2016 ನೇ ವರ್ಷದ ಕೊನೆಯ ಭಾಗದಲ್ಲಿ ವರ್ಷದ ಅತಿ ಹೆಚ್ಚು ಚರ್ಚೆಗೊಳಪಟ್ಟ, ಗೂಗಲ್, ಯಾಹೂ ಸೇರಿದಂತೆ ಸರ್ಚ್ ಇಂಜಿನ್ ಗಳಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವಿಷಯಗಳನ್ನು ಪಟ್ಟಿ ಮಾಡಲಾಗಿದೆ. ನೋಟು ನಿಷೇಧ ಸೇರಿದಂತೆ ಹಲವು ವಿಷಯಗಳು ಸರ್ಚ್ ಇಂಜಿನ್ ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟಿವೆ.
ಕಪ್ಪುಹಣವನ್ನು ಬಿಳಿ ಮಾಡುವುದು ಹೇಗೆ: 2016 ಸಾಲಿನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವಿಷಯವೆಂದರೆ ಅದು 500, 1000 ರೂ ಮುಖಬೆಲೆಯ ನೋಟು ಅಮಾನ್ಯದ ನಿರ್ಧಾರ. ಕಪ್ಪುಹಣ, ಭಯೋತ್ಪಾದನೆ ಆರ್ಥಿಕತೆ, ದೇಶದ ಆರ್ಥಿಕತೆಗೆ ಮಾರಕವಾಗಿದ್ದ ನಕಲಿ ನೋಟುಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 500, 1000 ರೂ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರವನ್ನು ನ.8 ರಂದು ಪ್ರಕಟಿಸಿತ್ತು. ಕೇಂದ್ರ ಸರ್ಕಾರದ ಘೋಷಣೆ ಹೊರಬೀಳುತ್ತಿದ್ದಂತೆಯೇ ಕಪ್ಪುಹಣ ಹೊಂದಿದ್ದ ಕುಳಗಳು ಕಪ್ಪುಹಣವನ್ನು ವೈಟ್ ಮಾಡುವುದು ಹೇಗೆ ಎಂದು ಗೂಗಲ್ ನಲ್ಲಿ ಹುಡುಕಿದ್ದರು, ನಂತರದ ಒಂದೆರಡು ದಿನಗಳು ಗೂಗಲ್ ನಲ್ಲಿ ಕಪ್ಪು ಹಣವನ್ನು ವೈಟ್ ಮಾಡುವುದು ಹೇಗೆ ಎಂಬುದು ಅತಿ ಹೆಚ್ಚು ಹುಡುಕಲ್ಪಟ್ಟ ವಿಷಯಗಳಾಗಿತ್ತು.
ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳು: ಅತಿ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಎಂದುಕೊಂಡರೆ ಅದು ತಪ್ಪು, 2016 ರ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹಿಂದಿಕ್ಕಿ, ಬಾಲಿವುಡ್ ತಾರೆ ಸನ್ನಿ ಲಿಯೋನ್ ಪ್ರಥಮ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನದಲ್ಲಿ (2ನೇ ಸ್ಥಾನದಲ್ಲಿ) ನರೇಂದ್ರ ಮೋದಿ ಇದ್ದು, ಅರವಿಂದ್ ಕೇಜ್ರಿವಾಲ್, ಸಲ್ಮಾನ್ ಖಾನ್, ಬಿಪಾಶಾ ಬಸು, ದೀಪಿಕಾ ಪಡುಕೋಣೆ, ಕತ್ರಿನಾ ಕೇಫ್, ಪ್ರಿಯಾಂಕಾ ಛೋಪ್ರಾ, ನವಜೀತ್ ಸಿಂಗ್ ಸಿಧು, ಪಿವಿ ಸಿಂಧು ಇದ್ದಾರೆ.
ಬ್ರೆಕ್ಸಿಟ್ ಓಟಿಂಗ್ ಬಳಿಕ ಬ್ರಿಟನ್ ಕೇಳಿದ್ದು, ಇಯು, ಬ್ರೆಕ್ಸಿಟ್ ಎಂದರೇನು?: 2016 ನೇ ಸಲಿನಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಚರ್ಚಿಸಲ್ಪಟ್ಟ ವಿಷಯವೆಂದರೆ ಅದು ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಬಂದಿದ್ದು, ಐರೋಪ್ಯ ಒಕ್ಕೂಟದಿಂದ ಹೊರಬರಲು ನಡೆದ ಮತದಾನದ ನಂತರ ಬ್ರೆಕ್ಸಿಟ್ ಎಂದರೇನು ಎಂಬುದು ಅತ್ಯಂತ ಹೆಚ್ಚು ಗೂಗಲ್ ನಲ್ಲಿ ಹುಡುಕಲಾಗಿತ್ತು.
ಜಾಗತಿಕವಾಗಿ ಹೆಚ್ಚು ಸುದ್ದಿಯಾದ ಗೇಮ್: ಆಂಡ್ರಾಯ್ಡ್, ಆನ್ ಲೈನ್ ಯುಗದಲ್ಲಿ ಹೊಸ ಮಾದರಿಯ ಆಟಗಳಿಗೆ(ಗೇಮ್) ಅತಿ ಹೆಚ್ಚಿನ ಬೇಡಿಕೆ. ಈ ವರ್ಷ ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಸುದ್ದಿ ಮಾಡಿದ್ದು ಪೋಕೆಮಾನ್ ಗೋ. ಪೋಕೆಮಾನ್ ಗೋ ನ ಕ್ರೇಜ್ ಎಷ್ಟರ ಮಟ್ಟಿಗೆ ಇತ್ತೆಂದರೆ ಗೇಮ್ ಆಡುತ್ತಾ ಅನೇಕ ಅವಗಢಗಳು ಸಂಭವಿಸಿದ್ದವು. ಕೊನೆಗೆ ಕ್ರೇಜ್ ನಿಂದ ಉಂಟಾಗುತ್ತಿದ್ದ ಅವಗಢ, ಅಪರಾಧಗಳನ್ನು ತಡೆಗಟ್ಟಲು ಪೊಲೀಸರು ವಾಹನ ಸಂಚರಿಸುವಾಗ ಮೊಬೈಲ್ ನಲ್ಲಿ ಆಟವಾಡಿದರೆ 100 ರೂ ದಂಡ, ನಿಯಮ ಉಲ್ಲಂಘಿಸಿ ಮೊಬೈಲ್ ಹಿಡಿದು ಅಡ್ಡಾದಿಡ್ಡಿ ರಸ್ತೆ ದಾಟಿದರೆ 50 ರೂ ದಂಡ ವಿಧಿಸಲಾಗುವುದು ಹಾಗು ನಿಯಮಗಳನ್ನು ಮತ್ತೆ ಮತ್ತೆ ಉಲ್ಲಂಘಿಸಿದವರ ವಾಹನ ಚಾಲನಾ ಪರವಾನಗಿ ರದ್ದುಪಡಿಸಲಾಗುವುದು ಎಂಬ ನಿಯಮಗಳನ್ನು ಜಾರಿಗೆ ತಂದಿದ್ದರು.
ವಿಶ್ವದಾದ್ಯಂತ ವರದಿಯಾಗಿರುವ ಪೋಕೆಮಾನ್ ಗೋ ಅಪಘಾತಗಳ ಪಟ್ಟಿ:
ಜುಲೈ 12: ನ್ಯೂಯಾರ್ಕ್ ನಲ್ಲಿ 28 ವರ್ಷದ ಯುವಕ ಚಕ್ರದ ಹಿಂದೆ ಪೋಕೆ ಮಾನ್ ಹಿಡಿಯಲು ಹೋಗಿ ಅಪಘಾತ.
ಜುಲೈ 13: ಇಬ್ಬರು ಕೆನಡಾ ಯುವಕರು ಪೋಕೆಮಾನ್ ಆಡುತ್ತಾ ಕಾರ್ ಚಾಲನೆ ಮಾಡುತ್ತಾ ಪೋಲೀಸರ ವಾಹನಕ್ಕೆ ಗುದ್ದಿ, ಇಬ್ಬರು ಪೊಲೀಸರಿಗೆ ಗಾಯ. ಬ್ಯುಸಿ ರಸ್ತೆಯನ್ನು ದಾಟುವಾಗ ಪೋಕೆಮಾನ್ ಆಡುತ್ತಿದ್ದರಿಂದ ಪೆನ್ಸ್ಲಿವೇನಿಯಾದ ಪಿಟ್ಸ್ ಬರ್ಗ್ ನಲ್ಲಿ ಬಾಲಕಿಯೊಬ್ಬಳಿಗೆ ಗಾಯ
ಜುಲೈ 19: ಇಂಡೋನೇಷಿಯಾದಲ್ಲಿ ಪೋಕೆಮಾನ್ ಆಡುತ್ತಾ ಸೇನಾ ಶಿಬಿರದೊಳಗೆ ನುಗ್ಗಿದ ಫ್ರೆಂಚ್ ಯುವಕ. ಬಂಧನ.
ಜುಲೈ 21: ನ್ಯೂಯಾರ್ಕ್ ನಲ್ಲಿ ಪೋಕೆ ಮಾನ್ ಆಡುತ್ತಾ ಸ್ಮಶಾನವೊಂದರಲ್ಲಿ ಮರ ಹತ್ತಿದ ಮಹಿಳೆ; ಇಳಿಯಲಾಗದೆ ತುರ್ತು ನಿಗಾ ಘಟಕ 911 ಗೆ ಕರೆ.