ಲೆನ್ಸ್ ದ್ರವ ಕುಡಿದು ಮೂರು ದಿನ ಕಳೆದ!
ಕೆಲವು ಗಂಟೆ ಕಳೆದಿದ್ದರೆ ಆತ ಹಸಿವಿನಿಂದ ತನ್ನ ಮೂತ್ರವನ್ನೇ ಕುಡಿಯುತ್ತಿದ್ದ! 'ಕಾಸ್ಟ್ ಅವೇ' ಎಂಬ ಸಿನಿಮಾದಲ್ಲಿ ವ್ಯಕ್ತಿಯೊಬ್ಬ ಯಾವುದೋ ದ್ವೀಪದಲ್ಲಿ ಸಿಲುಕಿಕೊಂಡು ಒದ್ದಾಡಿದಂತೆ ಬ್ರಿಟನ್ನ 18ರ ಹರೆಯದ ಯುವಕನೊಬ್ಬ 3 ದಿನಗಳ ಕಾಲ ಕುರುಚಲು ಪೊದೆಗಳಿಂದ ತುಂಬಿದ ಪ್ರದೇಶವೊಂದರಲ್ಲಿ ಕಷ್ಟಪಟ್ಟಿದ್ದಾನೆ. ಕ್ವೀನ್ಸ್ಲ್ಯಾಂಡ್ನಿಂದ ಜಾಗ್ ಆರಂಭಿಸಿದ ಸ್ಯಾಮ್ ವುಡ್ಹೆಡ್ ಹೋಗಿ ತಲುಪಿದ್ದು ಮಾತ್ರ ಯಾವುದೋ ಅಪರಿಚಿತ ಸ್ಥಳಕ್ಕೆ. ಕುಡಿಯಲು ನೀರಿಲ್ಲದೆ, ತಿನ್ನಲು ಆಹಾರವಿಲ್ಲದೇ 40 ಡಿಗ್ರಿ ಸೆಲ್ಶಿಯಸ್ ಉಷ್ಣತೆಯ ಪ್ರದೇಶದಲ್ಲಿ ಆತನೊಬ್ಬನೇ ಕಾಲ ಕಳೆದಿದ್ದಾನೆ. ಹಸಿವಿನಿಂದ ಬಳಲುತ್ತಿದ್ದ ಸ್ಯಾಮ್ ತನ್ನ ಬ್ಯಾಗಿನೊಳಗಿದ್ದ ಕಾಂಟ್ಯಾಕ್ಟ್ ಲೆನ್ಸ್ನ ದ್ರವವನ್ನೇ ಕುಡಿದಿದ್ದಾನೆ. ದ್ರವದ ಬಾಟಲಿಗಳೆಲ್ಲ ಖಾಲಿಯಾದ ಬಳಿಕ ನೀರಿಗಾಗಿ ಹಪಹಪಿಸಿದ್ದಾನೆ. ಇನ್ನೇನು ಮೂತ್ರವನ್ನೇ ಕುಡಿಯಬೇಕು ಎಂದು ನಿರ್ಧರಿಸಿದ್ದಾನೆ. ಅಷ್ಟರಲ್ಲಾಗಲೇ, ದೂರದಿಂದ ಹೆಲಿಕಾಪ್ಟರ್ವೊಂದನ್ನು ನೋಡಿ, ತನ್ನ ರಗ್ಬಿ ಶಾರ್ಟ್ ತೆಗೆದು ಅಪಾಯದಲ್ಲಿದ್ದೇನೆ ಎಂಬ ಸೂಚನೆ ನೀಡಿದ್ದು, ತಕ್ಷಣವೇ ಕಾಪ್ಟರ್ನಲ್ಲಿದ್ದವರು ಈತನನ್ನು ರಕ್ಷಿಸಿದ್ದಾರೆ. ನಾನು ಬದುಕಿ ಬಂದಿರುವುದೇ ಅಚ್ಚರಿ ಎನ್ನುತ್ತಾನೆ ಸ್ಯಾಮ್.