ಹಿನ್ನೋಟ 2016: ಕ್ರೀಡಾ ಜಗತ್ತಿನ ಮಹತ್ತರ ಸುದ್ದಿಗಳು
ವೆಸ್ಟ್ ಇಂಡೀಸ್ 2016ರ ಟಿ20 ವಿಶ್ವಕಪ್ ಚಾಂಪಿಯನ್
ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ, ಇಂಗ್ಲೆಂಡ್ ವಿರುದ್ಧದ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 4 ವಿಕೆಟ್ ಗಳಿಂದ ರೋಚಕ ಜಯ ಗಳಿಸಿದೆ. ವೆಸ್ಟ್ ಇಂಡೀಸ್ ಎರಡನೇ ಬಾರಿಗೆ ಟಿ20 ವಿಶ್ವಕಪ್ ಅನ್ನು ತನ್ನದಾಗಿಸಿಕೊಂಡಿದೆ.
ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ವೆಸ್ಟ್ ಇಂಡೀಸ್ ಮಹಿಳಾ ತಂಡ
ಪುರುಷರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಬಳಿಕ ನಡೆದ ಮಹಿಳಾ ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ ವೆಸ್ಟ್ ಇಂಡೀಸ್ ಮಹಿಳಾ ತಂಡ ಚೊಚ್ಚಲ ಬಾರಿಗೆ ಟಿ20 ವಿಶ್ವಕಪ್ ಗೆ ಮುತ್ತಿಟ್ಟಿತು.
ರಿಯೋ ಒಲಿಂಪಿಕ್ಸ್ ಕ್ರೀಡಾಕೂಟ
ವಿಶ್ವ ಕ್ರೀಡಾ ಜಗತ್ತಿನ ಮಹೋನ್ನತ ಹಬ್ಬವಾದ ಒಲಿಂಪಿಕ್ಸ್ ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ಅದ್ಧೂರಿಯಾಗಿ ಮುಕ್ತಾಯಗೊಂಡಿತ್ತು. ಈ ಬಾರಿಯ ರಿಯೋ ಒಲಿಂಪಿಕ್ಸ್ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. 28 ಮುಖ್ಯ ಕ್ರೀಡೆಗಳಲ್ಲಿ ಒಟ್ಟು 206 ರಾಷ್ಟ್ರಗಳು ಭಾಗವಹಿಸಿದ್ದವು. ಭಾರತದ ಮಟ್ಟಿಗೆ ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಬೆಳ್ಳಿ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದರು. ಇನ್ನು ಮಹಿಳಾ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದರು.
ಬ್ರೆಜಿಲ್ ನ ರಿಯೋ ಡಿಜನೈರೋ ಕ್ರೀಡಾಗ್ರಾಮದಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯರು ಅಪ್ರತಿಮ ಸಾಧನೆ ಮಾಡಿದ್ದಾರೆ. 2 ಚಿನ್ನ, 1 ಬೆಳ್ಳಿ ಮತ್ತು 1 ಕಂಚಿನ ಪದಕದೊಂದಿಗೆ ಭಾರತದ ಆಟಗಾರರು ಪ್ಯಾರಾಲಿಂಪಿಕ್ಸ್ ನಲ್ಲಿ ಉತ್ತಮ ನಿರ್ವಹಣೆ ತೋರಿದ್ದರು. ಪುರುಷರ ಹೈಜಂಪ್ ನಲ್ಲಿ ಮರಿಯಪ್ಪನ್ ತಂಗವೇಲು, ಜಾವಲಿನ್ ಎಸೆತದಲ್ಲಿ ದೇವೇಂದ್ರ ಜಝಾರಿಯಾ ಚಿನ್ನ ಗೆದ್ದಿದ್ದರೆ, ಮಹಿಳಾ ಶೂಟಿಂಗ್ ನಲ್ಲಿ ದೀಪಾ ಮಲಿಕ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ಇನ್ನು ಪುರುಷರ ಹೈಜಂಪ್ ನಲ್ಲಿ ವರುಣ್ ಸಿಂಗ್ ಭಾಟಿಯಾ ಕಂಚಿನ ಪದಕ ಗೆದ್ದಿದ್ದಾರೆ.
ಹೈದರಾಬಾದ್ 2016ರ ಐಪಿಎಲ್ ಚಾಂಪಿಯನ್
2016ರ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 9ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಚಾಂಪಿಯನ್ ಆಗಿ ಹೊರಹೊಮ್ಮಿತು. ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಹಾಗೂ ಹೈದರಾಬಾದ್ ನಡುವೆ ನಡೆಯಿತು. ಮೊದಲ ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ತಂಡ ನಿಗದಿತ ಓವರ್ ನಲ್ಲಿ 208 ರನ್ ಸಿಡಿಸಿತ್ತು. ಬೃಹತ್ ಮೊತ್ತ ಗುರಿ ಬೆನ್ನಟ್ಟಿತ ಬೆಂಗಳೂರು ತಂಡ 200 ರನ್ ಗಳಿಸಿ 8 ರನ್ ಗಳಿಂದ ಚಾಂಪಿಯನ್ ಪಟ್ಟದಿಂದ ದೂರ ಉಳಿಯಿತು.
ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ 2016
ಲಂಡನ್ ನಲ್ಲಿ ನಡೆದ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ ವಿಭಾಗದಲ್ಲಿ ಬ್ರಿಟನ್ ನ ಆ್ಯಂಡಿ ಮರ್ರೆ ಹಾಗೂ ಮಹಿಳೆಯ ವಿಭಾಗದಲ್ಲಿ ಸೆರೆನಾ ವಿಲಿಯಮ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇನ್ನು ಮಿಶ್ರ ಡಬಲ್ಸ್ ನಲ್ಲಿ ಬ್ರಿಟನ್ನಿನ ಹೀಥರ್ ವಾಟ್ಸನ್ ಹಾಗೂ ಫಿನ್ಲೆಂಡ್ ನ ಹೆನ್ರಿ ಕೊಂಟಿನೆನ್ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.
ಭಾರತ ಕಿರಿಯರ ಹಾಕಿ ವಿಶ್ವಕಪ್ ಚಾಂಪಿಯನ್
ಬೆಲ್ಜಿಯಂ ತಂಡವನ್ನು ಮಣಿಸುವ ಮೂಲಕ ಭಾರತ ಜೂನಿಯರ್ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಲಖನೌನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಬೆಲ್ಜಿಯಂ ತಂಡವನ್ನು 2-1 ಗೋಲುಗಳಿಂದ ಮಣಿಸಿದ್ದು 15 ವರ್ಷಗಳ ಬಳಿಕ ವಿಶ್ವಕಪ್ ಜಯಿಸಿದ ಐತಿಹಾಸಿಕ ಸಾಧನೆ ಮಾಡಿದೆ.
ಅಮೆರಿಕದ ಬೋಸ್ಟನ್ ನಲ್ಲಿ ನಡೆದ 2016ರ ಮ್ಯಾರಥೋನ್ ಹಲವು ದಾಖಲೆಗಳಿಗೆ ಸಾಕ್ಷಿಯಾದವು. ಪುರುಷರ ಮ್ಯಾರಥೋನ್ ನಲ್ಲಿ ಇತಿಯೋಪಿಯಾದ ಲೇಮಿ ಬೆಹ್ರಾನು ಹೈಲೇ ಹಾಗೂ ಮಹಿಳೆಯರ ಮ್ಯಾರಥೋನ್ ನಲ್ಲಿ ಇತಿಯೋಪಿಯಾದ ಅಸೀಡ್ ಬ್ಯಾಸ ಚಾಂಪಿಯನ್ ಆಗಿ ಹೊರಹೊಮ್ಮಿದರು. ಇನ್ನು ವೀಲ್ ಚೇರ್ ಮ್ಯಾರಥೋನ್ ಪುರುಷರ ವಿಭಾಗದಲ್ಲಿ ಸ್ವಿಜರ್ಲ್ಯಾಂಡ್ ನ ಮಾರ್ಸೆಲ್ ಹಗ್ ಮತ್ತು ಮಹಿಳಾ ವಿಭಾಗದಲ್ಲಿ ಅಮೆರಿಕದ ಟಾಟ್ಯಾನ ಮ್ಯಾಫದ್ದೇನ್ ಗೆದ್ದು ಬಿಗಿದರು.
ಫ್ಯಾರಿಸ್ ಸೈಂಟ್ ಡೆನಿಸ್ ನ ಸ್ಟೇಡ್ ಡೇ ಫ್ರಾನ್ಸ್ಸ ನಲ್ಲಿ ನಡೆದ ಯೂನಿಯನ್ ಆಫ್ ಯೂರೋಪಿನ್ ಫುಟ್ಬಾಲ್ ಆಸೋಸಿಯೇಷನ್ ನ ಯುರೋ ಫುಟ್ಬಾಲ್ ಟೂರ್ನಿಯಲ್ಲಿ ಈ ಬಾರಿ ಪೋರ್ಚುಗಲ್ ತಂಡದ ಜಯಶಾಲಿಯಾಗಿ ಹೊರಹೊಮ್ಮಿತ್ತು. ಫ್ರಾನ್ಸ್ ಮತ್ತು ಪೋರ್ಚುಗಲ್ ನಡುವೆ ಫೈನಲ್ ಪಂದ್ಯ ನಡೆದಿದ್ದು ಕೇವಲ 1 ಗೋಲ್ ನಿಂದ ಪೋರ್ಚುಗಲ್ ತಂಡ ಚಾಂಪಿಯನ್ ಆಯಿತು. ಟೂರ್ನಿಯಲ್ಲಿ ಒಟ್ಟು 51 ಪಂದ್ಯಗಳ ನಡೆದಿದ್ದು ಅದರಲ್ಲಿ 108 ಗೋಲುಗಳು ದಾಖಲಾಗಿವೆ.
ಕೆನಡಾದ ಟೋರಂಟೋದ ಏರ್ ಕೆನಡಾ ಸೆಂಟರ್ ನಲ್ಲಿ ನಡೆದ 2016ರ ಐಸ್ ಹಾಕಿ ವಿಶ್ವಕಪ್ ನಲ್ಲಿ ಕೆನಡಾ ಚಾಂಪಿಯನ್ ಆಯಿತು. ಇದರೊಂದಿಗೆ ಎರಡನೇ ಬಾರಿ ಕೆನಡಾ ವಿಶ್ವಚಾಂಪಿಯನ್ ಆಗಿದೆ. ಸೆಪ್ಟೆಂಬರ್ ನಲ್ಲಿ ನಡದ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು. ಎರಡನೇ ಸ್ಥಾನದಲ್ಲಿ ಯುರೋಪ್ ಮತ್ತು ಸ್ವಿಡನ್ ಮೂರನೇ ಸ್ಥಾನ ಅಲಂಕರಿಸಿತ್ತು.