ವರಮಹಾಲಕ್ಷ್ಮಿ ವ್ರತ

ಸಂಪತ್ತಿಗೆ ಅಧಿದೇವತೆ ಲಕ್ಷ್ಮಿ ಏಕೆ?

Sumana Upadhyaya

ಹಿಂದೂ ಧರ್ಮದಲ್ಲಿ ಲಕ್ಷ್ಮೀ ದೇವಿಯನ್ನು ಮುಖ್ಯವಾಗಿ ಐಶ್ವರ್ಯ, ಸಂಪತ್ತಿನ ಅಧಿ ದೇವತೆಯಾಗಿ ಪೂಜಿಸುತ್ತಾರೆ. ಲಕ್ಷ್ಮಿಯು ಮಹಾ ವಿಷ್ಣುವಿನ ಹೆಂಡತಿ ಮಾತ್ರವಲ್ಲ ಶಕ್ತಿಯ ಪ್ರತೀಕ  ಕೂಡ ಹೌದು.

ಮಹಾಲಕ್ಷ್ಮಿಯ ನಾಲ್ಕು ಕೈಗಳು ಮನುಷ್ಯನ ಜೀವನದ ನಾಲ್ಕು ಪ್ರಮುಖ ಪುರುಷಾರ್ಥಗಳನ್ನು ಪ್ರತಿನಿಧಿಸುತ್ತವೆ. ಹಿಂದೂ ಧರ್ಮದ ಪ್ರಮುಖ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ, ಮೋಕ್ಷಗಳೇ ಜೀವನದ ನಾಲ್ಕು ಗುರಿಗಳಾಗಿವೆ.

ಮಹಾನ್ ವಿಷ್ಣುವು ಭೂಮಿಯ ಮೇಲೆ ರಾಮ ಮತ್ತು ಕೃಷ್ಣನಾಗಿ ಅವತಾರವೆತ್ತಿದರೆ, ಲಕ್ಷ್ಮಿಯು ಸೀತೆ, ರಾಧೆ ಮತ್ತು ರುಕ್ಮಿಣಿಯಾಗಿ ಕಾಣಿಸಿಕೊಂಡಿದ್ದಾಳೆ. ಭಾರತದ ಪುರಾಣಗಳಲ್ಲಿ ಮಹಿಳೆಯರನ್ನು ಲಕ್ಷ್ಮಿ ದೇವಿಗೆ ಹೋಲಿಸಲಾಗಿದೆ. ಅಂದರೆ ಶಕ್ತಿಯ ಪ್ರತೀಕ ಅವಳು.

ಹಿಂದೂ ಧರ್ಮದ ನಾಲ್ಕು ವೇದಗಳಲ್ಲಿ ಒಂದಾದ ಋಗ್ವೇದದಲ್ಲಿ ಲಕ್ಷ್ಮೀ ದೇವಿಯನ್ನು ಕೇವಲ ಸಂಪತ್ತಿನ ಮತ್ತು ಅದೃಷ್ಟದ ಸಂಕೇತವಾಗಿ ಮಾತ್ರ ಬಳಸಿಲ್ಲ. ಲಕ್ಷ್ಮೀ ದೇವತೆಯೆಂದರೆ ಮಂಗಳಕರ ಐಶ್ವರ್ಯದ ಸೂಚನೆ. ಅಥರ್ವ ವೇದದಲ್ಲಿ ಕೂಡ ಲಕ್ಷ್ಮಿಯನ್ನು ಅದೃಷ್ಟ, ಐಶ್ವರ್ಯ, ಸಮೃದ್ಧಿ, ಯಶಸ್ಸು ಮತ್ತು ಸಂತೋಷದ ಸಂಕೇತವಾಗಿ ನಿರೂಪಿಸಲಾಗಿದೆ.

ಕೇವಲ ಭೌತಿಕ ಸಮೃದ್ಧಿ ಮಾತ್ರವಲ್ಲದೆ ಧಾರ್ಮಿಕ, ಚಾರಿತ್ರಿಕ ಐಶ್ವರ್ಯ ಕೂಡ ಲಕ್ಷ್ಮಿಗೆ ಸಲ್ಲುತ್ತದೆ. ಸಮೃದ್ಧಿ ಮತ್ತು ಹಣ ಯಾವಾಗಲೂ ಒಂದಕ್ಕೊಂದು ಪೂರಕ. ಹೀಗಾಗಿ ಮಹಾಲಕ್ಷ್ಮಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಕರೆಯುತ್ತಾರೆ. ದೇವಿಗೆ ಹಣ ಇಟ್ಟು ಪೂಜೆ ಮಾಡುತ್ತಾರೆ.
-ಸುಮನಾ ಉಪಾಧ್ಯಾಯ
ಬೆಂಗಳೂರು

SCROLL FOR NEXT