ಕರಾಚಿ: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರಿಗೆ ವಕೀಲರೊಬ್ಬರು ನ್ಯಾಯಾಲಯ ಆವರಣದಲ್ಲೇ ಶೂ ತೂರಿದ ಘಟನೆ ಶುಕ್ರವಾರ ನಡೆದಿದೆ.
ಆದರೆ, ಅದೃಷ್ಟವಶಾತ್ ಆ ಶೂ ಗುರಿತಪ್ಪಿದ್ದರಿಂದ ಮುಷರ್ರಫ್ ಅವರು ಭಾರಿ ಮುಖಭಂಗವೊಂದರಿಂದ ತಪ್ಪಿಸಿಕೊಂಡಂತಾಗಿದೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ವಿಚಾರಣೆಗಾಗಿ ಮುಷರ್ರಫ್ ಸಿಂಧ್ ಹೈಕೋರ್ಟ್‌ಗೆ ಆಗಮಿಸಿದ್ದರು. ವಿಚಾರಣೆ ಮುಗಿಸಿಕೊಂಡು ಹೊರಬರುತ್ತಿದ್ದಾಗ ವಕೀಲ ತಜಮ್ಮುಲ್ ಲೋಧಿ ಏಕಾಏಕಿ ಚಪ್ಪಲಿ ಕಿತ್ತೆಸೆದು ಮುಷರ್ರಫ್ ಅವರತ್ತ ಎಸೆದಿದ್ದಾರೆ. ಈ ವೇಳೆ ಶೂ ಗುರಿತಪ್ಪಿ ಮುಷರ್ರಫ್ ಮುಂದಿದ್ದ ಗುಂಪಿನ ಮೇಲೆ ಬಿದ್ದಿದೆ. ಆ ಬಳಿಕ ಮುಷರ್ರಫ್ ಅವರನ್ನು ಸುರಕ್ಷಿತವಾಗಿ ಕೋರ್ಟ್ ಆವರಣದಿಂದ ಹೊರಕರೆದೊಯ್ದರೆ ಲೋಧಿಯನ್ನು ಬಂಧಿಸಿ ರಹಸ್ಯ ಸ್ಥಳಕ್ಕೆ ಸಾಗಿಸಲಾಯಿತು.
1999ರಲ್ಲಿ ಪಾಕ್ ಅಧ್ಯಕ್ಷ ಸ್ಥಾನಕ್ಕೇರಿದ್ದ ಮುಷರ್ರಫ್ ಅವರು ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅವರ ಅಮಾನತು ಮಾಡಿದ್ದರು. ಮುಷರ್ರಫ್ ಈ ಕ್ರಮ ಅನೇಕ ವಕೀಲರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಲೋಧಿ ಇಂತಹ ಕೃತ್ಯಕ್ಕೆ ಕೈಹಾಕಿರಬಹುದು ಎಂದು ಹೇಳಲಾಗಿದೆ.
ಪಾಕ್ ತ್ಯಜಿಸದಂತೆ ಕೋರ್ಟ್ ಸೂಚನೆ
4 ವರ್ಷಗಳ ಬಳಿಕ ಪಾಕ್‌ಗೆ ಹಿಂತಿರುಗಿರುವ ಮುಷರ್ರಫ್‌ರನ್ನು ದೇಶಬಿಟ್ಟು ತೆರಳದಂತೆ ಸಿಂಧ್ ಹೈಕೋರ್ಟ್ ಸೂಚಿಸಿದೆ. ಆದರೆ, ಬಂಧನಪೂರ್ವ ಜಾಮೀನನ್ನು ಮತ್ತೆ 15 ದಿನಗಳ ವರೆಗೆ ವಿಸ್ತರಿಸು ಬೇಡಿಕೆಗೆ ನ್ಯಾಯಾಲಯ ಅಸ್ತು ಅಂದಿದೆ.