ಹಿನ್ನೋಟ 2016: ದಿಢೀರ್ ಸುದ್ದಿಯಾದ ಸಾಮಾನ್ಯರು
ಯೋಧ ಮನೋಜ್ ಠಾಕೂರ್: ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲೆ ಉಗ್ರರು ನಡೆಸಿದ ದಾಳಿ ನಂತರ ಪದ್ಯದ ಮೂಲಕ ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದ ಭಾರತೀಯ ಯೋಧ ಮನೋಜ್ ಠಾಕೂರ್ ಏಕಾ ಏಕಿ ಸುದ್ದಿಯಾಗಿದ್ದರು.
ವಿಡಿಯೋದಲ್ಲಿ ಯೋಧರ ತಂಡವೊಂದು ಸೇನಾ ವಾಹನದಲ್ಲಿ ಹೋಗುತ್ತಿದ್ದು, ವಾಹನ ಚಲಿಸುತ್ತಿದ್ದ ವೇಳೆ ಪದ್ಯದ ಮೂಲಕ ಎಚ್ಚರಿಕೆ ನೀಡಿದ್ದ ಮನೋಜ್ ಠಾಕೂರ್ ಕಾಶ್ಮೀರ್ ಇರುತ್ತೆ, ಆದ್ರೆ ಪಾಕ್ ಮಾತ್ರ ಉಳಿಯುವುದಿಲ್ಲ ಎಂದು ಹೇಳಿದ್ದರು. ಇದಾದ ಕೆಲವೇ ದಿನಗಳಲ್ಲಿ ಯೋಧ ಮನೋಜ್ ಠಾಕೂರ್ ಗೆ ಜೀವ ಬೆದರಿಕೆ ಬಂದಿದ್ದರ ಬಗ್ಗೆಯೂ ವರದಿಗಳಾಗಿತ್ತು.
ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಪ್ರಶ್ನೆ ಕೇಳಿದ್ದ ಕೆನ್ ಬೋನ್: ಅಮೆರಿಕಾದ ಅಧ್ಯಕ್ಷೀಯ ಚರ್ಚೆ-2 ರಲ್ಲಿ (ಅಕ್ಟೋಬರ್.10) ಪ್ರಶ್ನೆ ಕೇಳಿದ ವ್ಯಕ್ತಿ ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಟಿದ್ದ. ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೂ ಮುನ್ನ ಅಭ್ಯರ್ಥಿಗಳಾಗಿದ್ದ ಡೊನಾಲ್ಡ್ ಟ್ರಂಪ್ ಹಾಗೂ ಹಿಲರಿ ಕ್ಲಿಂಟನ್ ನಡುವೆ ನಡೆದಿದ್ದ ಅಧ್ಯಕ್ಷೀಯ ಚರ್ಚೆ ಈ ಬಾರಿ ಅತಿ ಹೆಚ್ಚು ಕುತೂಹಲ ಮೂಡಿಸಿತ್ತು. ಅಧ್ಯಕ್ಷೀಯ ಚರ್ಚೆ-2 ರಲ್ಲಿ ಭಾಗವಹಿಸಿದ್ದ ಕೆನ್ ಬೋನ್ ಎಂಬ ವ್ಯಕ್ತಿ ಡೊನಾಲ್ಡ್ ಟ್ರಂಪ್ ಹಾಗೂ ಇಂಧನ ನೀತಿ ಹಾಗೂ ಇಂಧನ ಅಗತ್ಯತೆಗಳನ್ನು ಪೂರೈಕೆ ಮಾಡಲು ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ನಾಯಕರಿಗೆ ಪ್ರಶ್ನಿಸಿದ್ದ. ಅಮೆರಿಕಾಗೆ ಅತ್ಯಗತ್ಯವಾಗಿದ್ದ ಪ್ರಶ್ನೆಯನ್ನು ಕೇಳಿದ ಕೆನ್ ಬೋನ್ ರಾತ್ರೋ ರಾತ್ರಿ ಸ್ಟಾರ್ ಆಗಿಬಿಟ್ಟಿದ್ದರು. ಚರ್ಚಾ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಕೇವಲ ಬೆರಳೆಣಿಕೆಯಷ್ಟು ಅನುಯಾಯಿಗಳನ್ನು ಹೊಂದಿದ್ದ ಕೆನ್ ಬೋನ್ ಕಾರ್ಯಕ್ರಮ ಮುಗಿಸಿ ಹೊರಬರುತ್ತಿದ್ದಂತೆಯೇ ಟ್ವಿಟರ್ ನಲ್ಲಿ ಸಾವಿರಾರು ಅನುಯಾಯಿಗಳಿದ್ದರು. ಅಷ್ಟೇ ಅಲ್ಲದೇ ಫೇಸ್ ಬುಕ್ ನಲ್ಲಿ ಕೆನ್ ಬೋನ್ ಅವರ ಅಭಿಮಾನಿಗಳ ಪೇಜ್ ನ್ನೂ ಪ್ರಾರಂಭಿಸಲಾಗಿತ್ತು.
ಶಿಲ್ಪಾ ಶೆಟ್ಟಿ ಅವರ ಪುಸ್ತಕವನ್ನು ಅವರಿಗೇ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿ: ಟ್ರಾಫಿಕ್ ಸಿಗ್ನಲ್ ನಲ್ಲಿ ಶಿಲ್ಪಾ ಶೆಟ್ಟಿ ಅವರ ಕಾರು ನಿಂತಿದ್ದ ವೇಳೆ ಶಿಲ್ಪಾ ಶೆಟ್ಟಿಯವರ ಪುಸ್ತಕವನ್ನೇ ಅವರಿಗೆ ಮಾರಲು ಮುಂದಾಗಿದ್ದ ವ್ಯಕ್ತಿ ಏಕಾಏಕಿ ಸುದ್ದಿಯಾಗಿದ್ದರು. ಡಿಮ್ಯಾಂಡ್ ಇರುವ ಪುಸ್ತಕಗಳನ್ನಷ್ಟೇ ಇವರುಗಳು ಮಾರಾಟ ಮಾಡುವ ಕಾರಣ ತಮ್ಮ ಪುಸ್ತಕ ಈ ರೀತಿಯಲ್ಲಿ ಮಾರಾಟವಾಗುತ್ತಿದೆ ಎಂದು ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಂತಸ ಹಂಚಿಕೊಂಡಿದ್ದರು.
ಕನ್ಹಯ್ಯ ಕುಮಾರ್: ಉಗ್ರ ಅಫ್ಜಲ್ ಗುರು ಗೆ ಗಲ್ಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ 2016 ರ ಫೆ.9 ಜವಾಹರ್ ಲಾಲ್ ನೆಹರೂ ವಿವಿಯಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದ ಪ್ರಕರಣ ದೇಶಾದ್ಯಂತ ಭಾರಿ ಚರ್ಚೆಗೆ ಗುರಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎನ್ ಯು ವಿವಿ ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಬಳಿಕ ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಹೆಚ್ಚು ಸುದ್ದಿಯಾಗಿ, ಕೇಂದ್ರ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.
ಜಾಕಿರ್ ನಾಯ್ಕ್: ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನ ಸ್ಥಾಪಕ ಜಾಕಿರ್ ನಾಯ್ಕ್ ಬೌದ್ಧಿಕ ವಲಯದಲ್ಲಿರುವವರಿಗೆ ಪರಿಚಿತ ವ್ಯಕ್ತಿ. ಆದರೆ ಅತಿ ಹೆಚ್ಚು ಸುದ್ದಿಯಾಗಿದ್ದು 2016 ರಲ್ಲಿ ಅದೂ ಬಾಂಗ್ಲಾದ ರಾಜಧಾನಿ ಢಾಕಾದ ರೆಸ್ಟೋರಂಟ್ ಮೇಲೆ ದಾಳಿ ನಡೆಸಿದ ಉಗ್ರರಿಗೆ ಸ್ಫೂರ್ತಿಯಾದ ಕಾರಣದಿಂದ. ಜಾಕಿರ್ ನಾಯ್ಕ್ ಉಗ್ರರಿಗೆ ಸ್ಫೂರ್ತಿಯಾಗಿದ್ದ ಎಂಬ ಮಾಹಿತಿ ಅಧಿಕೃತವಾಗುತ್ತಿದ್ದಂತೆಯೇ ಬಾಂಗ್ಲಾದೇಶದ ಸರ್ಕಾರ ಜಾಕಿರ್ ನಾಯ್ಕ್ ನ ಪೀಸ್ ಚಾನಲ್, ಪೀಸ್ ಸಂಸ್ಥೆಗೆ ನಿಷೇಧ ವಿಧಿಸಿತ್ತು. ನಂತರದ ಬೆಳವಣಿಗೆಗಳಲ್ಲಿ ಜಾಕಿರ್ ನಾಯ್ಕ್ ವಿರುದ್ಧ ತನಿಖೆ ನಡೆಸಿದ್ದ ಭಾರತ ಸರ್ಕಾರ ಸಹ ಆತನ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ನಿಷೇಧಕ್ಕೆ ಕ್ರಮ ಕೈಗೊಂಡಿತ್ತು.
ಪಾಕಿಸ್ತಾನದ ಚಾಯ್ ವಾಲ: ಪಾಕಿಸ್ತಾನದ ಚಾಯ್ ವಾಲ ಮಾಡೆಲ್ (ರೂಪದರ್ಶಿ) ಆಗಿದ್ದು 2016 ರ ಸ್ವಾರಸ್ಯಗಳಲ್ಲಿ ಒಂದು. ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಟೀ ಮಾರಾಟ ಮಾಡುತ್ತಿದ್ದ ಅರ್ಸದ್ ಖಾನ್ ಅಂಗಡಿಗೆ ಜವಾರಿಯಾ ಆಲಿ ಖಾನ್ ಅನ್ನುವ ಫೋಟೋ ಗ್ರಾಫರ್ ಟೀ ಕುಡಿಯಲು ಬಂದಿದ್ದಾಳೆ. ಹ್ಯಾಂಡ್ ಸಮ್ ಹುಡುಗನನ್ನು ಆತನ ಕಣ್ಣುಗಳನ್ನು ನೋಡಿ ಒಂದು ಪೋಟೋ ಕ್ಲಿಕಿಸಿಕೊಂಡಿದ್ದಾಳೆ. ಈ ಫೋಟೋವನ್ನು ಸಾಮಾಜಿಕ ಜಾಲಕ್ಕೆ ಹಾಕಿದ್ದಾಳೆ. ರಾತ್ರಿ ಬೆಳಗಾಗುವ ಹೊತ್ತಿಗೆ ಅರ್ಸದ್ ಖಾನ್ ಟ್ರೆಂಡ್ ಆಗಿ ಹೋಗಿದ್ದ. ಈ ಪೋಟೋ ನೋಡಿದ ಮಾಡೆಲ್ ಕಂಪನಿಯೊಂದರ ಮಾಲೀಕ ಖಾನ್ ಅರ್ಸಾದ್ ನನ್ನು ಸಂಪರ್ಕಿಸಿ ರೂಪದರ್ಶಿಯಾಗುವಂತೆ ಆಹ್ವಾನಿಸಿದ್ದರು. ಆಹ್ವಾನಕ್ಕೆ ಒಪ್ಪಿದ ಅರ್ಸದ್ ಖಾನ್ ರಾತ್ರೋ ರಾತ್ರಿ ಸ್ಟಾರ್ ಆಗಿದ್ದ.