ಹಿನ್ನೋಟ 2022

ಹಿನ್ನೋಟ 2022: ರಾಜಕೀಯ ಚದುರಂಗದಾಟ: ಆರಕ್ಕೇರಿದವರು, ಮುಗ್ಗರಿಸಿ ಬಿದ್ದವರು; ರಾಜ್ಯ ರಾಜಕೀಯ ಘಟನಾವಳಿಗಳ ಒಂದು ಕಿರುನೋಟ

Shilpa D

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಈ ವರ್ಷ ಕೂಡ ಹಲವು ಮಹತ್ತರ ಬದಲಾವಣೆಗಳು ಘಟಿಸಿವೆ, 2023 ರ ವಿಧಾನಸಭಾ ಚುನಾವಣೆ ಒಂದು ವರ್ಷ ಬಾಕಿ ಇರುವಾಗಲೇ ಮೂರು ಪಕ್ಷಗಳು ಸಹ ಭರ್ಜರಿ ತಯಾರಿ ನಡೆಸಿವೆ. 2022ರಲ್ಲಿ ಆದ ಪ್ರಮುಖ ರಾಜಕೀಯ ಬೆಳವಣಿಗೆಗಳ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಪ್ರಮಾಣ ವಚನ

ಅಕ್ಟೋಬರ್ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. 24 ವರ್ಷಗಳ ನಂತರ ಈ ಹುದ್ದೆಯನ್ನು ಅಲಂಕರಿಸುತ್ತಿರುವ ಮೊದಲ ಗಾಂಧಿಯೇತರ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಪಾತ್ರರಾಗಿದ್ದಾರೆ.

ಬಿಜೆಪಿ ಸಂಸದೀಯ ಮಂಡಳಿಗೆ ಬಿಎಸ್‍ ಯಡಿಯೂರಪ್ಪ ಆಯ್ಕೆ

ಆಗಸ್ಟ್ ತಿಂಗಳಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನ ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣಕ್ಕೆ ಹೈಕಮಾಂಡ್ ಪ್ರಮೋಷನ್ ನೀಡಿದೆ. ಪಕ್ಷದ ಅತ್ಯುನ್ನತ ಮಂಡಳಿಯಾದ ಸಂಸದೀಯ ಮಂಡಳಿಯಲ್ಲಿ ಯಡಿಯೂರಪ್ಪಗೆ ಟಾಪ್ ಐದನೇ ಸ್ಥಾನ ನೀಡಿ, ಅವರನ್ನು ಪಕ್ಷ ಕಡೆಗಣಿಸಿಯೂ ಇಲ್ಲ ಎಂಬ ಸಂದೇಶವನ್ನು ಹೈಕಮಾಂಡ್ ನೀಡಿದೆ.

ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ

2022ರ ಆರಂಭದಲ್ಲಿಯೇ ಮೇಕೆದಾಟು ಬಳಿ ಆಣೆಕಟ್ಟು ನಿರ್ಮಾಣಕ್ಕೆ ಆಗ್ರಹಿಸಿ ಕರ್ನಾಟಕ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ನಡೆಸಿದರು. ರಾಮನಗರ ಜಿಲ್ಲೆಯ ಮೇಕೆದಾಟು ಸಂಗಮ ಬಳಿಯಿಂದ ಜನವರಿ 9 ರಿಂದ ಕಾಂಗ್ರೆಸ್‌ ಮೇಕೆದಾಟು ಪಾದಯಾತ್ರೆ ಆರಂಭಿಸಿತ್ತು. ಮೊದಲು ಒಂದೇ ಹಂತದಲ್ಲಿ ಪಾದಯಾತ್ರೆ ನಿಗದಿಯಾಗಿತ್ತು. ಆದರೆ, ಕೊರೊನಾ ಹಿನ್ನೆಲೆ ಜನವರಿ 13ರಂದು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಬಳಿಕ ಫೆಬ್ರವರಿ 27 ರಿಂದ ಎರಡನೇ ಹಂತದ ಮೇಕೆದಾಟು ಪಾದಯಾತ್ರೆಯನ್ನು ಆರಂಭಿಸಿ, ಮಾರ್ಚ್‌ 3 ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಅಂತ್ಯವಾಗಿತ್ತು. ವರ್ಷದ ಆರಂಭದಲ್ಲಿಯೇ ಮೇಕೆದಾಟು ಪಾದಯಾತ್ರೆಯ ಮೂಲಕ ಕಾಂಗ್ರೆಸ್‌ ಶಕ್ತಿಪ್ರದರ್ಶನ ನಡೆಸಿತ್ತು.

ಜೆಡಿಎಸ್‌ ಜನತಾ ಜಲಧಾರೆ
ರಾಜ್ಯ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಜೆಡಿಎಸ್‌ ʼಜನತಾ ಜಲಧಾರೆʼ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಏಪ್ರಿಲ್‌ 16ರಿಂದ ಜನತಾ ಜಲಧಾರೆ ಕಾರ್ಯಕ್ರಮ ಆರಂಭವಾಗಿದ್ದು,ರಾಜ್ಯದ 15 ಜೀವ ನದಿಗಳ ಪುಣ್ಯಜಲವನ್ನು ಕಲಶಕ್ಕೆ ತುಂಬಿಕೊಳ್ಳುವ ಕಾರ್ಯಕ್ರಮ ಇದಾಗಿತ್ತು. ಹದಿನೈದು ಗಂಗಾ ರಥಗಳ ಮೂಲಕ ಪುಣ್ಯಜಲ ಸಂಗ್ರಹಿಸಲಾಗಿತ್ತು. ಮೇ 13ರಂದು ಜನತಾ ಜಲಧಾರೆಯ ಅದ್ಧೂರಿ ಸಮಾರೋಪ ಸಮಾರಂಭ ನೆಲಮಂಗಲ ಸಮೀಪದ ಬಾವಿಕೆರೆ ಬಳಿಯ ಬೆಂಗಳೂರು-ಹಾಸನ ಹೆದ್ದಾರಿಯ ಪಕ್ಕದ ಬೃಹತ್ ಮೈದಾನದಲ್ಲಿ ನೆರವೇರಿತು. ಈ ಸಮಾವೇಶದ ಮೂಲಕ ಜೆಡಿಎಸ್‌ ಕೂಡ ಚುನಾವಣೆಗೆ ಭರ್ಜರಿಯಾಗಿಯೇ ರಣಕಹಳೆ ಮೊಳಗಿಸಿತು.

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ
ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನವನ್ನು ದಾವಣಗೆರೆಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಆಗಸ್ಟ್‌ 3ರಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರು ಸಿದ್ದರಾಮೋತ್ಸವ ಆಚರಿಸಿ ಶಕ್ತಿಪ್ರದರ್ಶನ ನಡೆಸಿದರು. 10 ಲಕ್ಷಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಜನಸ್ಪಂದನ - ಬಿಜೆಪಿ ಸಾಧನೆ ಅನಾವರಣ
ಸೆಪ್ಟೆಂಬರ್‌ 10ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯ ಜನಸ್ಪಂದನ ಸಮಾವೇಶ ನಡೆಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರಕ್ಕೆ ವರ್ಷ ತುಂಬಿದ ಹಿನ್ನೆಲೆ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ದೊಡ್ಡಬಳ್ಳಾಪುರದಲ್ಲಿ ನಡೆದ ಸಮಾವೇಶದಲ್ಲಿ ಸರ್ಕಾರದ ಸಾಧನೆಗಳ ಅನಾವರಣ ಆಯಿತು.

ಸಂಧಾನದ ಬಳಿಕ ಜೆಡಿಎಸ್ ನಲ್ಲೇ ಉಳಿದುಕೊಂಡ ಜಿ.ಟಿ ದೇವೇಗೌಡ
ಮಾಜಿ ಸಚಿವ ಜಿ.ಟಿ ದೇವೇಗೌಡ ಪಕ್ಷದ ವರಿಷ್ಠರೊಂದಿಗೆ ಮುನಿಸಿಕೊಂಡಿದ್ದು, ಕೆಲವು ತಿಂಗಳುಗಳ ಕಾಲ ಜೆಡಿಎಸ್ ಎಲ್ಲಾ ಕಾರ್ಯಕ್ರಮಗಳಿಂದಲೂ ದೂರವೇ ಉಳಿದಿದ್ದರು, ಅದಾದ ನಂತರ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮನವೊಲಿಕೆ ನಂತರ ಜೆಡಿಎಸ್ ನಲ್ಲಿಯೇ ಉಳಿದುಕೊಂಡಿದ್ದಾರೆ. ಈ ನಡುವೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿ.ಟಿ ದೇವೇಗೌಡರ ಪುತ್ರ ಹರೀಶ್ ಗೌಡರಿಗೂ  ಹುಣಸೂರಿನಿಂದ ಟಿಕೆಟ್ ಘೋಷಿಸಲಾಗಿದೆ.

ಭಾರತ್ ಜೋಡೋ ಯಾತ್ರೆ, ಬಳ್ಳಾರಿಯಲ್ಲಿ ಕೈ ಶಕ್ತಿ ಪ್ರದರ್ಶನ
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಪಾದಯಾತ್ರೆ ಸೆಪ್ಟೆಂಬರ್‌ 30ರಂದು ಕರ್ನಾಟಕವನ್ನು ಪ್ರವೇಶಿಸಿತ್ತು. ಈ ಪಾದಯಾತ್ರೆಯ ಮೂಲಕ ಕರ್ನಾಟಕದಲ್ಲಿ ಮತ್ತೊಂದು ಬಾರಿ ಕಾಂಗ್ರೆಸ್‌ ನಾಯಕರು ಶಕ್ತಿ ಪ್ರದರ್ಶನ ನಡೆಸಿದರು. ಅದಲ್ಲದೇ ಅಕ್ಟೋಬರ್‌ 15ರಂದು ಬಳ್ಳಾರಿಯಲ್ಲಿ ಬೃಹತ್‌ ಸಮಾವೇಶ ನಡೆಸುವ ಮೂಲಕ ಕಲ್ಯಾಣ ಕರ್ನಾಟಕ ಹಾಗೂ ಆಂಧ್ರದ ಗಡಿ ಪ್ರದೇಶದಲ್ಲಿ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳುವ ಪ್ರಯತ್ನವನ್ನು ಕಾಂಗ್ರೆಸ್‌ ಮಾಡಿತ್ತು.

ಬಿಜೆಪಿ ಸರಣಿ ಜನಸಂಕಲ್ಪ ಸಮಾವೇಶ
ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕೂಡ ಬಿಎಸ್‌ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆಯನ್ನು ಆರಂಭಿಸಿತ್ತು. ರಾಯಚೂರಿನಲ್ಲಿ ಆರಂಭವಾದ ಜನಸಂಕಲ್ಪ ಸಮಾವೇಶಗಳನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ನಡೆಸಲಾಯಿತು. ಈ ಮೂಲಕ ಕಾಂಗ್ರೆಸ್‌‌ನ ಪಾದಯಾತ್ರೆಗಳಿಗೆ ಟಕ್ಕರ್‌ ನೀಡುವ ಪ್ರಯತ್ನವನ್ನು ಬಿಜೆಪಿ ಮಾಡಿತು. ಅದರ ಜೊತೆ ಬಳ್ಳಾರಿಯಲ್ಲಿ ಬೃಹತ್‌ ಎಸ್‌ಟಿ ಸಮಾವೇಶವನ್ನು ಬಿಜೆಪಿ ನಾಯಕರು ಸಂಘಟಿಸಿ, ಎಸ್‌ಸಿ/ಎಸ್‌ಟಿ ಮೀಸಲು ಹೆಚ್ಚಳದ ಲಾಭ ಪಡೆಯುವ ಪ್ರಯತ್ನವನ್ನು ಮಾಡಿದರು.

ಜೆಡಿಎಸ್ ಪಂಚರತ್ನ ರಥಯಾತ್ರೆ
ಚುನಾವಣೆ ದೃಷ್ಟಿಯಿಂದ ಜೆಡಿಎಸ್‌ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಯಾತ್ರೆಯನ್ನು ಆರಂಭಿಸಿದೆ. ನವೆಂಬರ್‌ 18ರಂದು ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಬೃಹತ್‌ ಸಮಾವೇಶದ ಮೂಲಕ ಪಂಚರತ್ನ ಯಾತ್ರೆ ಆರಂಭವಾಗಿದೆ. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆಸ ಸಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕೆಂಬ ಉದ್ದೇಶ ಹೊಂದಿದ್ದು, ಪಂಚರತ್ನ ಯಾತ್ರೆ ಹೆಸರಿನಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಂಡಿದೆ.

ಕಾಂಗ್ರೆಸ್-ಬಿಜೆಪಿ ಪೋಸ್ಟರ್ ವಾರ್

ವಿಧಾನಮಂಡಲದ ಅಧಿವೇಶನದಲ್ಲಿ ಪಿಎಸ್‌ಐ ನೇಮಕಾತಿ ಅಕ್ರಮ, ಶೇ.40 ಪರ್ಸೆಂಟ್‌ ಕಮಿಷನ್‌ ಆರೋಪಗಳ ಗದ್ದಲದ ನಡುವೆಯೇ ಸದನದ ಹೊರಗೆ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ಪೋಸ್ಟರ್‌ “ವಾರ್‌’ ಪ್ರಾರಂಭವಾಗಿತ್ತು. ಸೆ.21ರಂದು ವಿಧಾನಸೌಧ, ಮುಖ್ಯಮಂತ್ರಿಗಳ ನಿವಾಸ, ಶಾಸಕರ ಭವನ ಸುತ್ತಮುತ್ತ “ಪೇ ಸಿಎಂ 40 ಪರ್ಸೆಂಟ್‌’ ಹೆಸರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಫೋಟೋ ಸಹಿತ ಪೋಸ್ಟರ್‌ ಅಂಟಿಸಲಾಗಿತ್ತು.

ಜೆಡಿಎಸ್ ಪಕ್ಷದ ತೊರೆದು ಕಾಂಗ್ರೆಸ್ ಸೇರ್ಪಡೆಗೆ ಮುಂದಾದ ವೈ ಎಸ್ ವಿ ದತ್ತ

ತಮ್ಮ ಕ್ಷೇತ್ರ ಜನರಿಗಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಲು ಸಿದ್ದನಾಗದ್ದೇನೆ ಎಂದು ಮಾಜಿ ಶಾಸಕ ವೈ ಎಸ್ ವಿ ದತ್ತ ಮಾಧ್ಯಮಗಳ ಜೊತೆಗೆ ಮಾತನಾಡಿದ್ದು, ಕಾಂಗ್ರೆಸ್ ಸೇರ್ಪಡೆಗೆ ತಯಾರಿ ನಡೆಸುತ್ತಿದ್ದಾರೆ.


ಜೆಡಿಎಸ್ ನಿಂದ ಗುಬ್ಬಿ ಶಾಸಕ  ಎಸ್. ಆರ್. ಶ್ರೀನಿವಾಸ್ ಅಮಾನತು

ಗುಬ್ಬಿ ಕ್ಷೇತ್ರದ ಹಾಲಿ ಶಾಸಕ ಎಸ್. ಆರ್. ಶ್ರೀನಿವಾಸ್ ಜೆಡಿಎಸ್ ತೊರೆಯುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಅವರು ಯಾವ ಪಕ್ಷ ಸೇರಲಿದ್ದಾರೆ? ಎಂಬುದು ಖಚಿತವಾಗಿಲ್ಲ. ರಾಹುಲ್‌ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಗುಬ್ಬಿಗೆ ಆಗಮಿಸಿದಾಗ ರಾಹುಲ್ ಸ್ವಾಗತಿಸಿ, ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣಕ್ಕೆ ಜೆಡಿಎಸ್ ಪಕ್ಷದಿಂದ ಎಸ್. ಆರ್‌. ಶ್ರೀನಿವಾಸ್‌ ಅಮಾನತುಗೊಳಿಸಲಾಗಿದೆ.

ಎಎಪಿ ಸೇರಿದ ಭಾಸ್ಕರ್ ರಾವ್ ಮತ್ತು ಮುಖ್ಯಮಂತ್ರಿ ಚಂದ್ರು ಬ್ರಿಜೇಶ್ ಕಾಳಪ್ಪ

ನಿವೃತ್ತ ಐಪಿಎಸ್‌ ಅಧಿಕಾರಿ ಬಿ. ಭಾಸ್ಕರ್‌ ರಾವ್‌  ಆಮ್‌ ಆದ್ಮಿ ಪಕ್ಷ (ಎಎಪಿ) ಸೇರಿದರು. ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪಕ್ಷಕ್ಕೆ ಸ್ವಾಗತಿಸಿದರು. 1990ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ಅವರು, ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದ ನಟ ಮುಖ್ಯಮಂತ್ರಿ ಚಂದ್ರು ಎಎಪಿ ಸೇರ್ಪಡೆಯಾದರು. ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ಹಾಗೂ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಅವರು ಆಮ್‌ ಆದ್ಮಿ ಪಾರ್ಟಿಗೆ  ಸೇರ್ಪಡೆಯಾದರು.

ನಿಖಿಲ್ ಗಾಗಿ ಕ್ಷೇತ್ರ ತ್ಯಾಗ ಮಾಡಿದ ಶಾಸಕಿ ಅನಿತಾ ಕುಮಾರಸ್ವಾಮಿ

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯಕ್ಕಾಗಿ ಶಾಸಕಿ ಅನಿತಾ ಕುಮಾರಸ್ವಾಮಿ, ತಮ್ಮ ಮಗನಿಗಾಗಿ ರಾಮನಗರ ವಿಧಾನಸಭೆ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ.  2023ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಪ್ರತಿನಿಧಿಸುತ್ತಿರುವ ರಾಮನಗರ ಕ್ಷೇತ್ರದಿಂದ ಪುತ್ರ ನಿಖಿಲ್‌ ಸ್ಪರ್ಧಿಸಲಿದ್ದಾನೆ ಎಂದು ಸ್ವತಃ ಅನಿತಾ ಕುಮಾರಸ್ವಾಮಿ ಅವರು ಘೋಷಿಸಿದ್ದಾರೆ.

ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅಧಿಕಾರ ಸ್ವೀಕಾರ

ಏಪ್ರಿಲ್ ನಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಮಾಜಿ ಎಂಎಲ್ ಸಿ ಸಿಎಂ ಇಬ್ರಾಹಿಂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದರು. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಪಕ್ಷದ ಧ್ವಜ ನೀಡಿ ಇಬ್ರಾಹಿಂ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅಧಿಕಾರ ಸ್ವೀಕಾರ

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿದ್ದ ಮೊಹಮ್ಮದ್ ನಲಪಾಡ್ ಅವರನ್ನು ಅನರ್ಹಗೊಳಿಸಿ, ನಂತರದ ಸ್ಥಾನ ಗಳಿಸಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು.

ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕುಂತೂರು ನೇಮಕ

ಜುಲೈ ತಿಂಗಳಿನಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ರಾಜೇಶ್ ಕುಂತೂರು ನೇಮಕಗೊಂಡಿದ್ದಾರೆ. ಈವರೆಗೆ ಈ ಜವಾಬ್ದಾರಿ ಹೊತ್ತಿದ್ದ ಅರುಣ್ ಕುಮಾರ್ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖ್ ಜವಾಬ್ದಾರಿ ನೀಡಲಾಗಿದೆ.

ಶಿಕಾರಿಪುರ ಕ್ಷೇತ್ರವನ್ನು ವಿಜಯೇಂದ್ರಗೆ ಬಿಟ್ಟು ಕೊಟ್ಟ ಯಡಿಯೂರಪ್ಪ

2023ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಪುತ್ರ  ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ. ನಾನು ನನ್ನ ಕ್ಷೇತ್ರವನ್ನು ಬಿಟ್ಟು ಕೊಡುತ್ತಿರುವ ಕಾರಣ ಮುಂದಿನ ಚುನಾವಣೆಯಲ್ಲಿ ನನ್ನ ಮಗ ಬಿ. ವೈ. ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ. ಶಿಕಾರಿಪುರ ಜನತೆ ಬೆಂಬಲ ನೀಡಬೇಕು ಎಂದು ಯಡಿಯೂರಪ್ಪ ಮನವಿ ಮಾಡಿಕೊಂಡರು.

ಪ್ರಧಾನಿ ನರೇಂದ್ರ ಮೋದಿ ಕೈಯಲ್ಲಿ ಕೆಂಪೇಗೌಡ ಪ್ರತಿಮೆ ಅನಾವರಣ

ನವೆಂಬರ್ ತಿಂಗಳಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಬಳಿ 108 ಅಡಿ ಎತ್ತರದ ಕೆಂಪೇಗೌಡ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು.

ಜನಾರ್ಧನ ರೆಡ್ಡಿ ಹೊಸ ಪಕ್ಷ ಸ್ಥಾಪನೆ- ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಘೋಷಣೆ

ಬಿಜೆಪಿ ತೊರೆದು ಬಂದ ಮಾಜಿ ಸಚಿವ ಜನಾರ್ಧನರಡ್ಡಿ ಹೊಸ ಪಕ್ಷ  ಸ್ಫಾಪಿಸಿದ್ದಾರೆ.  ‘ಕಲ್ಯಾಣ ರಾಜ್ಯ, ಪ್ರಗತಿ ಪಕ್ಷ’ ಎಂಬ ಪಾರ್ಟಿಯನ್ನು ಸ್ಥಾಪಿಸಿರುವ ಜನಾರ್ಧನರಡ್ಡಿ ಮುಂಬರುವ ಚುನಾವಣೆಯಲ್ಲಿ ಗಂಗಾವತಿಯಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

SCROLL FOR NEXT