ಒಂದೇ ಬೆಟ್ಟ, ಎರಡು ನಂಬಿಕೆ: ಏನಿದು ತಿರುಪ್ಪರಂಕುಂದ್ರಂ ವಿವಾದದ ಅಸಲಿ ಕಥೆ? 100 ವರ್ಷಗಳ ಕಾನೂನು ಸಂಘರ್ಷದ ಚಿತ್ರಣ
ಮಧುರೈ (ತಮಿಳುನಾಡು): ಒಂದೇ ಬೆಟ್ಟ, ಎರಡು ನಂಬಿಕೆಗಳು ಮತ್ತು ನೂರು ವರ್ಷಗಳ ಕಾನೂನು ಸಂಘರ್ಷ! ತಮಿಳುನಾಡಿನ ಮಧುರೈ ಬಳಿಯ ಐತಿಹಾಸಿಕ ತಿರುಪ್ಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೀಪತೂಣ್ ಮೇಲೆ ಕಾರ್ತಿಕ ದೀಪ ಬೆಳಗಿಸುವ ವಿಚಾರ ಈಗ ಸುಪ್ರೀಂ ಕೋರ್ಟ್ ಅಂಗಳದಿಂದ ಹಿಡಿದು ತಮಿಳುನಾಡು ರಾಜಕೀಯದವರೆಗೆ ಭಾರಿ ಸಂಚಲನ ಮೂಡಿಸಿದೆ.
ಹೌದು, ಒಂದೆಡೆ ಬೆಟ್ಟದ ತಪ್ಪಲಿನಲ್ಲಿರುವ ಪ್ರಸಿದ್ಧ ಸುಬ್ರಮಣಿಯಸ್ವಾಮಿ ದೇವಾಲಯದ ಭಕ್ತರು ಮತ್ತು ಹಿಂದೂ ಸಂಘಟನೆಗಳು, ಮತ್ತೊಂದೆಡೆ ಬೆಟ್ಟದ ಮೇಲ್ಭಾಗದಲ್ಲಿರುವ ಸಿಕಂದರ್ ಬಾದುಷಾ ದರ್ಗಾದ ಆಡಳಿತ ಮಂಡಳಿ; ಇವರಿಬ್ಬರ ನಡುವೆ 1920ರ ದಶಕದಿಂದಲೂ ಈ ಬೆಟ್ಟದ ಹಕ್ಕಿಗಾಗಿ ಹೋರಾಟ ನಡೆಯುತ್ತಿದೆ. ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ಒಂದು ದಿನದ ಮಟ್ಟಿಗೆ ದೀಪ ಬೆಳಗಿಸಲು ಷರತ್ತುಬದ್ಧ ಅನುಮತಿ ನೀಡಿದ್ದರೂ, ಆಡಳಿತಾತ್ಮಕ ಕಾರಣಗಳಿಂದ ಅದು ಸಾಧ್ಯವಾಗದೆ ವಿವಾದವು ನ್ಯಾಯಾಂಗ ನಿಂದನೆ ಮತ್ತು ರಾಜಕೀಯ ಕೆಸರೆರಚಾಟದ ಹಂತಕ್ಕೆ ತಲುಪಿದೆ. ಹಾಗಾಗಿ, ಶತಮಾನಗಳ ಸಂಪ್ರದಾಯದ ಹೆಸರಿನಲ್ಲಿ ಒಂದು ಕಡೆ, ಧಾರ್ಮಿಕ ಹಕ್ಕಿನ ಹೆಸರಿನಲ್ಲಿ ಮತ್ತೊಂದು ಕಡೆ ನಡೆಯುತ್ತಿರುವ ವಿವಾದದ ಸಂಪೂರ್ಣ ಕಥೆ ಇಲ್ಲಿದೆ:
ವಿವಾದವೇನು?
ತಿರುಪ್ಪರಂಕುಂದ್ರಂ ಬೆಟ್ಟವು ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳಿಗೆ ಪವಿತ್ರವಾದ ತಾಣವಾಗಿದೆ. ಒಂದಡೆ, ಮುರುಗನ್ (ಸುಬ್ರಮಣಿಯಸ್ವಾಮಿ) ದೇವರ ಆರು ಪವಿತ್ರ ಕ್ಷೇತ್ರಗಳಲ್ಲಿ (ಅರುಪದೈ ವೀಡು) ಒಂದಾದ ಪ್ರಸಿದ್ಧ ದೇವಾಲಯವಿದೆ. ಇನ್ನು, ಸುರಪದ್ಮನನ್ನು ಸೋಲಿಸಿದ ನಂತರ ಮುರುಗನು ಇಂದ್ರನ ಮಗಳು ದೈವಾನೈ ಅಂದರೆ ದೇವಯಾನೈ ಅವರನ್ನು ಇಲ್ಲೇ ವಿವಾಹವಾದನು ಎಂಬುದು ನಂಬಿಕೆಯಿದೆ. ಮತ್ತೊಂದೆಡೆ, ಬೆಟ್ಟದ ತುದಿಯಲ್ಲಿ 14ನೇ ಶತಮಾನದ ಸೂಫಿ ಸಂತ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಔಲಿಯಾ ಅವರ ದರ್ಗಾ ಮತ್ತು ಮಸೀದಿ ಇದೆ. ಇನ್ನು, ಪ್ರತಿ ವರ್ಷ ಕಾರ್ತಿಕ ದೀಪೋತ್ಸವದಂದು ದೇವಸ್ಥಾನದ ಆಡಳಿತ ಮಂಡಳಿಯು ಬೆಟ್ಟದ ಕೆಳಭಾಗದಲ್ಲಿರುವ ಉಚ್ಚಿ ಪಿಳ್ಳೈಯಾರ್ (ಗಣೇಶ) ದೇವಸ್ಥಾನದ ಬಳಿಯ ದೀಪ ಮಂಟಪದಲ್ಲಿ ಮಹಾದೀಪವನ್ನು ಬೆಳಗಿಸುತ್ತದೆ.
ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ದೀಪ ಬೆಳಗದ ವಿಚಾರ: ಸುಪ್ರೀಂಕೋರ್ಟ್ಗೆ ಬೇಷರತ್ ಕ್ಷಮೆಯಾಚಿಸಿದ ವಿಜಯ್ ಸರ್ಕಾರ
ಆದರೆ, ಬೆಟ್ಟದ ಮೇಲ್ಭಾಗದಲ್ಲಿ ದರ್ಗಾದಿಂದ ಸುಮಾರು 50 ಮೀಟರ್ ದೂರದಲ್ಲಿರುವ ಪುರಾತನ ಕಲ್ಲಿನ ಕಂಬವೇ ನಿಜವಾದ 'ದೀಪತೂಣ್' ಆಗಿದ್ದು, ಅಲ್ಲಿಯೇ ದೀಪ ಬೆಳಗಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸುತ್ತಿವೆ. ಏತನ್ಮಧ್ಯೆ, ಇದು ಬ್ರಿಟಿಷರ ಕಾಲದ ಸರ್ವೇ ಕಲ್ಲಾಗಿದ್ದು, ಇಲ್ಲಿ ದೀಪ ಬೆಳಗುವ ಸಂಪ್ರದಾಯ ಹಿಂದೆಂದೂ ಇರಲಿಲ್ಲ ಮತ್ತು ಇದು ಆಗಮ ಶಾಸ್ತ್ರಕ್ಕೆ ವಿರುದ್ಧವಿದ್ದು, ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಬಳಿ ಇರುವ ದೀಪ ಮಂಟಪಂ, ಅಂದರೆ ದೀಪ ಸಿಗರಂ ಬಳಿಯೇ ಕಳೆದ 150 ವರ್ಷಗಳಿಂದ ದೀಪವನ್ನು ಹಚ್ಚಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಹಾಗೂ ತಮಿಳುನಾಡು ಸರ್ಕಾರ ವಾದಿಸುತ್ತಿವೆ.
100 ವರ್ಷಗಳ ಕಾನೂನು ಹೋರಾಟದ ಕಾಲಗಣನೆ
1915 - 1923 (ವಿವಾದದ ಆರಂಭ ಮತ್ತು ಸಿವಿಲ್ ಕೋರ್ಟ್ ತೀರ್ಪು): ಬೆಟ್ಟದ ಮಾಲೀಕತ್ವದ ವಿಚಾರವಾಗಿ ದೇವಸ್ಥಾನ ಮತ್ತು ದರ್ಗಾ ಪ್ರತಿನಿಧಿಗಳ ನಡುವೆ ವಿವಾದ ಆರಂಭವಾಯಿತು. 1923ರಲ್ಲಿ ಮಧುರೈನ ಸಿವಿಲ್ ನ್ಯಾಯಾಲಯವು ಬೆಟ್ಟದ ಬಹುಪಾಲು ಜಾಗವು ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನಕ್ಕೆ ಸೇರಿದ್ದು ಎಂದು ತೀರ್ಪು ನೀಡಿತು. ಆದರೆ, ದರ್ಗಾ ಕಟ್ಟಡ, ಅದರ ಧ್ವಜಸ್ತಂಭ, ದರ್ಗಾಕ್ಕೆ ಹೋಗುವ ಮೆಟ್ಟಿಲುಗಳು ಮತ್ತು 'ನೆಲ್ಲಿತೋಪು' (33 ಸೆಂಟ್ಸ್ ಜಾಗ) ಪ್ರದೇಶವು ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಎಂದು ಸ್ಪಷ್ಟಪಡಿಸಿತು.
1931 (ಲಂಡನ್ ಪ್ರಿವಿ ಕೌನ್ಸಿಲ್ ತೀರ್ಪು): ಮದ್ರಾಸ್ ಹೈಕೋರ್ಟ್ 1926ರಲ್ಲಿ ಈ ಬೆಟ್ಟ ಸರ್ಕಾರಕ್ಕೆ ಸೇರಿದ್ದು ಎಂದು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ದೇವಸ್ಥಾನವು ಲಂಡನ್‌ನ ಪ್ರಿವಿ ಕೌನ್ಸಿಲ್ ಮೊರೆ ಹೋಯಿತು. 1931ರಲ್ಲಿ ಪ್ರಿವಿ ಕೌನ್ಸಿಲ್, 1923ರ ಸಿವಿಲ್ ಕೋರ್ಟ್ ತೀರ್ಪನ್ನು ಎತ್ತಿಹಿಡಿದು ಬೆಟ್ಟದ ಒಡೆತನವನ್ನು ದೇವಸ್ಥಾನಕ್ಕೆ ಖಚಿತಪಡಿಸಿತು.
1994 - 1996 (ದೀಪ ಬೆಳಗುವ ವಿವಾದ ಮತ್ತು ಹೈಕೋರ್ಟ್ ಆದೇಶ): 1994ರಲ್ಲಿ 'ಹಿಂದೂ ಮುನ್ನಣಿ' ಸಂಘಟನೆಯು ಬೆಟ್ಟದ ಮೇಲ್ಭಾಗದಲ್ಲಿ ದೀಪ ಬೆಳಗಲು ಅನುಮತಿ ಕೇಳಿದಾಗ ವಿವಾದ ಭುಗಿಲೆದ್ದಿತು. 1996ರಲ್ಲಿ ಮದ್ರಾಸ್ ಹೈಕೋರ್ಟ್, ಸಾಂಪ್ರದಾಯಿಕ ಸ್ಥಳದಲ್ಲೇ ದೀಪ ಬೆಳಗಬೇಕು ಎಂದು ಹೇಳಿತು. ಒಂದು ವೇಳೆ ಭವಿಷ್ಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಬೇರೊಂದು ಸ್ಥಳವನ್ನು ಆಯ್ಕೆ ಮಾಡಲು ಬಯಸಿದರೆ, ಅದು ದರ್ಗಾ ಮತ್ತು ನೆಲ್ಲಿತೋಪು ಪ್ರದೇಶದಿಂದ ಕನಿಷ್ಠ 15 ಮೀಟರ್ ದೂರದಲ್ಲಿರಬೇಕು ಮತ್ತು ಸರ್ಕಾರದ ಪೂರ್ವಾನುಮತಿ ಪಡೆಯಬೇಕು ಎಂದು ಷರತ್ತು ವಿಧಿಸಿತ್ತು.
2014 (ಮತ್ತೆ ಅರ್ಜಿ ವಜಾ): ಆಗಮ ಶಾಸ್ತ್ರದ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ 2014ರಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ, ದೇವಸ್ಥಾನದ ಸಂಪ್ರದಾಯದಂತೆ ದೀಪ ಬೆಳಗುವುದನ್ನು ಮುಂದುವರಿಸಲು ಸೂಚಿಸಿತ್ತು.
2025 - 2026 (ಮತ್ತೆ ಭುಗಿಲೆದ್ದ ವಿವಾದ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲು): 2025ರ ಡಿಸೆಂಬರ್‌ನಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ವಿವಾದಿತ ದೀಪತೂಣ್ ಬಳಿಯೂ ದೀಪ ಬೆಳಗಿಸಲು ಅನುಮತಿ ನೀಡಿತ್ತು. ಕಾನೂನು ಸುವ್ಯವಸ್ಥೆಯ ಕಾರಣ ನೀಡಿ ಸರ್ಕಾರ ಇದನ್ನು ಜಾರಿಗೊಳಿಸಿರಲಿಲ್ಲ. ಇತ್ತೀಚೆಗೆ (ನವೆಂಬರ್ 20, 2026) ಸುಪ್ರೀಂ ಕೋರ್ಟ್, ನವೆಂಬರ್ 24 ರಂದು ಒಂದು ಬಾರಿಯ ಮಧ್ಯಂತರ ವ್ಯವಸ್ಥೆಯಾಗಿ ದೀಪತೂಣ್ ಬಳಿ ದೀಪ ಬೆಳಗಲು ಅನುಮತಿ ನೀಡಿತ್ತು. ಆದರೆ, ದೇವಸ್ಥಾನದ ಟ್ರಸ್ಟಿಗಳ ಮಂಡಳಿಯು ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ನಿರಾಕರಿಸಿದ್ದರಿಂದ ಅಲ್ಲಿ ದೀಪ ಬೆಳಗಲು ಸಾಧ್ಯವಾಗಲಿಲ್ಲ.

TVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಏತನ್ಮಧ್ಯೆ, ಈ ವಿವಾದದ ನಡುವೆಯೂ ತಿರುಪ್ಪರಂಕುಂದ್ರಂನ ಸ್ಥಳೀಯರು ದಶಕಗಳಿಂದ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಬದುಕುತ್ತಿದ್ದೇವೆ, ಈ ವಿವಾದ ಅನಗತ್ಯ ಎಂದು ಹೇಳುತ್ತಿದ್ದಾರೆ. ದೇವಸ್ಥಾನದ ಹೊರಗಿನ ಅಂಗಡಿಗಳಲ್ಲಿ ಎರಡೂ ಸಮುದಾಯಗಳವರು ವ್ಯಾಪಾರ ಮಾಡುತ್ತಾರೆ ಎಂಬುದನ್ನೂ ಸ್ಥಳೀಯರು ಉದಾಹರಣೆಯಾಗಿ ನೀಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

