ವರಮಹಾಲಕ್ಷ್ಮಿ ದಿನ ಪೂಜೆ ಹೆಸರೇ ಸೂಚಿಸುವಂತೆ ಇದು ಲಕ್ಷ್ಮಿದೇವಿಯನ್ನು ಪೂಜಿಸುವ ದಿನ. ಶ್ರಾವಣ ಮಾಸದ ಶುಕ್ಷ ಪಕ್ಷದ ಶುಕ್ರವಾರನ್ನು ವರಮಹಾಲಕ್ಷ್ಮಿ ದಿನ ಎಂದು ಕರೆಯುವುದುಂಟು. ವರಮಹಾಲಕ್ಷ್ಮಿ ದಿನ ಆಚರಣೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಶ್ರೇಷ್ಠತೆ ಪಡೆದುಕೊಳ್ಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಪ್ರತೀಯೊಬ್ಬ ಗೃಹಿಣಿಯೂ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲು ಮುಂದಾಗುತ್ತಿದ್ದಾರೆ. ವರಮಹಾಲಕ್ಷ್ಮಿ ಹಬ್ಬ ಆಚರಣೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದು, ಆಡಂಬರವಾಗಿ ಅಲ್ಲದಿದ್ದರೂ ಚಿಕ್ಕದಾದ ಲಕ್ಷ್ಮಿ ದೇವಿಯನ್ನು ಕೂರಿಸಿ ಆಚರಣೆ ಮಾಡಲು ಜನರು ಮುಂದಾಗುತ್ತಿದ್ದಾರೆ.
ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಲಕ್ಷ್ಮಿ ಕೂರಿಸುವುದಕ್ಕೆ ಬೇಕಾದ ಎಲ್ಲಾ ವಸ್ತುಗಳು ದೊರೆಯುವುದುಂಟು.ಲಕ್ಷ್ಮಿ ಕೂರಿಸುವುದು ಕೇವಲ ಇತರರು ನೋಡುವುದಕ್ಕಾಗಿ ಅಲ್ಲ. ನಮ್ಮ ಇಷ್ಟಾರ್ಥಗಳನ್ನು ಈಡೇರಿಸುವ ಸಲುವಾಗಿ. ರೀತಿನೀತಿ ನಿಯಮಗಳ ಮೂಲಕ ಲಕ್ಷ್ಮಿಪೂಜೆಯನ್ನು ಮಾಡಬೇಕು. ಪ್ರತಿಯೊಂದು ಪೂಜೆಗೂ ಒಂದಲ್ಲ ಒಂದು ರೀತಿಯ ನಿಯಮ ಹಾಗೂ ಪದ್ಧತಿ ಇರುತ್ತದೆ. ಹಾಗೆಯೇ ಲಕ್ಷ್ಮಿ ಪೂಜೆಗೂ ನಿಯಮಗಳಿದ್ದು, ಅವುಗಳನ್ನು ಪಾಲಿಸಿ ಪೂಜೆ ಮಾಡಿದರೆ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದು ಎಂದು ಹಿರಿಯರು ಹೇಳುತ್ತಾರೆ.
ಲಕ್ಷ್ಮಿ ಪೂಜೆ ಹೇಗೆ ಮಾಡಬೇಕು...ಅವುಗಳ ರೀತಿ ನೀತಿಗಳೇನು ಎಂಬ ಮಾಹಿತಿ ಇಲ್ಲಿದೆ.
- ಲಕ್ಷ್ಮಿ ಪೂಜೆ ಮಾಡುವ ಹಿಂದಿನ ದಿನವೇ ಶುಭ್ರವಾಗಿ ಪೂಜೆಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ತಯಾರು ಮಾಡಿಟ್ಟುಕೊಳ್ಳಬೇಕು. ಉದಾಹರಣೆಗೆ: ಸೀರೆ, ಹಣ್ಣು, ಅಲಂಕಾರಿಕ ವಸ್ತು, ಶುದ್ಧ ನೀರು ಇತ್ಯಾದಿ...
- ಲಕ್ಷ್ಮಿಯನ್ನು ಉತ್ತರಾಭಿಮುಖವಾಗಿ ಪ್ರತಿಷ್ಠಾಪಿಸುವುದಾದರೆ ಹಸಿರು ಬಣ್ಣದ ಸೀರೆಯನ್ನು ತೊಡಿಸಬೇಕು. ಕೆಂಪು ಮತ್ತು ಹಳದಿ ಹೂವುಗಳನ್ನು ಬಳಸಬೇಕು. ದೀಪವನ್ನು ತುಪ್ಪದಿಂದ ಹಚ್ಚಬೇಕು.
- ಪೂಜೆಯ ದಿನದಂದು ಮಹಿಳೆಯರು ಸೂರ್ಯ ಹುಟ್ಟುವುದಕ್ಕೆ ಮುಂಚೆಯೇ ಎದ್ದು, ಶುದ್ಧ ನೀರಿನಿಂದ ಸ್ನಾನ ಮಾಡಬೇಕು. ಲಕ್ಷ್ಮಿ ವ್ರತ ಮಾಡುವವರೇ ಕಲಶ ಸ್ಥಾಪನೆ ಮಾಡಬೇಕು.
- ಪೂಜಾ ಸ್ಥಳವನ್ನು ತುಂಬಿದ ಕೊಡದ ನೀರಿನಿಂದ ಶುದ್ಧ ಮಾಡಿ. ಸ್ಥಳದಲ್ಲಿ ಅಷ್ಟದಳದ ರಂಗೋಲಿ ಹಾಕಿ, ಬಾಳೆಕಂಬ, ಮಾವಿನ ಎಲೆಗಳಿಂದ ಸಿಂಗರಿಸಬೇಕು.
- ಕಲಶಕ್ಕೆ ತುಂಬಿದ ಕೊಡದ ಶುದ್ಧ ನೀರು ಹಾಕಿ/ಶುದ್ಧ ಅಕ್ಕಿ ಹಾಕಬೇಕು. ಇದರ ಜೊತೆಗೆ ಅರಿಶಿಣದ ಕೊಂಬು, ಅಡಿಕೆ, ಬೆಳ್ಳಿ ಅಥವಾ ಯಾವುದೇ ನಾಣ್ಯ, ದ್ರಾಕ್ಷಿ, ಗೋಡಂಬಿ, ಕರ್ಜೂರ, ಬಾದಾಮಿ, ಕಲ್ಲುಸಕ್ಕರೆ ಹಾಕಬೇಕು. ನಂತರ ಒಂಬತ್ತು ಎಳೆಯ ದಾರ ತೆಗೆದುಕೊಂಡು ಇದಕ್ಕೆ ಅರಿಶಿಣ ಹಚ್ಚಿ, ಅರಿಶಿಣದ ಕೊಂಬನ್ನು ಕಟ್ಟಿ ತಾಳಿ ಮಾಡಬೇಕು. ಇದನ್ನು ಕಲಶದ ಚೊಂಬಿಗೆ ಕಟ್ಟಿದರೆ ಕಲಶ ತಯಾರಾಗುತ್ತದೆ.
ಪ್ರಾಣ ಪ್ರತಿಷ್ಠಾಪನೆ....
- ಪ್ರಣಪ್ರತಿಷ್ಠಾಪನೆ ಸಮಯದಲ್ಲಿ ಕೈಯಲ್ಲಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವುಗಳನ್ನು ತೆಗೆದುಕೊಳ್ಳಬೇಕು. ದೇವಿಯ ಸಹಸ್ರ ನಾಮವನ್ನು ಹೇಳಿ ಕೊನೆಗೆ ನಮಃ ಎಂದು ಹೇಳಿ ಗಂಧಾಕ್ಷತೆ, ತುಳಸೀದಳ ಅಥವಾ ಹೂವನ್ನು ದೇವತೆಗೆ ಅರ್ಪಿಸಿ ನಮಸ್ಕರಿಸಬೇಕು.
- ಪ್ರಾಣ ಪ್ರತಿಷ್ಟಾಪನೆ ಬಳಿಕ ನಂತರ ಲಕ್ಷ್ಮಿ ದೇವಿಗೆ ಸೀರೆಯನ್ನು ಉಡಿಸಿ, ಅಲಂಕಾರ ಮಾಡಬೇಕು.
ದೇವಿಯ ವಿಸರ್ಜನೆ...
ಚೌಕ ಹಾಗೂ ರಂಗೋಲಿ ಬರೆದ ಪುಡಿ, ಹೂವು, ಎಲ್ಲಾ ವಸ್ತುವನ್ನು ತೆಗೆದು ಎಲ್ಲೆಂದರಲ್ಲಿ ಬಿಸಾಡದೆ ಗಲೀಜು ಮಾಡದೆ ನದಿ ದಡದಲ್ಲಿ ಇಡಬೇಕು. ನದಿಗೆ ಎಸೆಯಬಾರದು. ನದಿಗೆ ಎಸೆದರೆ ದೋಷ ಉಂಟಾಗುತ್ತದೆ. ಪೂಜೆ ಮಾಡುವುದು ಎಷ್ಟು ಮುಖ್ಯವೋ ಪೂಜೆ ನಂತರವಿರುವ ಪದ್ಧತಿಗಳನ್ನೂ ಅನುಸರಿಸುವುದೂ ಸಹ ಅಷ್ಟೇ ಮುಖ್ಯ.