟು ತೊಲಗಿ ಪಾಕಿಸ್ತಾನಕ್ಕೆ ಹೋಗಲಿ ಎಂಬ ಹೇಳಿಕೆಗಳು ವ್ಯಕ್ತವಾದವು. ಕೊನೆಗೆ ಓವೈಸಿ ವಿರುದ್ಧ ದೇಶದ್ರೋಹ ಹೇಳಿಕೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ಪಾಕಿಸ್ತಾನ ಕಲಾವಿದರಿಗೆ ಬಹಿಷ್ಕಾರ ಎಂಎನ್ಎಸ್
ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿರುವ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಭಯೋತ್ಪಾದಕರು ದಾಳಿ ನಡೆಸಿದ್ದು ಇದರಲ್ಲಿ 19 ಭಾರತೀ ಯ ಯೋಧರ ಹುತಾತ್ಮರಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) 48 ಗಂಟೆಯೊಳಗೆ ಪಾಕಿಸ್ತಾನ ಕಲಾವಿದರು ಭಾರತ ಬಿಟ್ಟು ಹೋಗುವಂತೆ ಕರೆ ನೀಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಇನ್ನು ಪಾಕ್ ಕಲಾವಿದರ ಬಹಿಷ್ಕಾರ ಸಂಬಂಧಿಸಿದಂತೆ ಹಲವು ಬಾಲಿವುಡ್ ಕಲಾವಿದರು ಪರ ವಿರೋಧ ಹೇಳಿಕೆಗಳನ್ನು ನೀಡಿತ್ತು. ಪ್ರಮುಖವಾಗಿ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಎಂಎನ್ಎಸ್ ನಿರ್ಧಾರವನ್ನು ವಿರೋಧಿಸಿದ್ದರು. ಪಾಕಿಸ್ತಾನ ಕಲಾವಿದರ ಬಹಿಷ್ಕಾರ ಭಯೋತ್ಪಾದನೆಗೆ ಪರಿಹಾರವಲ್ಲ ಎಂದು ಹೇಳಿದ್ದರು. ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗಿದ್ದ ಈ ವಿಷಯ ಕ್ರಮೇಣ ತಣ್ಣಗಾಯಿತು.